ಸೆ.26ರಿಂದ ಅ.5ರವರೆಗೆ ಫಲಪುಷ್ಪ ಪ್ರದರ್ಶನ: ಜಿಲ್ಲಾ ಪಂಚಾಯತ್ ಸಿಇಒ ಪೂರ್ಣಿಮಾ ಬಿ.ಆರ್.

ನಂದಿನಿ ಮೈಸೂರು

 

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ 2022-23ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನವನ್ನು ನಿಶಾದ್ ಭಾಗ್ ಕುಪ್ಪಣ್ಣ ಪಾರ್ಕ್ ಇಲ್ಲಿ ಸೆ.26ರಿಂದ ಅ.5ರವರೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್.ತಿಳಿಸಿದರು.

ಕುಪ್ಪಣ್ಣ ಪಾರ್ಕ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಈ ಬಾರಿ ಅದ್ಧೂರಿಯಾಗಿ ರಾಷ್ಟ್ರಪತಿ ಭವನವನ್ನು ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿ ಗಳಿಂದ ಸುಮಾರು 20ಅಡಿ ಎತ್ತರದಲ್ಲಿ ಗಾಜಿನ ಮನೆಯಲ್ಲಿ ನಿರ್ಮಿಸಲಾಗುವುದು. ದಿ.ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಸಾಧನೆಯ ವಿವರದೊಂದಿಗೆ ಪುತ್ಥಳಿಗಳನ್ನು ಸ್ಥಾಪಿಸಿ ಹೂವಿನೊಂದಿಗೆ ಅಲಂಕರಿಸಲಾಗುವುದು. ಮೈಸೂರು ರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ಜನರು ವಿಶ್ರಾಂತಿ ಪಡೆಯಲು ತಂಡೀ ಸಡಕ್ ನ್ನು ನಿರ್ಮಿಸುತ್ತಿದ್ದರು. ಅದರ ಪ್ರತಿರೂಪವನ್ನು ಗಾಜಿನ ಮನೆಯ ಮುಂದೆ ನಿರ್ಮಿಸಲಾಗುತ್ತದೆ ಎಂದರು.

7ಅಡಿ ಜೇನುಹುಳು, 12ಅಡಿ ಜಿರಾಫೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಹಲವು ಗೊಂಬೆಗಳನ್ನು ಹೂವಿನಿಂದ ಅಲಂಕರಿಸಲಾಗುವುದು. 7ಅಡಿ ದಪ್ಪ ಮೆಣಸಿನ ಕಾಯಿಯಿಂದ ಒಂದು ಮನೆಯನ್ನು ನಿರ್ಮಿಸಲಾಗುವುದು ಎಂದರು. ಇತರ ವೈವಿಧ್ಯಮಯದಿಂದ ಕೂಡಿದ ಕಾನ್ಸೆಪ್ಟ್ ಗಳನ್ನು ನಿರ್ಮಿಸಲಾಗುವುದು. ಡೈರಿ ಡೇ, ಉಲ್ಲಾಸ್ ಅಗರ್ ಬತ್ತೀಸ್, ಸುವರ್ಣ ಚಾನೆಲ್ ಪ್ರಾಯೋಜಕತ್ವ ವಹಿಸಿದ್ದು, ಸಂಜೆಯ ವೇಳೆ ಅನೇಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಇಲಾಖೆಯಿಂದ 50ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಬೆಳೆದಿದ್ದು ಇಡೀ ಕುಪ್ಪಣ್ಣ ಪಾರ್ಕ್ ನ್ನು ಹೂವುಗಳಿಂದ ಅಲಂಕರಿಸಲಾಗುವುದು. ಅವುಗಳಲ್ಲಿ ಮುಖ್ಯವಾಗಿ ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ, ಡಾಲಿಯಾ ಸೇರಿದಂತೆ ಹಲವು ಪ್ರಭೇದದ ಹೂವಿನ ಗಿಡಗಳು, ಪುಣೆಯಿಂದ ವಿಶೇಷ ಅಲಂಕಾರಿಕ ಗಿಡಗಳನ್ನು ತರಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಮಳಿಗೆಗಳು ಐಐಹೆಚ್ ಆರ್, ಸಿಡಿಬಿ, ಎನ್ ಹೆಚ್ ಬಿ, ಸಿಎಫ್ ಟಿಆರ್ ಐ ಸಂಸ್ಥೆಗಳಿಗೆ ಪತ್ರ ಬರೆದಿದ್ದು ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದರು.

ಫಲಪುಷ್ಪ ಪ್ರದರ್ಶನದ ಭಿತ್ತಿ ಪತ್ರವನ್ನು ಬಿಡುಗಡೆ

ಸುದ್ದಿಗೋಷ್ಠಿಯಲ್ಲಿ ದಸರಾ ಉಪಸಮಿತಿಯ ಫಲಪುಷ್ಪ ಪ್ರದರ್ಶನ ಸಮಿತಿಯ ಅಧ್ಯಕ್ಷ ಎಸ್.ಆರ್.ನಂಜಪ್ಪ, ಉಪಾಧ್ಯಕ್ಷರಾದ ಓಂ ಶ್ರೀನಿವಾಸ, ಸುಶೀಲಾ,ರುದ್ರೇಶ್ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *