ಗಂಗಾಧರ್ ಗೌಡ ಸೇರಿ ಮೂವರಿಂದ ನಾಮಪತ್ರ ಸಲ್ಲಿಕೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ರಂಗೇರಿದ ಚುನಾವಣಾ ಕಣ

ಮೈಸೂರು:16 ನವೆಂಬರ್ 2021

ನಂದಿನಿ

ರಾಜ್ಯ ಒಕ್ಕಲಿಗರ ಸಂಘದ ಮೈಸೂರು-ಚಾಮರಾಜನಗರ-ನೀಲಗಿರಿ ಜಿಲ್ಲೆಗಳನ್ನೊಂಡ ನಿರ್ದೇಶಕರ ಸ್ಥಾನದ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದ್ದು, ಮೊದಲ ದಿನದಂದು ಮೂರು ನಾಮಪತ್ರಗಳು ಸಲ್ಲಿಕೆಯಾಯಿತು.
ಸೋಮವಾರ ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಭವನದಲ್ಲಿ ಚುನಾವಣಾಧಿಕಾರಿ ಜಿ.ಆರ್.ವಿಜಯಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.

ಸಹಕಾರ ಸಂಘಗಳಿಂದ ಸಹಕಾರ ಭವನದಲ್ಲಿ ಚುನಾವಣಾ ಕೇಂದ್ರವನ್ನು ತೆರೆದು ಚುನಾವಣಾಧಿಕಾರಿಯನ್ನಾಗಿ ಉಪ ನಿಬಂಧಕ ಜಿ.ಆರ್.ವಿಜಯಕುಮಾರ್ ಅವರನ್ನು ನೇಮಿಸಿದ್ದು,ಅದರಂತೆ ಅಧಿಸೂಚನೆ ಹೊರಡಿಸುವ ಮೂಲಕ ನಾಮಪತ್ರ ಪ್ರಕ್ರಿಯೆ ಆರಂಭವಾಯಿತು.
ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಗೆ ನಾಡಪ್ರಭು ಕೆಂಪೇಗೌಡ ಯುವ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ಜಿ.ಗಂಗಾಧರ್ ಅವರು ನಾಮಪತ್ರ ಸಲ್ಲಿಸಿದರು. ಮೊದಲಿಗೆ ಚಾಮುಂಡಿಬೆಟ್ಟ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಪೂಜೆಸಲ್ಲಿಸಿದ ಬಳಿಕ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಅಪಾರ ಬೆಂಬಲಿಗರೊಂದಿಗೆ ವಿಶೇಷ ಪೂಜೆ ಮಾಡಿಸಿದರು. ನಂತರ, ಅಪಾರ ಬೆಂಬಲಿಗರೊಂದಿಗೆ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ,ಬಸವೇಶ್ವರ ವೃತ್ತ,ಚಾಮರಾಜ ಜೋಡಿ ರಸ್ತೆಯ ಮೂಲಕ ಸಹಕಾರ ಭವನ ತಲುಪಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಮುಖಂಡರಾದ ಕೊಪ್ಪಲು ದಿನೇಶ್, ತೇಜಸ್ ಲೋಕೇಶ್‌ಗೌಡ,ಎನ್.ಎಂ.ರಾಮು ಇನ್ನಿತರರು ಹಾಜರಿದ್ದರು.

ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಗಂಗಾಧರ್, ರಾಜ್ಯ ಒಕ್ಕಲಿಗರ ಸಂಘದಲ್ಲಿ ರಚನಾತ್ಮಕ ಕಾರ್ಯಗಳನ್ನು ನಡೆಸುವ ಕುರಿತು ಹತ್ತು ಅಂಶಗಳ ಪ್ರಣಾಳಿಕೆಯನ್ನು ಹೊರ ತಂದಿದ್ದೇನೆ.ಮೈಸೂರು ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಜತೆಗೆ ಆಸ್ಪತ್ರೆ ಆರಂಭಿಸಿ ಸಮಾಜದ ಬಡವರಿಗೆ ಶೇ.೨೫ರಷ್ಟು ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು. ಪ್ರತಿಯೊಂದಕ್ಕೂ ಬೆಂಗಳೂರು ಕೇಂದ್ರ ಕಚೇರಿಗೆ ಅಲೆಯಬೇಕಿರುವ ಕಾರಣ ಮೈಸೂರಿನಲ್ಲಿ ಒಂದು ಆಡಳಿತ ಕಚೇರಿ ತೆರೆಯುವುದು. ಕುವೆಂಪು, ಕೆಂಪೇಗೌಡ,ಕೆ.ಎಚ್.ರಾಮಯ್ಯ ಅವರನ್ನು ಆಚರಣೆ ಮಾಡಲಾಗುವುದು. ನಮ್ಮ ಟ್ರಸ್ಟ್ ವತಿಯಿಂದ ಎಸ್‌ಎಸ್‌ಎಲ್‌ಸಿ,ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು. ಕಳೆದ ಬಾರಿ ಅತ್ಯಲ್ಪ ಮತಗಳ ಅಂತರದಿಂದ ಸೋತಿದ್ದೇನೆ. ಹೀಗಿದ್ದರೂ,ಸಮಾಜದ ಬಡವರ ನೋವು,ಸಮಸ್ಯೆಗಳಿಗೆ ಸ್ಪಂದಿಸಿಕೊಂಡು ಬಂದಿದ್ದೇನೆ. ಸಮಾಜದ ಏಳಿಗೆಗೆ ಅವಕಾಶ ನೀಡುವಂತೆ ಕೋರಿದ್ದೇನೆ. ಮೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.

-ಗಂಗಾಧರ್ ಗೌಡ ಅಭ್ಯರ್ಥಿ

ಒಕ್ಕಲಿಗರ ಸಂಘದ ೩೫ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೈಸೂರು ಭಾಗದಿಂದ ಮೂವರು ನಿರ್ದೇಶಕರ ಆಯ್ಕೆಗೆ ಮತದಾನ ನಡೆಯಬೇಕಿದೆ.

Leave a Reply

Your email address will not be published. Required fields are marked *