ಮೋದಿ ದೇಶವನ್ನೇ ಮಾಡಿಬಿಡ್ತಾರೆ:ಮಾಜಿ ಸಿಎಂ ಸಿದ್ದರಾಮಯ್ಯ

ಎಚ್.ಡಿ.ಕೋಟೆ:2 ಫೆಬ್ರವರಿ 2022

ನಂದಿನಿ ಮೈಸೂರು

‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರ ಏಕೈಕ ಗುರಿ ‘ಅಮೀರ್ ಕೆ ಸಾಥ್, ಗರೀಬೋಂಕಾ ವಿನಾಶ್’ ಎನ್ನುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2022-23ನೇ ಸಾಲಿನ ಬಜೆಟ್ ಸಾಕ್ಷಿಯಾಗಿದೆ.ಮೋದಿ ದೇಶವನ್ನೇ ಮಾರಿಬಿಡ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ನಲ್ಲಿ ಯಾವುದೇ ಮುಜುಗರ-ಅಂಜಿಕೆ ಇಲ್ಲದೆ ಶ್ರೀಮಂತರು ಮತ್ತು ಕ್ರೋನಿ ಬಂಡವಾಳಿಗರ ಕೈ ಹಿಡಿದು, ಬಡವರು, ರೈತರು, ಯುವಜನರನ್ನು ಮಾತ್ರವಲ್ಲ, ತಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಮಧ್ಯಮ ವರ್ಗವನ್ನೂ ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ.

ರೈತರ ಚಳುವಳಿಯ ಒತ್ತಡಕ್ಕೆ ಮಣಿದು ಕರಾಳ ಕೃಷಿ ಕಾನೂನುಗಳನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಅನುದಾನವನ್ನು ರೂ.1,31,531 ಕೋಟಿಯಿಂದ ರೂ.1,32,513 ಕೋಟಿಗೆ ಹೆಚ್ಚಿಸಿದೆ. ಅಂದರೆ ಕೇವಲ ರೂ.982 ಕೋಟಿ ಹೆಚ್ಚಿಸಿ ರೈತರ ವಿರುದ್ಧ ಸೇಡು ತೀರಿಸಿಕೊಂಡಿದೆ.

ಬೆಳೆ ವಿಮೆಯ ಅನುದಾನವನ್ನು ರೂ.15,989 ಕೋಟಿಯಿಂದ ರೂ.15,500 ಕೋಟಿಗೆ, ಯೂರಿಯಾ ಸಬ್ಸಿಡಿಯನ್ನು ರೂ.75,930 ಕೋಟಿಯಿಂದ ರೂ.63,222 ಕೋಟಿಗೆ ಮತ್ತು ಬೆಂಬಲ ಬೆಲೆಯ ಅನುದಾನವನ್ನು ರೂ.3596 ಕೋಟಿಯಿಂದ ರೂ.1500 ಕೋಟಿಗೆ ಇಳಿಸಿ ರೈತರ ಬೆನ್ನುಮೂಳೆ ಮುರಿಯಲಾಗಿದೆ. ರೈತರ ಆದಾಯ ದುಪ್ಪಟ್ಟು ಆಗುವುದು ಯಾವಾಗ?
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಆಹಾರ ನಿಗಮಕ್ಕೆ ನೀಡುವ ಸಬ್ಸಿಡಿಯನ್ನು ರೂ.2,10,929 ಕೋಟಿಯಿಂದ ರೂ.1,45,920 ಕೋಟಿಗೆ ಮತ್ತು ಗ್ರಾಮೀಣ ನಿರುದ್ಯೋಗಿ ಜನತೆಗೆ ಸಂಜೀವಿನಿಯಂತಿದ್ದ ನರೇಗಾ ಯೋಜನೆಯ ಅನುದಾನವನ್ನು ರೂ.98,000 ಕೋಟಿಯಿಂದ ರೂ.73,000 ಕೋಟಿಗೆ ಇಳಿಸಿ ಬಡವರ ಹೊಟ್ಟೆಗೆ ಹೊಡೆಯಲಾಗಿದೆ.

ವರ್ಷಕ್ಕೆ ಎರಡು ಕೋಟಿಯಂತೆ ಐದು ವರ್ಷಗಳಲ್ಲಿ ಹತ್ತು ಕೋಟಿ ಉದ್ಯೋಗ ನೀಡುವ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿದ್ದ ನರೇಂದ್ರಮೋದಿ ಸರ್ಕಾರ ನಿರುದ್ಯೋಗವನ್ನು 45 ವರ್ಷಗಳಷ್ಟು ಹಿಂದಿನ ದಾಖಲೆಗೆ ಕೊಂಡೊಯ್ದಿದೆ. ಈ ಬಜೆಟ್ ನಲ್ಲಿ ಕೂಡಾ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯ ಸೊಲ್ಲಿಲ್ಲ.
ಉದ್ಯೋಗ ಕಳೆದುಕೊಂಡು, ಬೆಳೆ ಕಳೆದುಕೊಂಡು ಜನ ಸಾಲದಲ್ಲಿ ಮುಳುಗಿದ್ದಾರೆ. ಅವರನ್ನು ಸಾಲದಿಂದ ಪಾರು ಮಾಡಬೇಕಾದ ಸರ್ಕಾರವೇ ದೇಶವನ್ನು ಸಾಲದಲ್ಲಿ ಮುಳುಗಿಸಲು ಹೊರಟಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಯುಪಿಎ ಸರ್ಕಾರ ನಿರ್ಗಮಿಸುವವರೆಗೆ ಇದ್ದ ಒಟ್ಟು ಸಾಲ 53 ಲಕ್ಷ ಕೋಟಿ ರೂಪಾಯಿ ಮಾತ್ರ.

ಕಳೆದ ವರ್ಷದ ವರೆಗಿನ ಒಟ್ಟು ಸಾಲ ರೂ.135 ಲಕ್ಷ ಕೋಟಿ.ಇದಕ್ಕೆ ಮುಂದಿನ ವರ್ಷದ 11 ಲಕ್ಷದ 87 ಸಾವಿರ ಕೋಟಿ ಸಾಲ ಸೇರಲಿದೆ. ನರೇಂದ್ರ ಮೋದಿ ಸರ್ಕಾರ ಕೇವಲ ಎಂಟು ವರ್ಷಗಳ್ಲಲಿ ರೂ. 93 ಲಕ್ಷ ಕೋಟಿ ಸಾಲ ಮಾಡಿದೆ.
ಸಾಲದ ಹೊರೆಯಿಂದಾಗಿ ಸರ್ಕಾರ ಪ್ರತೀ ವರ್ಷ 9 ಲಕ್ಷದ 40 ಸಾವಿರ ಕೋಟಿ ಬಡ್ಡಿ ಪಾವತಿಸಬೇಕಾಗುತ್ತದೆ. ಇದರಿಂದ ಬಜೆಟ್ ನ ಬಹುಭಾಗ ಸಾಲ ಮತ್ತು ಬಡ್ಡಿಗೆ ಖರ್ಚಾಗುತ್ತದೆ, ಅಭಿವೃದ್ದಿಗೆ ದುಡ್ಡೆಲ್ಲಿದೆ?
ಕೊರೊನಾ ಕಾಲದಲ್ಲಿ ಉದ್ಯೋಗ ನೀಡಿ ಹಸಿವಿನಿಂದ ಕಾಪಾಡಿದ ನರೇಗಾ ಯೋಜನೆಗೆ ಹಿಂದಿನ ಬಜೆಟ್ ನಲ್ಲಿ 37 ಸಾವಿರ ಕೋಟಿ ಕಡಿತ ಮಾಡಿದ್ದರು, ಈ ಬಾರಿ ಮತ್ತೆ ಕಳೆದ ಬಾರಿಗಿಂತ ರೂ.25 ಸಾವಿರ ಕೋಟಿ ಮಾಡಿ ಬಡವರ ಹೊಟ್ಟೆಗೆ ಹೊಡೆದಿದ್ದಾರೆ.

ವಾಜಪೇಯಿ ಸರ್ಕಾರದ ನದಿ ಜೋಡಣೆಯ ಪೊಳ್ಳು ಘೋಷಣೆಯನ್ನು ನರೇಂದ್ರ ಮೋದಿ ಸರ್ಕಾರ ಪುನರುಚ್ಚರಿಸಿದೆ. ಮಹದಾಯಿ ಯೋಜನೆಗೆ ನೋಟಿಫಿಕೇಷನ್ ಆಗಿದೆ, ಕೆಲಸ ಆರಂಭಿಸಿಲ್ಲ, ಮೇಕೆದಾಟು ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ. ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ.
ಕೃಷ್ಣ ಮೇಲ್ದಂಡೆ ಯೋಜನೆಯ ನ್ಯಾಯಾಧೀಕರಣದ ಆದೇಶಕ್ಕೆ ನೋಟಿಫಿಕೇಷನ್ ಮಾಡಿಲ್ಲ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೋಷಿಸಿ ನೆರವು ನೀಡಬೇಕೆಂಬ ನಮ್ಮ ಮನವಿಗೆ ಪುರಸ್ಕಾರ ಸಿಕ್ಕಿಲ್ಲ. ನದಿಗಳನ್ನು ಆ ಮೇಲೆ ಜೋಡಿಸಿ, ಮೊದಲು ಈ ಯೋಜನೆಗಳನ್ನು ಪೂರ್ಣಗೊಳಿಸಲು ನೆರವು ನೀಡಿ.

ಕೊರೊನಾ ಲಾಕ್ ಡೌನ್ ಮತ್ತು ಮಾರುಕಟ್ಟೆ ಕುಸಿತದಿಂದಾಗಿ ಸಣ್ಣ ಕೈಗಾರಿಕಾ, ಅತಿ ಸಣ್ಣ ಕೈಗಾರಿಕೆ, ಮಧ್ಯಮ ಕೈಗಾರಿಕೆಗಳು ಒಂದೊಂದಾಗಿ ಮುಚ್ಚುತ್ತಿವೆ, ಇದರಿಂದಾಗಿ, ಶೇ. 60 ರಷ್ಟು ಉದ್ಯೋಗ ನಷ್ಟವಾಗಿದೆ. ಇದನ್ನು ಪುನಶ್ಚೇತನಗೊಳಿಸಲು ಈ ಬಜೆಟ್ ನಲ್ಲಿ ಉತ್ತೇಜನಕಾರಿಯಾದ ಯಾವುದೇ ಯೋಜನೆಗಳಿಲ್ಲ.
ಈ ವರ್ಷದ ಮಾರ್ಚ್ ತಿಂಗಳಿಗೆ ಕೇಂದ್ರದಿಂದ ಬರುವ ಜಿ.ಎಸ್.ಟಿ ಪರಿಹಾರ ಅಂತ್ಯವಾಗಲಿದೆ. ಇದನ್ನು ಮತ್ತೆ ಐದು ವರ್ಷ ಮುಂದುವರೆಸಬೇಕು ಎಂದು ನಾವು ಒತ್ತಾಯ ಮಾಡಿದ್ದೆವು. ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಲ್ಲ. ಒಂದು ವೇಳೆ ಜಿ.ಎಸ್.ಟಿ ಪರಿಹಾರ ಬರದೇ ಹೋದರೆ ರಾಜ್ಯ ಸರ್ಕಾರ ದಿವಾಳಿಯಾಗಲಿದೆ.

ಬಜೆಟ್ ಎನ್ನುವುದು ಸರ್ಕಾರದ ವಾರ್ಷಿಕ ಆದಾಯ ಮತ್ತು ಖರ್ಚಿನ ವಿವರ. ಆದರೆ ಹಣಕಾಸು ಸಚಿವರು ಮುಂದಿನ 25 ವರ್ಷಗಳ ಅಭಿವೃದ್ದಿಯ ನಕಾಶೆಯನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಭೂಮಿಗೆ ಭಾರವಾಗಿರುವ ಈ ಸರ್ಕಾರವನ್ನು ದೇಶದ ಜನತೆ ಕಿತ್ತೊಗೆಯಲು ಸಿದ್ದರಾಗಿದ್ದಾರೆ ಎಂದರು.

Leave a Reply

Your email address will not be published. Required fields are marked *