ನಂದಿನಿ ಮೈಸೂರು
ನಾಳೆ ಬೆಳಗ್ಗೆ ಸರ್ಕಾರ ಬಜೆಟ್ ಮಂಡನೆ ಮಾಡುತ್ತಿದ್ದು, ಇದು ಈ ಸರ್ಕಾರದ ಕೊನೆ ಬಜೆಟ್ ಹಾಗೂ ಪ್ರಣಾಳಿಕಾ ಬಜೆಟ್ ಆಗಿದೆ. ಈ ಸರ್ಕಾರ ಕಳೆದ ವರ್ಷ ಮಾಡಿದ ಬಜೆಟ್ ಕೇವಲ ಘೋಷಣೆ, ಭರವಸೆ, ಭಾಷಣಕ್ಕೆ ಸೀಮಿತವಾಗಿತ್ತು. ಡಬಲ್ ಇಂಜಿನ್ ಸರ್ಕಾರ ವೇಗವಾಗಿ ರಾಜ್ಯದ ಅಭಿವೃದ್ಧಿ ಮಾಡಲಿದೆ ಎಂದು ಭಾವಿಸಿದ್ದೆವು. ಆದರೆ ಈ ಇಂಜಿನ್ ಆರಂಭವಾಯಿತೇ ಹೊರತು, ಮುಂದಕ್ಕೆ ಹೋಗಲೇ ಇಲ್ಲ. ಬರೀ ಹೊಗೆ ಬಂತು ಎಂದು ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಕಳೆದ ವರ್ಷದ ಬಜೆಟ್ ಪುಸ್ತಕ ತೆಗೆದುನೋಡಿ. ಅದರಲ್ಲಿ ಜನರಿಗೆ ಕೊಟ್ಟ ಮಾತಿನಲ್ಲಿ ಎಷ್ಟು ಅನುಷ್ಠಾನಕ್ಕೆ ತಂದಿದ್ದಾರೆ ಎಂಬುದನ್ನು ವಿಶ್ಲೇಷಣೆ ಮಾಡಿ. ಬೊಮ್ಮಾಯಿ ಅವರು ಹೊಸ ಬಜೆಟ್ ಮಂಡಿಸುವ ಮುನ್ನ ಕಳೆದ ವರ್ಷದ ಬಜೆಟ್ ಜಾರಿ ಕುರಿತು ಇಂದು ಸಂಜೆ ಒಳಗಾಗಿ ರಿಪೋರ್ಟ್ ಕಾರ್ಡ್ ನೀಡಬೇಕು. ಆಮೂಲಕ ಎಷ್ಟರ ಮಟ್ಟಿಗೆ ನುಡಿದಂತೆ ನಡೆದಿದ್ದಾರೆ ಎಂದು ತಿಳಿಸಬೇಕು. ಈ ಸರ್ಕಾರ ಮೂರು ಬಜೆಟ್ ಮಂಡನೆ ಮಾಡಿದ್ದು, ಯಾವುದನ್ನೂ ಸರಿಯಾಗಿ ಜಾರಿ ಮಾಡಿಲ್ಲ. ಅದಕ್ಕೆ ಕಾರಣವೇನು? ನಿಮ್ಮ ಬಳಿ ಅಧಿಕಾರ ಇಲ್ಲವೇ? ಆಡಳಿತ ಯಂತ್ರ ಇಲ್ಲವೇ? ಮಂತ್ರಿಗಳು ಕೆಲಸ ಮಾಡುತ್ತಿಲ್ಲವೇ? ಅಧಿಕಾರಿಗಳು ಸ್ಪಂದಿಸುತ್ತಿಲ್ಲವೇ? ಶಾಸಕರ ಜಂಜಾಟದಲ್ಲಿ ರಾಜ್ಯ ಮುನ್ನಡೆಸಲು ಆಗುತ್ತಿಲ್ಲವೇ? ಈ ವಿಚಾರವಾಗಿ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಬೇಕು.
