ಶಿಕ್ಷಣ ಭವಿಷ್ಯದ ಬದುಕನ್ನು ರೂಪಿಸುತ್ತದೆ: ಸಾಹಿತಿ ಬನ್ನೂರು ರಾಜು

 

ನಂದಿನಿ ಮೈಸೂರು

ಶಿಕ್ಷಣ ಭವಿಷ್ಯದ ಬದುಕನ್ನು ರೂಪಿಸುತ್ತದೆ: ಸಾಹಿತಿ ಬನ್ನೂರು ರಾಜು

ಮೈಸೂರು: ಶಿಕ್ಷಣವೆಂಬುದು ವ್ಯಕ್ತಿತ್ವದ ಜೊತೆಗೆ ಭವಿಷ್ಯದಲ್ಲಿ ಗೌರವಯುತವಾದ ಸುಂದರ ಬದುಕನ್ನು ರೂಪಿಸಿ ಕೊಡುತ್ತದೆ ಯಾದ್ದರಿಂದ ವಿದ್ಯಾರ್ಥಿಗಳು ಸಂಪೂರ್ಣವಾಗಿ ಶಿಕ್ಷಣವನ್ನು ಕೈವಶ ಮಾಡಿಕೊಳ್ಳಬೇಕೆಂದೂ, ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇದಾವುದೂ ಕಷ್ಟವಲ್ಲವೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ರಾಮಾನುಜಾ ರಸ್ತೆ ಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬ ಮಂದಿರದಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಪ್ರಸ್ತುತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಿಸಿ ಉನ್ನತ ಶಿಕ್ಷಣದ ತನಕವೂ ಪ್ರತಿಯೊಂದು ಹಂತದಲ್ಲೂ ಕಲಿಕೆಯಲ್ಲಿ ಹೆಚ್ಚೆಚ್ಚು ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು ಹಾಗೂ ಅದನ್ನು ಹಾಗೆಯೇ ಉಳಿಸಿಕೊಂಡಲ್ಲಿ ಆಗ ಸಾಧನೆ ಎಂಬುದು ಶಿಕ್ಷಣದ ಮೂಲಕ ಕಲಿಕಾಸಕ್ತಿಯಲ್ಲಿ ಮುಂದಿರುವ ಸಾಧಕರ ಕೈವಶವಾಗುತ್ತದೆಂದರು.
ಆದರೆ ವಿದ್ಯಾರ್ಥಿ ದಿಸೆಯಲ್ಲಿ ಯಾರು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೋ ಅವರು ವಿದ್ಯಾರ್ಥಿ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಹಾಗೆಯೇ ಭವಿಷ್ಯದಲ್ಲಿ ಎಲ್ಲದರಲ್ಲೂ ವಿಫಲರಾಗುತ್ತಾರೆ. ಇದಾಗಬಾರದೆಂದರೆ ವಿದ್ಯಾರ್ಥಿಗಳು ಕಲಿಯುವಿಕೆಯಲ್ಲಿ ಎಂದಿಗೂ ಆಸಕ್ತಿ ಕಳೆದು ಕೊಳ್ಳಬಾರದು.ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎನ್ನುತ್ತಾರೆ. ಈ ಮಾತು ಅಕ್ಷರಶಃ ಸತ್ಯ. ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲೂ ಸಾರ್ಥಕವಾಗಿ ಅವರ ಜೀವನ ಚಿನ್ನದಂತಾಗಬೇಕಾದರೆ ಶೈಕ್ಷಣಿಕ ಸಾಧನೆಯೇ ಮಾನದಂಡವಾಗುತ್ತದೆ. ಕಾಲಕ್ಕೆ ತುಂಬಾ ಮಹತ್ವವಿದೆ. ಕಣ್ಣಿಗೆ ಕಾಣದಂತೆ ತನ್ನ ಪಾಡಿಗೆ ತಾನು ನಿಲ್ಲದೆ ಓಡುವ ಕಾಲಕ್ಕೆ ಬೆಲೆ ಕಟ್ಟಲಾಗದು. ಕಳೆದು ಹೋದ ಕಾಲ ಎಂದೂ ಮರಳದು. ಆದ್ದರಿಂದ ವಿದ್ಯಾರ್ಥಿಗಳು ಕಾಲದ ಮಹತ್ವವನ್ನೂ ಅರ್ಥ ಮಾಡಿಕೊಂಡು ಸಿಗುವ ಕಾಲವನ್ನು ಅದು ಕಳೆದು ಹೋಗುವ ಮುನ್ನ ಕಿಂಚಿತ್ತೂ ವ್ಯರ್ಥ ಮಾಡದೆ ಕಲಿಕೆಗಾಗಿಯೇ ಅದನ್ನು ಮೀಸಲಿಟ್ಟು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ದೇಶದ ಸತ್ಪ್ರಜೆಗಳಾಗಬೇಕು. ಅಷ್ಟೇ ಅಲ್ಲ , ತನ್ಮೂಲಕ ಹುಟ್ಟಿದ ಊರಿಗೆ, ಜನ್ಮ ಕೊಟ್ಟ ತಂದೆ ತಾಯಿಗಳಿಗೆ, ಕಲಿತ ಶಾಲೆಗೆ, ಕಲಿಸಿದ ಗುರುವರ್ಯರಿಗೆ ಕೀರ್ತಿ ತರುವಂತಾಗಿ ಪ್ರತಿಯೊಬ್ಬರಿಗೂ ಮಾದರಿಯಾಗಬೇಕೆಂದ ಅವರು, ಇದಕ್ಕೆಲ್ಲಾ ಜ್ಞಾನವೇ ಮೂಲವಾಗಿದ್ದು ಇದನ್ನು ಗಳಿಸಲು ಪಠ್ಯಪುಸ್ತಕ ಮತ್ತು ಪಠ್ಯೇತರ ಪುಸ್ತಕಗಳೆಲ್ಲವನ್ನೂ ಮಸ್ತಕಕ್ಕೆ ತುಂಬಿಸಿ ಕೊಳ್ಳಬೇಕು. ಹೆಚ್ಚೆಚ್ಚು ಅಧ್ಯಯನ ಮಾಡಿದಷ್ಟು, ಓದಿದಷ್ಟು ವಿದ್ಯಾರ್ಥಿಗಳಾದ ನಿಮ್ಮ ಜ್ಞಾನದ ಪರಿಧಿ ವಿಸ್ತಾರವಾಗುತ್ತದೆಂದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಉಪಯುಕ್ತವಾಗುತ್ತದೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಪ್ರಸಕ್ತ ವರ್ಷದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿರುವ ನಗರದ ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳಾದ ಧನುಷ್ ಕೆ. ಅರಸ್, ಎಸ್.ಪವಿತ್ರಾ, ಪುಣ್ಯಾ, ಹರ್ಷಿಣಿ, ಪ್ರಧಾಯಿನಿ, ಪಿ.ತಾನ್ಯಾ, ನಿಶಾಂತ್ ಪಿ.ಶಾಸ್ತ್ರಿ , ಮಹಮದ್ ಸುಹೇಲ್,ಲತಾಶ್ರೀ, ಎಸ್.ಧನುಶ್, ಕಶ್ಯಪ್, ಎಸ್.ಲಕ್ಷ್ಮೀ, ಸಿ. ಪೂಜಾ, ವಿದ್ಯಾಶ್ರೀ, ಅಭಿನವ ರವಿಕುಮಾರ್, ಬೇಬಿಹಾಜಿರಾ, ಸಂಜಯ್, ಪೂಜಾ, ಗಣೇಶ, ಎಂ.ಕೃಷ್ಣ, ಆರ್.ನವೀನ್ ಅವರುಗಳಿಗೆ ಸಮಾಜ ಸೇವಕ ಯುವ ಉದ್ಯಮಿ ವೆಂಕಟೇಶ್ ಪ್ರಾಯೋಜಕತ್ವದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗಣ್ಯರು ಗೌರವಿಸಿದರು. ನಂತರ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ದ್ವಾರಕಿ ಅವರು,ವಿದ್ಯಾರ್ಥಿಗಳು ವ್ಯಾಸಂಗದ ಮಾರ್ಗದಲ್ಲಿ ಹೇಗಿರಬೇಕೆಂಬುದರ ಬಗ್ಗೆ ಹಿತವಚನ ಹೇಳಿದರು.

ಇದೇ ವೇಳೆ ವಿಶ್ರಾಂತ ಶಿಕ್ಷಕ ಹಾಗೂ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಗೋಪಾಲ ಸ್ವಾಮಿ ದಂಪತಿಯನ್ನು ಗೌರವಿಸಲಾಯಿತು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ರೀಶಿರಡಿ ಸಾಯಿ ಬಾಬಾ ಮಂದಿರದ ಗೋಪಾಲಸ್ವಾಮಿ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಚಿತ್ರಕಲಾ ಶಿಕ್ಷಕ ಮನೋಹರ್ , ವಿಶ್ರಾಂತ ಶಿಕ್ಷಕ ರಾಜು ಶೆಟ್ಟಿ, ಲೇಖಕ ವಿ.ನಾರಾಯಣರಾವ್, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *