ಮೈಸೂರು:8 ಅಕ್ಟೋಬರ್ 2021
ನ@ದಿನಿ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಗಜಪಡೆಗಿಂದು ಅಂತಿಮ ಹಂತದ ಫಿರಂಗಿ ತಾಲೀಮು ನಡೆದಿದ್ದು,ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಾಲೀಮನ್ನ ವೀಕ್ಷೀಸಿದರು.
ಅರಮನೆ ಬಳಿ ದಸರಾ ಗಜಪಡೆಗೆ ಇಂದು ನಡೆದ ಕುಶಾಲತೋಪು ತಾಲೀಮು ವೀಕ್ಷಣೆ ಬಳಿಕ ಮಾತನಾಡಿದ ಸಚಿವರು,ಆನೆಗಳಿಗೆ ಕುಶಾಲತೋಪು ತಾಲೀಮನ್ನು ನಮ್ಮ ಅಧಿಕಾರಿಗಳು ಅಚ್ಚುಕಟ್ಟಾಗಿ ನೀಡಿದ್ದಾರೆ. ಪ್ರಾಣಾಪಾಯವನ್ನು ಲೆಕ್ಕಿಸದೆ ತರಬೇತಿ ನೀಡುತ್ತಿದ್ದು ಅವರಿಗೆ ವಿಮೆ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಆನೆಗಳಿಗೆ ಪ್ರಾಮಾಣಿಕ ತರಬೇತಿ ನೀಡುತ್ತಿದ್ದಾರೆ ಎಂದರು.
ದಸರಾ ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನೀಡಿದ ದಸರಾ ಟೂರ್ ಪ್ಯಾಕೇಜ್ ಸಲಹೆ ಕುರಿತು ದಸರಾ ಮುಕ್ತಾಯದ ಬಳಿಕ ಮುಖ್ಯಮಂತ್ರಿಗಳು ಸಭೆ ನಡೆಸಿ ಪರಾಮರ್ಶಿಸಲಿದ್ದಾರೆ ಎಂದರು.
ಚಿತ್ರನಗರಿ ಮೈಸೂರಿಗೆ ಬಂದಿದ್ದು ಅದನ್ನು ಅನುಷ್ಠಾನ ಮಾಡುವುದು, ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ, ಎಸ್.ಎಂ.ಕೃಷ್ಣ ಅವರು ನೀಡಿದ ಟೂರಿಸಂ ಕುರಿತು ಕಾರ್ಯಕ್ರಮ ರೂಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಟೂರಿಸಂಗೆ ಸಂಬಂಧಿಸಿದಂತೆ ಮೈಸೂರು, ಚಾಮರಾಜನಗರ ಸುತ್ತಮುತ್ತಲಿನ ಅಧಿಕಾರಿಗಳು ವರದಿ ಸಿದ್ಧಪಡಿಸಲಿದ್ದು ಅವರ ಜೊತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ದಸರಾ ವೀಕ್ಷಣೆಗೆ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್ ನಿಯಮ ಮೀರುವಂತಿಲ್ಲ. ಸಾರ್ವಜನಿಕರು ಫೇಸ್ ಬುಕ್, ಯೂಟ್ಯೂಬ್, ವರ್ಚ್ಯುವಲ್ ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ಗುರುವಾರ 70 ಸಾವಿರಕ್ಕೂ ಅಧಿಕ ಜನರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾರ್ಯಕ್ರಮಗಳನ್ನು ವೀಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಐಟಿ ದಾಳಿಗೂ ಯಡಿಯೂರಪ್ಪ ಅವರಿಗೂ ಸಂಬಂಧವಿಲ್ಲ. ಲೆಕ್ಕಪತ್ರಗಳ ಬಗ್ಗೆ ಐಟಿ ಇಲಾಖೆಯವರು ನೋಡಿಕೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ರಾಜೀವ್, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಧ್ಯಕ್ಷ ಅಪ್ಪಣ್ಣ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಡಿಸಿಪಿ ಗೀತಾ ಪ್ರಸನ್ನ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.