ನಾವು ಬಜೆಟ್ ವಿಚಾರದಲ್ಲಿ ಸುಳ್ಳು ಆರೋಪ ಮಾಡಲು ಸಾಧ್ಯವಿಲ್ಲ. 2018 ರ ಬಿಜೆಪಿ ಪ್ರಣಾಳಿಕೆಯಲ್ಲಿ ಶೇ.91ರಷ್ಟು ಈಡೇರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರೈತರ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್ ಗಳಲ್ಲಿ 1 ಲಕ್ಷ ವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಯಡಿಯೂರಪ್ಪನವರೇ, ರೈತರ ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿ ಯಾಕೆ ಮೋಸ ಮಾಡಿದ್ದೀರಿ. ಇನ್ನು ರೈತರಿಗೆ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿ ಅದನ್ನು ಈಡೇರಿಸಿಲ್ಲ ಯಾಕೆ? ಇನ್ನು ರೈತ ಬಂಧು ನಿಧಿ ಸ್ಥಾಪಿಸುವುದಾಗಿ ಹೇಳಿದ್ದಿರಿ. ರೈತರ ಪಂಪ್ ಸೆಟ್ ಗಳಿಗೆ 10 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ನೀಡುವ ಭರವಸೆ ನೀಡಿದ್ದಿರಿ. ಯಾಕೆ ನೀಡಿಲ್ಲ? ನಾವು ಉಚಿತ ವಿದ್ಯುತ್ ನೀಡುತ್ತೇವೆ ಎಂದಾಗ ಪ್ರಶ್ನಿಸುವ ಸಚಿವ ಸುನೀಲ್, ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರೇ ನೀವು ಯಾಕೆ ಈ ಭರವಸೆ ನೀಡಿದ್ದೀರಿ?
ಒಂದು ಕಡೆ ಪ್ರಣಾಳಿಕೆ, ಮತ್ತೊಂದು ಕಡೆ ಮೂರು ಬಜೆಟ್ ಗಳಲ್ಲಿ ನೀಡಿದ ಭರವಸೆಯನ್ನು ಈ ಸರ್ಕಾರ ಈಡೇರಿಸಿಲ್ಲ. ಈ ವಿಚಾರವಾಗಿ ಇದುವರೆಗೂ ನಾವು 170 ಪ್ರಶ್ನೆ ಕೇಳಿದ್ದು, ಒಂದಕ್ಕೂ ಉತ್ತರ ನೀಡಿಲ್ಲ. ನಿಮಗೆ ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ವ್ಯಾಪಾರಿಗಳು, ಯುವಕರ ಬಗ್ಗೆ ಬದ್ಧತೆ ಇಲ್ಲದಿದ್ದರೆ ಚುನಾವಣೆಯಲ್ಲಿ ಮತ ಕೇಳಲು ಸಂಕಲ್ಪ ಯಾತ್ರೆ ಯಾಕೆ ಮಾಡುತ್ತಿದ್ದೀರಿ? ನಿಮ್ಮ ಪ್ರಣಾಳಿಕೆ ನಿಮ್ಮ ಸಂಕಲ್ಪ ಅಲ್ಲವೇ? ಈ ಸರ್ಕಾರ ಕೇವಲ ವಂಚನೆ ಮಾಡುವುದರಲ್ಲಿ ಕಾಲ ಕಳೆದಿದೆ. ಈ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ, ನೀವು ಅಧಿಕಾರದಲ್ಲಿ ಮುಂದುವರಿಯಲು ಲಾಯಕ್ಕಿಲ್ಲ.
ಈ ಬಜೆಟ್ ಮಂಡನೆ ನಂತರ ಮುಂದಿನ ತಿಂಗಳು 7ರ ನಂತರ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ಈ ಬಜೆಟ್ ನಿಮ್ಮ ಭಾಷಣದ ಸರಕಾಗಿ ಬಳಕೆಯಾಗಲಿದೆ. ಈ ಸರ್ಕಾರದಿಂದ 90% ರಷ್ಟು ವಚನ ವಂಚನೆಯಾಗಿದೆ.
