ಬಾರ್ ತೆರೆಯಲು ಅನುಮತಿ ಕೊಟ್ಟ ಪಿಡಿಓ, ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

 

ಪಿರಿಯಾಪಟ್ಟಣ:30 ಮೇ 2022

ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದ ಪಿರಿಯಾಪಟ್ಟಣ- ಹಾಸನ ರಾಜ್ಯ ಹೆದ್ದಾರಿಯಲ್ಲಿ ಮದ್ಯದಂಗಡಿ ಮತ್ತು ಲಾಡ್ಜ್ ತೆರೆಯಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಎನ್.ಓ.ಸಿ (ಪರವಾನಗಿ) ನೀಡಿದ್ದಾರೆ ಎಂದು ಆರೋಪಿಸಿ ಹಿಟ್ನೆ ಹೆಬ್ಬಾಗಿಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಬೇಡ ಬೇಡ ಮದ್ಯದಂಗಡಿ ಬೇಡ ಗ್ರಾಪಂ ಪಿಡಿಓ, ಜನಪ್ರತಿನಿಧಿಗಳು ಹಾಗೂ ಅಬಕಾರಿ ಇಲಾಖೆಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಹೆಚ್.ಎಸ್.ಕುಮಾರ್ ಮಾತನಾಡಿ
ಹಿಟ್ನೆ ಹೆಬ್ಬಾಗಿಲು ಗ್ರಾಮವು
ಬಹುತೇಕ ಹಿಂದುಳಿದ ಉಪ್ಪಾರ, ದಲಿತ ಹಾಗೂ ಇನ್ನಿತರ ಸಮುದಾಯದವರು ವಾಸವಿರುವ ದೊಡ್ಡ ಗ್ರಾಮ. ಇಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಗ್ರಾಮ ಪಂಚಾಯಿತಿ, ಗ್ರಂಥಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಚೆ ಕಚೇರಿ, ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿವೆ ಹಾಗಾಗಿ ಈ ಗ್ರಾಮಕ್ಕೆ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಹಿಂದೆಯೇ ಜಿಲ್ಲಾಧಿಕಾರಿ, ಅಬಕಾರಿ, ಸ್ಥಳೀಯ ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿ ಅನುಮತಿಯನ್ನು ನಿರಾಕರಿಸಲಾಗಿತ್ತು, ಆದರೆ ಇತ್ತೀಚೆಗೆ ಪಂಚಾಯಿತಿ ಪಿಡಿಓ ಮತ್ತು ಜನಪ್ರತಿನಿಧಿಗಳು ಹಣದ ಆಮಿಷಕ್ಕೆ ಒಳಗಾಗಿ ಗ್ರಾಮಸ್ಥರ ವಿರೋಧದ ನಡುವೆಯೇ ಏಕಾಏಕಿ ಊರಿನಲ್ಲಿ ಮದ್ಯದಂಗಡಿ
ಬಾರ್ ತೆರೆಯಲು ಅನುಮತಿ ನೀಡಿದ್ದಾರೆ. ಗ್ರಾಮದಲ್ಲಿ ಬಹುತೇಕ ಜನರು ಕೃಷಿ ಮತ್ತು ಕೂಲಿ ಕಾರ್ಮಿಕರಾಗಿದ್ದು ಜೀವನೋಪಾಯಕ್ಕೆ ಬರುವ ಅಲ್ಪ ಆದಾಯವನ್ನೇ ನಂಬಿದ್ದಾರೆ. ಮದ್ಯದಂಗಡಿಯಿಂದ ಬಡ ಜನರ ಜೀವನ ಬೀದಿಗೆ ಬೀಳಲಿದೆ ಆದ್ದರಿಂದ ಪಂಚಾಯಿತಿ ವತಿಯಿಂದ ನೀಡಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಮತ್ತೊಬ್ಬ ಗ್ರಾಪಂ ಸದಸ್ಯ ಮಹದೇವ್ ಮಾತನಾಡಿ
ಪಂಚಾಯಿತಿ ವ್ಯಾಪ್ತಿಯ ಬಹುತೇಕ ಜನರು ಅವಿದ್ಯಾವಂತ ಕೂಲಿ ಕಾರ್ಮಿಕರು. ಜನರ ಕಾನೂನಿನ ಅಜ್ಞಾನವನ್ನು ಅಸ್ತ್ರ ಮಾಡಿಕೊಂಡು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕೆಲವರು ತಮ್ಮ ಲಾಭಕ್ಕಾಗಿ ಊರಿನ ಆರೋಗ್ಯವನ್ನು ಬಲಿಕೊಡಲು ಹೊರಟಿದ್ದಾರೆ.
ಜನ ಸಾಮಾನ್ಯರ ವಿರೋಧವನ್ನು ಕಡೆಗಣಿಸಿ ಸರ್ಕಾರ ಮತ್ತು ಮದ್ಯೋದ್ಯಮಿಗಳು ಶಾಲೆ,ಆಸ್ಪತ್ರೆ ಮತ್ತು ಹಿಂದುಳಿದ ಪ್ರದೇಶದಲ್ಲಿ ವೈನ್‌ ಶಾಪ್ ತೆರೆಯಲು ಮುಂದಾಗಿದ್ದಾರೆ. ಕರ್ನಾಟಕ ಅಬಕಾರಿ ಅಧಿನಿಯಮ, 1967 ರ ರೂಲ್‌ 5 ರ ಪ್ರಕಾರ ಶಾಲೆ, ಧಾರ್ಮಿಕ ಸ್ಥಳ, ಆಸ್ಪತ್ರೆ, ಎಸ್‌ಸಿ ಎಸ್‌ಎಸ್‌ಟಿ ಸಮುದಾಯದ ಜನವಸತಿಯಿಂದ 100 ಮಿ. ಅಂತರದಲ್ಲಿ ಮದ್ಯದಂಗಡಿಯನ್ನು ತೆರೆಯುವಂತಿಲ್ಲ. ಕರ್ನಾಟಕ ವೈನ್‌ ಮರ್ಚೆಂಟ್ಸ್‌ vs ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಹೈಕೋರ್ಟ್ ಜನವಸತಿ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆ, ಧಾರ್ಮಿಕ ಸ್ಥಳದ ಸಮೀಪ ಮದ್ಯದಂಗಡಿಯನ್ನು ತೆರೆಯಬಾರದು ಎಂದು ಆದೇಶ ನೀಡಿದೆ. ಜನ ವಿರೋಧವಿದ್ದಾಗ 100 ಮೀ. ಎಂಬ ಸರ್ಕಾರಿ ಮಾನದಂಡಕ್ಕೆ ಕಟ್ಟು ಬಿದ್ದು ಮದ್ಯದಂಗಡಿ ತೆರೆಯುವುದು ಸೂಕ್ತವಲ್ಲ ಎಂದು ಮಾನ್ಯ ಕರ್ನಾಟಕ ಹೈಕೋರ್ಟ್‌ 1997 ರಲ್ಲಿ ಅಭಿಪ್ರಾಯ ಪಟ್ಟಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಶಿಶು ವಿಹಾರ, ಆರೋಗ್ಯ ಕೇಂದ್ರ, ಧಾರ್ಮಿಕ ಸ್ಥಳ ಹಾಗೂ ರುದ್ರಭೂಮಿಗಳು ಇವೆ. ಇಲ್ಲಿ ಮದ್ಯದಂಗಡಿ ತೆರೆಯುವುದರಿಂದ ಕುಡುಕರ ಹಾವಳಿ ಹೆಚ್ಚಾಗುತ್ತದೆ ಎಂದು ದೂರಿದರು.

ಭಾರತ್ ಪರಿವರ್ತನಾ ಸಂಘದ ಅಧ್ಯಕ್ಷ ಆಯಿತನಹಳ್ಳಿ ಮಂಜು ಮಾತನಾಡಿ
ಮದ್ಯದಂಗಡಿ ತೆರೆಯದಂತೆ ಹಿಂದೆಯೇ ಗ್ರಾಮಸ್ಥರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ. ಇದರ ನಡುವೆ ಕೆಲವರು ಸ್ವಾರ್ಥ ಸಾಧನೆಗಾಗಿ ಸಾವಿರಾರು ಎಕರೆ ಕೃಷಿ ಭೂಮಿ ನಡುವೆ ಬಾರ್ ಮತ್ತು ಲಾಡ್ಜ್ ತೆರೆಯಲು ಅನುಮತಿ ನೀಡಿದ್ದಾರೆ. ಆದ್ದರಿಂದ ಬಾರ್ ತೆರೆಯಲು ನೀಡಿರುವ ಅನುಮತಿಯನ್ನು ರದ್ದು ಪಡಿಸಬೇಕು ತಪ್ಪಿದ್ದಲ್ಲಿ ಮಹಿಳಾ ಸಂಘಟನೆಗಳ ಜೊತೆಗಡಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ
ಗ್ರಾಮ ಪಂಚಾಯತಿ ಸದಸ್ಯರಾದ ಬಿಲ್ಲಹಳ್ಳಿ ಶಿವಕುಮಾರ್, ಸೌಮ್ಯ ಮಹದೇವ್, ಪಿರಿಯಾಪಟ್ಟಣ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ವೀರಭದ್ರ, ಗ್ರಾಮದ ಮುಖಂಡರಾದ ಜಯಶಂಕರ್, ಹೆಚ್.ವಿ.ಜಗಪಾಲ್, ಹೆಚ್.ಜೆ.ಪ್ರವೀಣ್, ಶ್ರೀಧರ್, ಶಶಿಕುಮಾರ್, ಶಂಕರ್ ನಾಯ್ಕ, ಲೋಕೇಶ್ ನಾಯ್ಕ, ನಟರಾಜ್, ರವಿಕುಮಾರ್, ಮೈಲಾರಿ, ಉಮೇಶ್, ಮಾದೇಗೌಡ, ರಾಜೇಶ್, ಹೆಚ್.ಟಿ.ಕುಮಾರ್ ಸ್ಥಳೀಯ ಹೋರಾಟಗಾರ ಮಂಜುನಾಥ್‌ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *