ನಂದಿನಿ ಮೈಸೂರು
*ದಸರಾ ದೀಪಾಲಂಕಾರ ವೀಕ್ಷಿಸಿದ ಡಾ.ಹೆಚ್.ಸಿ.ಮಹದೇವಪ್ಪ*
ಮೈಸೂರು,ಅ.16: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಮೈಸೂರು ನಗರವನ್ನು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ವೀಕ್ಷಿಸಿದರು.
ಮೊದಲಿಗೆ ಜೆ.ಎಸ್.ಎಸ್ ವಿದ್ಯಾಪೀಠ ವೃತ್ತದಲ್ಲಿನ ಭಾರತ ಸಂವಿಧಾನದ ಪ್ರಾಸ್ತಾವನೆಯಿಂದ ಪ್ರಾರಂಭಗೊಂಡು ವೃತ್ತದ ಸುತ್ತಲೂ ಪ್ರಜಾಪ್ರಭುತ್ವದ ಮುನ್ನುಡಿ, ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪ, ಸ್ವಾತಂತ್ರ್ಯ ಹೋರಾಟ, ಬಹುತ್ವದ ಸಮೃದ್ಧ ಭಾರತ ಪರಿಕಲ್ಪನೆಯಲ್ಲಿ ರೂಪಿಸಿರುವ ದೀಪಾಲಂಕವನ್ನು ಕಣ್ತುಂಬಿಕೊಂಡರು.
ತೆರೆದ ವಾಹನದ ಮೂಲಕ ಸಾಗಿ ದೊಡ್ಡಕೆರೆ ಮೈದಾನದಲ್ಲಿ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್, ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ವಿವೇಕಾನಂದರು, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ವೀಕ್ಷಿಸಿದರು. ಬಳಿಕ ಜಯಚಾಮರಾಜೇಂದ್ರ ವೃತ್ತ, ಹಾಗೂ ಕೃಷ್ಣರಾಜ ಒಡೆಯರ್ ವೃತ್ತದ ಮಾರ್ಗವಾಗಿ ಸಯ್ಯಾಜಿ ರಾವ್ ವೃತ್ತದ ಮುಖೇನ ಸಾಗಿ ಎಲ್ಐಸಿ ವತ್ತದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನೋಡಿದರು.
ನಂತರ ರೈಲ್ವೆ ಸ್ಟೇಷನ್, ದಾಸಪ್ಪ ವೃತ್ತದ ಮೂಲಕ ಸಾಗಿ ರಾಮಸ್ವಾಮಿ ವೃತ್ತದಲ್ಲಿನ ಹಂಪಿಯ ಕಲ್ಲಿನ ರಥ ಮಾದರಿ ಹಾಗೂ ವೃತ್ತದ ಮಧ್ಯದಲ್ಲಿ ಚಂದ್ರಯಾನ ಸೇರಿದಂತೆ ಅನೇಕ ವೃತ್ತಗಳಲ್ಲಿ ಝಗಮಗಿಸುತ್ತಿರುವ ದೀಪಾಲಂಕಾರವನ್ನು ವೀಕ್ಷಿಸಿದರು.