ಮಹಿಳೆಯರಿಗೆ ಸ್ತ್ರೀ ಉನ್ನತಿ ನಿಧಿ ಮೂಲಕ 10 ಸಾವಿರ ಕೋಟಿ ನೀಡುವುದಾಗಿ ಹೇಳಿದಿರಿ, ಉಚಿತ ಸ್ಮಾರ್ಟ್ ಫೋನ್ ನೀಡುವುದಾಗಿ ಹೇಳಿದಿರಿ. ಆದರೆ ಯಾವುದನ್ನೂ ನೀಡಿಲ್ಲ. ಮಹಿಳೆಯರಿಗೆ ನೀಡಿದ 26 ಭರವಸೆಗಳಲ್ಲಿ 24 ನ್ನು ಈಡೇರಿಸಲು ಆಗಲಿಲ್ಲ.
ರಾಜ್ಯದ ಯುವಕರಿಗೆ ಕೊಟ್ಟ 18 ಭರವಸೆಗಳಲ್ಲಿ 17 ಭರವಸೆ ಈಡೇರಿಸಲು ಸರ್ಕಾರ ವಿಫಲವಾಗಿದ್ದೇಕೆ? ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿಯಾಗಿಲ್ಲ ಯಾಕೆ? ಪಧವಿವರೆಗೂ ಉಚಿತ ಶಿಕ್ಷಣ ನೀಡುವ ಭರವಸೆಯನ್ನು ಕಸದಬುಟ್ಟಿಗೆ ಎಸೆದಿರುವುದೇಕೆ?
ಎಸ್ಸಿ/ಎಸ್ಟಿ/ಒಬಿಸಿ ಮಕ್ಕಳಿಗೆ 4500 ಕೋಟಿಯ ವಿದ್ಯಾರ್ಥಿ ವೇತನ ಎಲ್ಲಿದೆ? ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಕ್ಕೆ ಘೋಷಿಸಿದ್ದ ರೂ. 15,000 ಕೋಟಿ ವೆಚ್ಚದ ವಸತಿ ನಿರ್ಮಾಣ ಭರವಸೆ ಪೂರ್ಣಗೊಂಡಿಲ್ಲ ಏಕೆ? ಗುಡಿಸಲು ಮುಕ್ತ ರಾಜ್ಯ ಮಾಡುತ್ತೇವೆ ಎಂದು ಹೇಳಿದಿರಿ ಎಲ್ಲಿ ಗುಡಿಸಲು ಮುಕ್ತವಾಗಿದೆ? ಈ ಸರ್ಕಾರ ಕೇವಲ ಬರೀ ಬೊಗಳೆ ಮಾತುಗಳನ್ನು ಹೇಳುತ್ತಿದೆ.
ಬಜೆಟ್ನಲ್ಲಿ ಘೋಷಿಸಲಾದ 339 ಭರವಸೆಗಳ ಪೈಕಿ 207 ಭರವಸೆಗಳು ಸರ್ಕಾರಿ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದರೆ ಉಳಿದ 132 ಭರವಸೆಗಳು ಅನುಷ್ಠಾನಕ್ಕೇ ತಂದಿಲ್ಲ ಏಕೆ?
ಕಳೆದ ಬಜೆಟ್ ನಲ್ಲಿ ಘೋಷಿಸಲಾದ ಅನುದಾನಗಳ ಪೈಕಿ ಕೇವಲ 56% ಮಾತ್ರ ಬಳಕೆ ಮಾಡಿರುವುದು ಏಕೆ? (2.5 ಲಕ್ಷ ಕೋಟಿ ಪೈಕಿ 1.4 ಲಕ್ಷ ಕೋಟಿ ಮಾತ್ರ ಬಳಕೆಯಾಗಿದೆ.) ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡಿದ್ದ 3000 ಕೋಟಿ ರೂಪಾಯಿಗಳ ಅನುದಾನ ಪೈಕಿ ಬಸವರಾಜ ಬೊಮ್ಮಾಯಿ 50% ಅನುದಾನವನ್ನೂ ಬಳಸಿಲ್ಲ ಏಕೆ?
ಇನ್ನು ಮೀಸಲಾತಿ ವಿಚಾರದಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದು, ಸಂವಿಧಾನದಲ್ಲಿ ತಿದ್ದುಪಡಿ ತರಲು ಸಾಧ್ಯವಾಗಿಲ್ಲ ಯಾಕೆ? ಮೃತ್ಯುಂಜಯ ಸ್ವಾಮೀಜಿಗಳು ಹೇಳಿದಂತೆ ಮೀಸಲಾತಿ ವಿಚಾರದಲ್ಲಿ ಈ ಸರ್ಕಾರ ತಲೆಗೆ ತುಪ್ಪ ಸವರಿದೆ. ತುಪ್ಪದ ವಾಸನೆಯೂ ಸಿಗುವುದಿಲ್ಲ, ರುಚಿಯು ಸಿಗುವುದಿಲ್ಲ. ಜತೆಗೆ ಒಕ್ಕಲಿಗರು, ಪಂಚಮಸಾಲಿಗಳಿಗೆ ಮೋಸ ಮಾಡುತ್ತಿದೆ.
ಬೊಮ್ಮಾಯಿ ಅವರೇ ಸುಳ್ಲು ಹೇಳಿದ್ದು ಸಾಕು. ಬಸವಣ್ಣನ ನಾಡಿನಲ್ಲಿದ್ದು, ಬಸವಣ್ಣನವರ ಹೆಸರಿಟ್ಟುಕೊಂಡು ಸುಳ್ಳು ಹೇಳಬೇಡಿ. ಸಿದ್ದರಾಮಯ್ಯ ಅವರ ನತೃತ್ವದ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ ಭರವಸೆಗಳಲ್ಲಿ ಶೇ.95ರಷ್ಟು ಈಡೇರಿಸಿದೆ. ಈ ಸರ್ಕಾರ ಕುವೆಂಪು, ಬಸವಣ್ಣ, ನಾರಾಯಣ ಗುರು, ಶಿವಕುಮಾರಸ್ವಾಮಿ, ಬಾಲಗಂಗಾಧರ ಸ್ವಾಮಿ ಸೇರಿದಂತೆ ಎಲ್ಲರ ಇತಿಹಾಸ ತಿರುಚಲು ಮುಂದಾಗಿದೆ.
*ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಪರ್ಯಾಯ ರಸ್ತೆ ನಿರ್ಮಿಸಿ, ನಂತರ ಟೋಲ್ ಸಂಗ್ರಹಿಸಿ:*
ಜಾರ್ಜ್ ಫರ್ನಾಡೀಸ್ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ದಶಪಥ ರಸ್ತೆ ಮಾಡಲು ಮುಂದಾಗಿದ್ದು, ನಂತರ ಈಗ ಅದನ್ನು ಬಿಜೆಪಿ ಸರ್ಕಾರದ ಯೋಜನೆ ಎನ್ನುತ್ತಿದ್ದೀರಿ. ಈಗ ಈ ರಸ್ತೆಯಲ್ಲಿ ಸಂಚಾರ ಮಾಡಲು 250 ರೂ. ಟೋಲ್ ನೀಡಬೇಕು ಎಂದು ಹೇಳುತ್ತಿದ್ದೀರಿ. ನಮಗೆ ಹೆದ್ದಾರಿ ಬೇಡ, ನಾವು 3 ತಾಸಿನಲ್ಲೇ ಮೈಸೂರು ಸೇರುತ್ತೇವೆ ಎನ್ನುವವರಿಗೆ ಸರ್ವೀಸ್ ರಸ್ತೆ ನೀಡಬೇಕು.. ಹೆದ್ದಾರಿ ಅಂದ ಮೇಲೆ ಸರ್ವೀಸ್ ರಸ್ತೆ ಇರಬೇಕು. ಆದರೆ ಸರ್ವೀಸ್ ರಸ್ತೆಯೇ ಇಲ್ಲವಲ್ಲ ಯಾಕೆ? ಪ್ರತಾಪ್ ಸಿಂಹ ಅವರೇ ಮಾತನಾಡಿ. ಈ ಬಗ್ಗೆ ಶ್ರೀನಿವಾಸ್ ಪ್ರಸಾದ್, ಬೇರೆ ನಾಯಕರು ಯಾಕೆ ಮಾತನಾಡುತ್ತಿಲ್ಲ. ನೀವು ಮೊದಲು ಪರ್ಯಾಯ ದಾರಿ ಕೊಟ್ಟು ನಂತರ ಟೋಲ್ ಸಂಗ್ರಹಿಸಬೇಕು. ಸರ್ವೀಸ್ ರಸ್ತೆ ನೀಡದೇ, ಟೋಲ್ ಸಂಗ್ರಹಿಸಿದರೆ ಹೇಗೆ. ಈ ಸರ್ಕಾರ ಪರ್ಯಾಯ ರಸ್ತೆ ಕೊಟ್ಟ ನಂತರ ಟೋಲ್ ಸಂಗ್ರಹಿಸಬೇಕು. ಅಲ್ಲಿಯವರೆಗೂ ಟೋಲ್ ಸಂಗ್ರಹಿಸುವಂತಿಲ್ಲ. ಒಂದು ವೇಳೆ ಸಂಗ್ರಹಿಸಿದರೆ ಕಾಂಗ್ರೆಸ್ ಪಕ್ಷ ಜನರ ಪರವಾಗಿ ಹೋರಾಟ ಮಾಡಲಿದೆ.
ರಸ್ತೆ ಗುಣಮಟ್ಟ ಹೇಗಿದೆ, ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲುವುದರ ಬಗ್ಗೆ ಈಗ ಮಾತನಾಡುವುದಿಲ್ಲ. ಚುನಾವಣೆ ಬರುತ್ತಿದೆ ಎಂದು ಫೋಟೋ ಹಾಕಿಕೊಂಡು, ಸೆಲ್ಫೆ ತೆಗೆದುಕೊಂಡು ಪ್ರಚಾರ ಪಡೆದರು. ಪಡೆಯಲಿ ನಮ್ಮ ಅಭ್ಯಂತರವಿಲ್ಲ. ಅವರು ಯಾರನ್ನಾದರೂ ಕರೆಸಿ ರಸ್ತೆ ಉದ್ಘಾಟನೆ ಮಾಡಲಿ. ಆದರೆ ಜನರಿಗೆ ಪರ್ಯಾಯ ರಸ್ತೆ ಕೊಟ್ಟ ನಂತರ ಟೋಲ್ ಸಂಗ್ರಹಿಸಬೇಕು ಎಂಬುದು ನಮ್ಮ ಆಗ್ರಹ.
ಈ ರಸ್ತೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಿದ ಪರಿಣಾಮ ಸುಮಾರು 10 ಸಾವಿರ ಉದ್ಯೋಗ ನಷ್ಟವಾಗಿದೆ. ಈ ರಸ್ತೆ ಬೇಕು ನಿಜ. ಆದರೆ ಉದ್ಯೋಗಕ್ಕೆ ಧಕ್ಕೆ ಬಾರದಂತೆ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಲ್ಲವೇ? ಇನ್ನು ಪ್ರಧಾನಿಗಳು ಮೈಸೂರನ್ನು ಪ್ಯಾರೀಸ್ ಮಾಡುತ್ತೇನೆ ಎಂದಿದ್ದರು. ನಾನು ಅವರಿಗೆ ಕೈಮುಗಿದು ಕೇಳಿಕೊಳ್ಳುವುದು ಒಂದೆ ನಮಗೆ ಪ್ಯಾರೀಸ್ ನಗರ ಬೇಡ, ಪ್ಯಾರೀಸ್ ಮಾದರಿಯ ರಸ್ತೆ ಮಾಡಿಸಿ ಸಾಕು.
ಈ ಸರ್ಕಾರ ವಚನಭ್ರಷ್ಟ ಸರ್ಕಾರ, 40% ಕಮಿಷನ್ ಸರ್ಕಾರ, ಯುವಕರಿಗೆ ಉದ್ಯೋಗ ನೀಡುವುದರಿಂದ ಪ್ರತಿ ಹಂತದಲ್ಲೂ ವಿಫಲವಾಗಿದೆ. ಮೈಸೂರು ಸಂಸದರು ವಿವಿ ಉಪಕುಲಪತಿಗಳ ನೇಮಕಾತಿಗೆ ಕನಿಷ್ಠ 5 ಕೋಟಿ ಲಂಚ ನೀಡಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಬಿಜೆಪಿಯ ಯಾರೂ ಉತ್ತರ ನೀಡುತ್ತಿಲ್ಲ.
