ಹುಣಸೂರು:13 ಆಗಸ್ಟ್ 2021
ಹುಣಸೂರಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಪ್ರೊಡಕ್ಷನ್’ರವರ ಕುಮಾರ್ ಅರಸೇಗೌಡ ಮಿತ್ರಬಳಗ’ದ “ಗಾಳಿ…. ಹೇಳಿದ್ದೆಲ್ಲಾ ಸತ್ಯ” ೧೫ನೇ ಕಿರುಚಿತ್ರಕ್ಕೆ ಶಾಸಕ ಎಚ್.ಪಿ. ಮಂಜುನಾಥ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಲೆ,ಸಾಹಿತ್ಯ,ರಂಗಭೂಮಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ಅವು ನಶಿಸಿಹೋಗದಂತೆ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ, ಇಂದಿನ ಕೋವಿಡ್ ಸಂದರ್ಭದಲ್ಲಿ ಕಿರುಚಿತ್ರಗಳು ಪ್ರಾಮುಖ್ಯತೆ ಗಳಿಸುತ್ತಿವೆ. ಕುಮಾರ್ ಅರಸೇಗೌಡರು ರಂಗಭೂಮಿ, ಚಲನಚಿತ್ರಗಳಲ್ಲಿ ನಟಿಸುವ ಜೊತೆಗೆ ಈಗಾಗಲೇ ಕಿರುಚಿತ್ರವಾಗಿದ್ದು, ಹನಗೋಡು ಭರತ್‌ಕುಮಾರ್ ನಾಯಕ ನಟರಾಗಿ ನಟಿಸುತ್ತಿದ್ದು, ಹಿಮ ನಿರಂತರ ನಾಯಕಿಯಾಗಿದ್ದಾರೆ. ಹಲವಾರು ಯುವ ಪ್ರತಿಭೆಗಳಿಗೆ ಕುಮಾರ್‌ಅರಸೇಗೌಡರು ಅವಕಾಶ ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಹುಣಸೂರು ಕೃಷ್ಣಮೂರ್ತಿ, ದ್ವಾರಕೀಶ್, ಯೋಗೇಶ್ ಹುಣಸೂರು, ದೊರೆ ಭಗವಾನ್‌ರಂತೆ ಕುಮಾರ್ ಅರಸೇಗೌಡರೂ ಹೆಸರುವಾಸಿಯಾಗಿಲಿ. ಕಿರುಚಿತ್ರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ ಎಂದು ಹಾರೈಸಿದರು.
ನಗರಸಭೆ ಅಧ್ಯಕ್ಷೆ ಅನುಷಾ ರಘು ಕ್ಯಾಮರಾ ಚಾಲನೆ ಮಾಡಿ ’ಗಾಳಿ” ಕಿರುಚಿತ್ರ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಮುಹೂರ್ತ ಸಮಾರಂಭದಲ್ಲಿ ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ.ಲೋಕೇಶ್, ಇ ಚಾನಲ್ ಮುಖ್ಯಸ್ಥ ನಾಗರಾಜು, ’ಐ ಓ’ ಕಿರುಚಿತ್ರದ ನಾಯಕ ರಾಘವಶೆಟ್ಟಿ, ಭೋಜ ಸೌಂಡ್ಸ್ ಮಾಲಿಕ ಭೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ’ಗಾಳಿ’ ಕಿರುಚಿತ್ರದ ನಿರ್ದೇಶಕ ವೈಡ್ ಆಂಗಲ್ ಶೈಲೇಶ್, ನಿರ್ಮಾಪಕ ಹಾಗೂ ನಟ ಕುಮಾರ್‌ಅರಸೇಗೌಡ, ನಿರ್ದೇಶಕ ಆದಿತ್ಯಲೋಕೇಶ್, ಕಿರುಚಿತ್ರದ ನಾಯಕ ಹನಗೋಡು ಭರತ್‌ಕುಮಾರ್, ನಾಯಕಿ ಹಿಮನಿರಂತರ, ಪೋಷಕ ನಟರಾದ ಆನಂದ್‌ಬಾಬು, ಮಮತ ಮೈಸೂರು, ಭವ್ಯ ಬಿ.ಸಿ. ಅಖಿಲ್ ನಾಚಪ್ಪ, ಬಸವರಾಜ್ ಮೈಸೂರು, ಇದ್ದರು.