ನಂದಿನಿ ಮೈಸೂರು
ಮೈಸೂರು: ಗ್ರಾಮ ಸಭೆ ಎಂಬುದು ಸಮಸ್ಯೆಗಳ ಪರಿಹಾರಕ್ಕೆ ವೇದಿಕೆ ಒದಗಿಸುವ ಹಳ್ಳಿಗಳ ಪಾಲಿನ ವಿಧಾನಸಭೆ ಇದ್ದಂತೆ ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಅಭಿಪ್ರಾಯಪಟ್ಟರು.
ನಂಜನಗೂಡು ತಾಲೂಕಿನ ರಾಜೂರಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ವಿಶಾಲಾರ್ಥದಲ್ಲಿ ಗ್ರಾಮ ಪಂಚಾಯಿತಿ ಎಂದರೆ ಗ್ರಾಮೀಣ ಜನತೆಯ ಸ್ಥಳೀಯ ಸರ್ಕಾರವಿದ್ದಂತೆ. ಹಾಗಾಗಿ ಗ್ರಾಮ ಪಂಚಾಯಿತಿಯೊಂದಿಗೆ ರೈತ ಕಲ್ಯಾಣ ಕೈಜೋಡಿಸುವ ಮುಖಾಂತರ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದು, ನಿಮ್ಮ ಗ್ರಾಮದ ಅಭಿವೃದ್ಧಿಗಾಗಿ ರೈತ ಕಲ್ಯಾಣ ನಿಮ್ಮೊಂದಿಗೆ ಸದಾ ಇರುತ್ತದೆ ಎಂದರು.
ಗ್ರಾಮೀಣ ಪ್ರದೇಶಗಳ ಅನ್ನದಾತರ ಸಮಸ್ಯೆಗಳ ಪರಿಹಾರಕ್ಕಾಗಿ, ರೈತ ಕಲ್ಯಾಣ ಶ್ರಮಿಸುತ್ತದೆ. ಜನರಿಂದ ಜನರಿಗಾಗಿ, ಜನರಿಗೋಸ್ಕರ ಎಂಬ ಪ್ರಜಾಪ್ರಭುತ್ವದ ಆಶಯದೊಂದಿಗೆ, ತಳಮಟ್ಟದ ಕಟ್ಟಕಡೆಯ ಸಮಾಜದ ವ್ಯಕ್ತಿಗೂ ಅಗತ್ಯ ಸೌಲಭ್ಯಗಳು ತಲುಪಿಸಲು ಜಾರಿಗೆ ತಂದಿರುವ ಪ್ರಜಾಪ್ರಭುತ್ವದ ನಿಜವಾದ ಚೈತನ್ಯವು ಮೂಲೆಗುಂಪಾಗಿದೆ ಎಂಬುದು ಸದ್ಯದ ವಿಪರ್ಯಾಸದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ ಚಂದನ್ ಗೌಡ ಅವರು, ಗ್ರಾಮೀಣ ಭಾಗದ ಜನರ ಇಚ್ಛಾಶಕ್ತಿಗಾಗಿ ಸರ್ಕಾರ ಹೆಚ್ಚಿನ ಒತ್ತು ಕೊಡಬೇಕು. ಮಹಾತ್ಮ ಗಾಂಧೀಜಿ ಕಂಡಂತ ಕನಸು ಗ್ರಾಮೀಣಾಭಿವೃದ್ಧಿಯ ಮುಖಾಂತರ ದೇಶ ಅಭಿವೃದ್ಧಿಯಾಗಬೇಕು ಎಂಬ ಗಟ್ಟಿ ನಿಲುವು ನಮ್ಮಲ್ಲಿ ಮೂಡಿ ಬರಬೇಕು ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳನ್ನ ಸಂಪೂರ್ಣವಾಗಿ ಗ್ರಾಮೀಣ ಭಾಗದ ರೈತ ಬಾಂಧವರು ಬಳಸಿಕೊಂಡು ತಮ್ಮ ಮತ್ತು ತಮ್ಮ ಕುಟುಂಬಗಳ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಕೊಡಬೇಕು.ಸಾಂಪ್ರದಾಯಿಕ ಕೃಷಿ ಮುಖಾಂತರ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆಯನ್ನ ಬೆಳೆದು ಆರ್ಥಿಕ ಅಭಿವೃದ್ಧಿ ಕಡೆಗೆ ಮುಂದಾಗಬೇಕು. ನಿಮ್ಮ ಕೃಷಿ ಅಭಿವೃದ್ಧಿಗೆ ಬೇಕಾದ ಎಲ್ಲಾ ಕೃಷಿ ಅಗತ್ಯತೆಗಳನ್ನು ಸಬ್ಸಿಡಿ ರೂಪದಲ್ಲಿ ಪೂರೈಸಲು ರೈತ ಕಲ್ಯಾಣ ಸಜ್ಜಾಗಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ರಾಜೂರಿನಲ್ಲಿರುವ ರೈತರ ಮುಖ್ಯ ಸಮಸ್ಯೆಗಳಾದ ಕಾಡು ಪ್ರಾಣಿಗಳ ಹಾವಳಿ, ಗ್ರಾಮಕ್ಕೆ ಬಸ್ಸಿನ ಸೌಕರ್ಯ ಹಾಗೂ ಅಗತ್ಯ ಸಮಸ್ಯೆಗಳ ಪರಿಹಾರ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ರೈತ ಕಲ್ಯಾಣ ಸಂಘದ ಪದಾಧಿಕಾರಿಗಳಾದ ಹೇಮಂತ್,ಹರೀಶ್, ಮೂರ್ತಿ, ಕಂದಸ್ವಾಮಿ, ಪ್ರತಾಪ್, ಉಮೇಶ್,ಮಹದೇವ್, ನಂದೀಶ್, ಶಿವಲಿಂಗ, ಬಸವರಾಜ್, ಶಂಕರ್, ಶಿವಣ್ಣ, ದಾಸೆಗೌಡ ಹಾಗೂ ಊರಿನ ಯಜಮಾನರು, ಮುಖಂಡರು ರೈತರು ಭಾಗವಹಿಸಿದ್ದರು.
——————————–
‘ರೈತರು ಸಾಂಪ್ರದಾಯಿಕ ಕೃಷಿ ಮುಖಾಂತರ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆಯನ್ನ ಬೆಳೆದು ಆರ್ಥಿಕ ಅಭಿವೃದ್ಧಿ ಕಡೆಗೆ ಮುಂದಾಗಬೇಕು. ನಿಮ್ಮ ಕೃಷಿ ಅಭಿವೃದ್ಧಿಗೆ ಬೇಕಾದ ಎಲ್ಲಾ ಕೃಷಿ ಅಗತ್ಯತೆಗಳನ್ನು ಸಬ್ಸಿಡಿ ರೂಪದಲ್ಲಿ ಪೂರೈಸಲು ರೈತ ಕಲ್ಯಾಣ ಸಜ್ಜಾಗಿದೆ.
ಭೂಮಿಪುತ್ರ ಸಿ.ಚಂದನ್ ಗೌಡ,
ರಾಜ್ಯಾಧ್ಯಕ್ಷರು, ರೈತ ಕಲ್ಯಾಣ ಸಂಘ