ಇನ್ನು 45 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ 141 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ.
*ಪ್ರಶ್ನೋತ್ತರ:*
ಈ ಸರ್ಕಾರದ ಅವಧಿಯಲ್ಲಿ ಸಾಲದ ಪ್ರಮಾಣ ಹೆಚ್ಚಾಗಿರುವ ಬಗ್ಗೆ ಕೇಳಿದಾಗ, ‘ಈ ಸರ್ಕಾರ ಕಳೆದ ವರ್ಷ ಬಜೆಟ್ ನಲ್ಲಿ 2.50 ಲಕ್ಷ ಕೋಟಿ ಬಜೆಟ್ ನಲ್ಲಿ ಈವರೆಗೂ ಕೇವಲ 1.40 ಲಕ್ಷ ಕೋಟಿ ಮಾತ್ರ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಹೇಳಿದಂತೆ ಕಾಮಗಾರಿ ಮೊತ್ತವನ್ನು ದುಪ್ಪಟ್ಟು ಮಾಡಿದ್ದಾರೆ. ಈ ಸರ್ಕಾರ ಬೆಂಗಳೂರು ರಸ್ತೆ ಗುಂಡಿ ಮುಚ್ಚಲು 7100 ಕೋಟಿ ಖರ್ಚು ಮಾಡಿದ್ದಾರೆ. ಯಾವ ರಸ್ತೆ ಗುಂಡಿ ಮುಚ್ಚಲಾಗಿದೆ? ಕಳೆದ ಬಾರಿ ಅಧಿಕಾರಕ್ಕೆ ಬಂದಾಗ ಬೆಂಗಳೂರಿನ ಸರ್ಕಾರಿ ಕಟ್ಟಡ ಅಡವಿಟ್ಟಿದ್ದರು. ನಾವು ಬಂದು ಅದನ್ನು ಬಿಡಿಸಿದ್ದೆವು. ಈಗ ಮತ್ತೆ ಸರ್ಕಾರವನ್ನೇ ಅಡವಿಡುತ್ತಿದ್ದಾರೆ’ ಎಂದರು.
ಈ ಸರ್ಕಾರಕ್ಕೆ ಆಡಳಿತ ಮಾಡಲು ಬರುವುದಿಲ್ಲವೇ ಎಂದು ಕೇಳಿದಾಗ, ‘ಅವರಿಗೆ ಆಡಳಿತ ಮಾಡುವ ಅನುಭವವಿಲ್ಲ. ಅವರಿಗೆ ಕೇವಲ ಲಂಚ, ಭ್ರಷ್ಟಾಚಾರದ ಮೇಲೆಯೇ ಆಸಕ್ತಿ. ಪ್ರತಾಪ್ ಸಿಂಹ ದಡ್ಡರೇ, ಆತ ಸಚಿವರ ಮುಂದೆಯೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬೆಡ್ ಸ್ಕ್ಯಾಂಮ್ ಬಯಲಿಗೆಳೆದಿದ್ದಾರೆ. ಬಿಜೆಪಿ ನಾಯಕರೇ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದರು.
ಮುಖ್ಯಮಂತ್ರಿಗಳು ರಿಪೋರ್ಟ್ ಕಾರ್ಡ್ ನೀಡದಿದ್ದರೆ ನಾಳೆ ಬಜೆಟ್ ಮಂಡನೆ ವೇಳೆ ನಿಮ್ಮ ನಿಲುವೇನು ಎಂದು ಕೇಳಿದಾಗ, ‘ನಾಳೆವರೆಗೂ ಕಾದು ನೋಡಿ. ನಾವು ರಾಜಕೀಯ ಪಕ್ಷವಾಗಿ ಅವರು ಏನು ಹೇಳುತ್ತಾರೆ ಜನರಿಗೆ ಗೊತ್ತಾಗಬೇಕು. ಆನಂತರ ನಾವು ಮಾತನಾಡುತ್ತೇವೆ’ ಎಂದರು.
ಟಿಪ್ಪು ಸುಲ್ತಾನ್ ಅವರ ತಲೆ ತೆಗೆದಂತೆ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕು ಎಂಬ ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರೇನು ಕುರಿಯೇ? ಇತಿಹಾಸದಲ್ಲಿ ಟಿಪ್ಪು ಅವರ ತಲೆ ತೆಗೆದಿರುವ ಬಗ್ಗೆ ದಾಖಲೆ ಎಲ್ಲಿವೆ? ನಾನು ಅಶ್ವತ್ಥ್ ನಾರಾಯಣ ಅವರಿಗೆ ಉತ್ತರವನ್ನು ನೀಡುವುದಿಲ್ಲ, ಅವರ ಹೇಳಿಕೆ ಖಂಡಿಸುವುದಿಲ್ಲ. ಅವರ ಹೇಳಿಕೆಗೆ ಬೊಮ್ಮಾಯಿ, ಯಡಿಯೂರಪ್ಪನವರು, ನಡ್ಡಾ ಅವರು ಉತ್ತರ ನೀಡಬೇಕು. ನಾನು ಆ ವ್ಯಕ್ತಿಯ ಬಗ್ಗೆ ಮಾತನಾಡಿ ನನ್ನ ಬಾಯಿ ಕೊಳಕು ಮಾಡಿಕೊಳ್ಳು ಇಚ್ಛಿಸುವುದಿಲ್ಲ. ಇನ್ನು ಟಿಪ್ಪು ಅವರ ವಿಚಾರದಲ್ಲಿ ರಾಷ್ಟ್ರಪತಿಗಳು ಬಂದು ಏನು ಮಾತನಾಡಿದ್ದಾರೆ ಎಂಬ ದಾಖಲೆಗಳಿವೆ’ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನಾ ವೆಚ್ಚ ದುಪ್ಪಟ್ಟಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಸರ್ಕಾರ 1 ಸಾವಿರ ಕೋಟಿ ಯೋಜನಾ ಅಂದಾಜು ವೆಚ್ಚವನ್ನು 2 ಸಾವಿರ ಕೋಟಿಗೆ ಹೆಚ್ಚಿಸುತ್ತಿದ್ದಾರೆ’ ಎಂದರು.
ಟೆಂಡರ್ ಪರಿಶೀಲನಾ ಸಮಿತಿ ರದ್ದು ಮಾಡಿದ್ದು ಡಿ.ಕೆ. ಶಿವಕುಮಾರ್ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ‘ಆ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನಾನು ಕಾನೂನು ಬಾಹೀರವಾಗಿ ಮಾಡಿದ್ದರೆ ಕ್ರಮ ಕೈಗೊಳ್ಳಲಿ’ ಎಂದರು.
ಸುದೀಪ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸುದೀಪ್ ನನ್ನ ಉತ್ತಮ ಸ್ನೇಹಿತ. ನಾವು ಲೋಕಾರೂಢಿಯಾಗಿ ರಾಜಕಾರಣದ ಬೆಳವಣಿಗೆ ಬಗ್ಗೆ ಮಾತನಾಡಿದ್ದೇವೆ. ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸಾಮಾಜಿಕ ಸೇವೆ ಮಾಡಿದ್ದಾರೆ. ನಾವು ಕೆಲವು ವಿಚಾರ ಚರ್ಚೆ ಮಾಡಿದ್ದೇವೆ. ನಾನು ಅವರಿಗೆ ಬಲವಂತ ಮಾಡುವುದಿಲ್ಲ. ನಾನು ನನ್ನ 35 ವರ್ಷಗಳ ಅನುಭವದಲ್ಲಿ ಕೆಲವು ವಿಚಾರ ಚರ್ಚೆ ಮಾಡಿದ್ದೇವೆ ಅಷ್ಟೇ’ ಎಂದು ತಿಳಿಸಿದರು.