ನಂದಿನಿ ಮೈಸೂರು
ಸರಸ್ವತಿ ಒಲಿದರೆ ಸರ್ವಸ್ವವೂ ದೊರೆಯುತ್ತದೆ : ಸಾಹಿತಿ ಬನ್ನೂರು ರಾಜು
ಮೈಸೂರು: ತಾಯಿ ಸರಸ್ವತಿ ಯನ್ನು ಅಂದರೆ ವಿದ್ಯೆ ಎಂಬುದನ್ನು ಒಮ್ಮೆ ಒಲಿಸಿ ಕೊಂಡು ವಿದ್ಯಾವಂತರಾದರೆ ಸಾಕು ಸಾಯುವ ತನಕ ಸುಖ ವಾಗಿರಬಹುದಾಗಿದ್ದು ವಿದ್ಯೆಯಿಂದ ನಮಗೆ ಸರ್ವಸ್ವವೂ ದೊರೆಯುತ್ತದೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ನ್ಯೂ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ.ಬನುಮಯ್ಯ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿದ್ಯಾಧಿದೇವತೆಯಾದ ಶಾರದಾ ಪೂಜೆ ಹಾಗೂ ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯೆಯ ಅಧಿದೇವತೆ, ಜ್ಞಾನ ದೇವತೆ, ಸರ್ವರ ಕುಲದೇವತೆ ಸರಸ್ವತಿಯು ಯಾವುದೇ ರೀತಿಯ ಜಾತಿ, ಧರ್ಮ, ಮತ, ಪಂಥ, ವರ್ಗ, ಮೇಲು, ಕೀಳು, ಬಡವ, ಬಲ್ಲಿದರೆಂಬ ಭೇದ ಭಾವವಿಲ್ಲದೆ ಆಸಕ್ತಿಯಿಂದ ಕಲಿಯುವ ಪ್ರತಿಯೊಬ್ಬರಿಗೂ ಒಲಿಯುತ್ತಾಳೆಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಭವಿಷ್ಯದ ದೃಷ್ಟಿಯಿಂದ ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಬೇಕು.ಹಾಗಾಗಿ ಮೊದಲು ಪರೀಕ್ಷಾರ್ಥಿ ವಿದ್ಯಾರ್ಥಿಗಳು ಪರೀಕ್ಷೆ ಎಂಬ ಭಯದಿಂದ ಹೊರಬರಬೇಕು. ಪರೀಕ್ಷೆಯ ಭಯವೆಂಬುದು ಕಲಿತಿರುವುದನ್ನೆಲ್ಲಾ ಬರೆಯುವಲ್ಲಿ ಮರೆಸುವ ಅಪಾಯವಿದೆ. ಪರೀಕ್ಷೆ ಎಂಬುದು ವರ್ಷವಿಡೀ ಓದಿದ್ದನ್ನು ವರ್ಷದ ಕೊನೆಯಲ್ಲಿ ಒಪ್ಪಿಸಿ ಫಲಿತಾಂಶ ಪಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ. ಇದನ್ನು ವಾರ್ಷಿಕ ಹಬ್ಬದಂತೆ ಖುಷಿ ಖುಷಿಯಾಗಿ ಸ್ವೀಕರಿಸಿ, ಸಂಭ್ರಮಿಸಿ ಪರೀಕ್ಷೆಯನ್ನು ಎದುರಿಸಿ ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ಈ ಪರೀಕ್ಷೆಯ ಮೂಲಕ ತಾವೇ ಬರೆದುಕೊಳ್ಳಬೇಕೆಂದು ಹೇಳಿದರು.
ಇದೇ ವೇಳೆ ತಮ್ಮ “ಬೆವರಿನ ಬೆಲೆ” ಮಕ್ಕಳ ಕಥಾ ಸಂಕಲನ ಕೃತಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಯ ಗೌರವಕ್ಕೆ ಭಾಜನರಾಗಿರುವ ಸಾಹಿತಿ ಬನ್ನೂರು ಕೆ.ರಾಜು ಅವರನ್ನು ವಿದ್ಯಾ ಸಂಸ್ಥೆಯ ವತಿಯಿಂದ ಮುಖ್ಯ ಶಿಕ್ಷಕ ಎಚ್. ಎಸ್. ತಿಪ್ಪೇಸ್ವಾಮಿ ಅವರು ಅಭಿನಂದಿಸಿ ಗೌರವಿಸಿದರಲ್ಲದೆ ಖ್ಯಾತ ಶಿಕ್ಷಣತಜ್ಞ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ ಅವರನ್ನೂ ಸನ್ಮಾನಿಸಿದರು.
ಶಿಕ್ಷಕಿ ಕೆ. ಎಂ. ಮಂಗಳ ಗೌರಮ್ಮ ಮಾತನಾಡಿ, ಭಯವನ್ನು ಬಿಟ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಬಗೆಯ ಬಗ್ಗೆ ಕೂಲಂಕಷವಾಗಿ ಸುಧೀರ್ಘವಾಗಿ ಮಾತನಾಡಿ ಈ ಹಿಂದಿನಂತೆಯೇ ಶಾಲೆಗೆ ಒಳ್ಳೆ ಫಲಿತಾಂಶ ತರುವಂತೆ ಹಿತವಚನ ಹೇಳಿದರು. ಕಾವೇರಿ ಬಳಗದ ಅಧ್ಯಕ್ಷೆ, ಶಿಕ್ಷಣ ತಜ್ಞೆ ಎನ್.ಕೆ.ಕಾವೇರಿಯಮ್ಮ ಅವರು ವಿದ್ಯಾರ್ಥಿಗಳಿಗೆ ಲೇಖನಿಗಳನ್ನು ವಿತರಿಸಿ ಶುಭ ಹಾರೈಸಿದರು.ವಿದ್ಯಾರ್ಥಿನಿಯರಾದ ಅಮೂಲ್ಯ,ಧನಲಕ್ಷ್ಮಿ , ಸಿಂಧುಮೆನಾ, ಕೀರ್ತನಾ, ಲಕ್ಷ್ಮಿ ಅವರುಗಳು ಮಾತನಾಡಿ ತಮಗೆ ವಿದ್ಯೆ ಕಲಿಯಲು ಅವಕಾಶ ಕಲ್ಪಿಸಿದ ಶಾಲೆ ಮತ್ತು ತಮಗೆ ವಿದ್ಯೆ ಕಲಿಸಿದ ಗುರುಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ಮುಖ್ಯ ಶಿಕ್ಷಕ ಹೆಚ್. ಎಸ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಚ್. ಪಿ. ಹರೀಶ್, ಕೆ.ಪಿ.ಪ್ರದೀಪ್, ಜಿ.ಟಿ. ಶ್ರೀನಿವಾಸ ಮೂರ್ತಿ,ಶಿವು, ಸತೀಶ್, ಚೇತನ್, ರಮೇಶ್ ಹಾಗೂ ನಂಜನಗೂಡು ಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿಂಧುಮೆನಾ ಮತ್ತು ತಂಡದಿಂದ ಪ್ರಾರ್ಥನೆಯೊಡನೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಪಿ. ಹರೀಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಶ್ರೀನಿವಾಸ ಮೂರ್ತಿಯವರು ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿನಿ ಜಯಲಕ್ಷ್ಮಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.