ನಂದಿನಿ ಮೈಸೂರು
ಚುನಾವಣೆಯಲ್ಲಿ ಮತಕ್ಕಾಗಿ ಮತದಾರರಿಗೆ ಆಮಿಷ ಒಡ್ಡುವುದನ್ನು ನೋಡಿದ್ದೇವೆ. ಆದ್ರೆ ಪಕ್ಷದ ಸದಸ್ಯತ್ವ ಮಾಡಿಸುವುದಕ್ಕೂ ಆಮಿಷ ಒಡ್ಡುವುದು ನೋಡಿರೋದಕ್ಕೆ ಸಾಧ್ಯವೇ ಇಲ್ಲ. ಆದ್ರೆ ರಾಜ್ಯ ಬಿಜೆಪಿ, ಕಾಂಗ್ರೆಸ್ ಪಕ್ಷದ ವಿರುದ್ಧ ಇಂಥದ್ದೊಂದು ಆರೋಪ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನವರು ಸದಸ್ಯತ್ವ ನೋಂದಣಿಗಾಗಿ ಹಲವು ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸದಸ್ಯತ್ವ ನೋಂದಣಿ ಆರಂಭಿಸಿದೆ. ಎಲ್ಲಾ ಕ್ಷೇತ್ರಗಳಲ್ಲೂ ನೋಂದಣಿ ಕೆಲಸ ಭರದಿಂದ ಸಾಗಿದೆ. ಆದ್ರೆ ಸಿದ್ದರಾಮಯ್ಯ ಅವರ ಕ್ಷೇತ್ರ ಬದಾಮಿಯಲ್ಲಿ ಹೆಚ್ಚು ಸದಸ್ಯತ್ವ ಮಾಡಿದವರಿಗೆ ಟಿವಿ, ಫ್ರಿಡ್ಜ್ ಕೊಡುವುದಾಗಿ ಆಮಿಷ ಒಡ್ಡಲಾಗುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಆ ಟ್ವೀಟ್ ಸಾರಾಂಶ ಈ ಕೆಳಕಂಡಂತಿದೆ.

‘ಒಂದು ರಾಷ್ಟ್ರೀಯ ಪಕ್ಷ ಎಷ್ಟು ಅಧೋಗತಿಗೆ ತಲುಪಿದೆ ಎಂದರೆ ಸದಸ್ಯರ ನೋಂದಣಿಗೂ ಆಮಿಷ ಒಡ್ಡುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಹೆಚ್ಚು ಸದಸ್ಯತ್ವ ಮಾಡುವವರಿಗೆ ಫ್ರಿಡ್ಜ್, ಟಿವಿ, ಮೊಬೈಲ್ ಆಮಿಷ ಒಡ್ಡಲಾಗುತ್ತಿದೆ’ ಎಂದು ಟೀಕಿಸಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲʼ ಹೀಗಂತ ರಾಜ್ಯ ಬಿಜೆಪಿ ಲೇವಡಿ ಮಾಡಿ ಟ್ವೀಟ್ ಮಾಡಿದೆ.