ನಂದಿನಿ ಮೈಸೂರು
ಬಹುತೇಕ ಕಾನ್ವೆಂಟ್ ಮಕ್ಕಳಿಗೆ ಕನ್ನಡ ಬರೋದಿಲ್ಲ: ಸಾಹಿತಿ ಬನ್ನೂರು ರಾಜು ಬೇಸರ
ಮೈಸೂರು: ನಾಡ ಮಕ್ಕಳಿಗೇ ಕನ್ನಡ ಭಾಷೆಯನ್ನು ಇಂದು ಕಲಿಸಬೇಕಾದ ಪರಿಸ್ಥಿತಿಯಿದ್ದು, ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂಬ ಕವಿ ಕುವೆಂಪು ವಾಣಿಯಂತೆ ನಾವು ಎಲ್ಲೇ ಇದ್ದರೂ, ಹೇಗೇ ಇದ್ದರೂ ಕನ್ನಡಿಗರಾಗಿ ನಾವಿದ್ದಲ್ಲಿಯೇ ಮರೆಯದೆ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ತಾಲೂಕಿನ ಜಯಪುರ ಹೋಬಳಿ ಹಾರೋಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೈಸೂರಿನ ಪ್ರತಿಷ್ಠಿತ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ಆಯೋಜಿಸಿದ್ದ ನಾಡು ನುಡಿ ಸಂಭ್ರಮ ಸಮಾರಂಭವನ್ನು ಕನ್ನಡ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ಕಾನ್ವೆಂಟ್ ಮಕ್ಕಳಿಗೆ ಕನ್ನಡ ಬಾರದೆ ಪರೀಕ್ಷೆಗಳಲ್ಲಿ ಕನ್ನಡ ವಿಷಯದಲ್ಲೇ ಹೆಚ್ಚಾಗಿ ಫೇಲ್ ಆಗುತ್ತಿದ್ದು ಇವತ್ತು ಕನ್ನಡದ ಮಕ್ಕಳಿಗೇ ಕನ್ನಡ ಕಲಿಸುವ ದುಸ್ಥಿತಿ ಬಂದಿದೆ ಯೆಂದರು.
ಪೋಷಕರ ಇಂಗ್ಲೀಷ್ ವ್ಯಾಮೋಹದ ಭ್ರಮೆಯಿಂದ ಕಾನ್ವೆಂಟ್ ಸೇರುವ ಕನ್ನಡದ ಮಕ್ಕಳು ಅತ್ತ ಇಂಗ್ಲೀಷನ್ನೂ ಸರಿಯಾಗಿ ಕಲಿಯದೆ ಇತ್ತ ಕನ್ನಡವೂ ಸರಿಯಾಗಿ ಬಾರದೆ ಎಡಬಿಡಂಗಿಯಾಗಿ ತ್ರಿಶಂಕುಸ್ಥಿತಿ ಅನುಭವಿಸುವಂತಾಗಿದೆ. ಅಷ್ಟೇ ಅಲ್ಲ ಕೊನೆಗೆ ತಮ್ಮ ತಾಯಿ ಭಾಷೆ ಕನ್ನಡವನ್ನೇ ಕಲಿಯದೆ ಸಂಪೂರ್ಣವಾಗಿ ಮರೆತು ಬಿಡುವ ಅಪಾಯವಿದೆ.ಹಾಗಾಗಿ ಮಕ್ಕಳು ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಯುವುದು ಸರಿ, ಆದರೆ ಅವರು ತಮ್ಮ ರಕ್ತಗತವಾದ ಮಾತೃ ಭಾಷೆ ಕನ್ನಡವನ್ನು ಮರೆಯದಂತೆ ನೋಡಿ ಕೊಳ್ಳುವ ಜವಾಬ್ದಾರಿ ಪೋಷಕರದ್ದಾಗಬೇಕು. ನಮ್ಮ ಕನ್ನಡ ಅತ್ಯಂತ ಶಕ್ತಿಶಾಲಿ ಭಾಷೆ. ಇದನ್ನು ಹೆಚ್ಚೆಚ್ಚು ಬಳಸಿದಷ್ಟೂ ಅದು ಇನ್ನಷ್ಟು ಸಮೃದ್ಧವಾಗಿ ಬಲಾಡ್ಯವಾಗಿ ಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ಈ ದಿಸೆಯಲ್ಲಿ ಪ್ರತಿಯೊಬ್ಬ ಕನ್ನಡಿಗರೂ ನಿರಂತರವಾಗಿ ಕನ್ನಡ ಬಳಸುವ ಸಂಕಲ್ಪಮಾಡಿ ಕನ್ನಡವನ್ನು ಮತ್ತಷ್ಟೂ ಬೆಳೆಸಿ ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ಶೆಟ್ಟಿ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ‘ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕುದ್ರುನೂ ಮೂಗ್ನಲ್ಲಿ ಕನ್ನಡ ಪದವಾಡ್ತೀನಿ’ ಎನ್ನುವ ಕವಿ ಜಿ.ಪಿ.ರಾಜರತ್ನಂ ಅವರ ಕನ್ನಡ ಪದಗಳು ಎಲ್ಲರಿಗೂ ಮಾದರಿಯಾಗಬೇಕು.ಹಾಗೆಯೇ ಇಂತಹ ಅನನ್ಯ ಕನ್ನಡ ಅಭಿಮಾನದ ಕವಿ ಮಹನೀಯರ, ಸಾಹಿತಿಗಳ ಸಾಹಿತ್ಯವನ್ನು ಓದಿ ಕನ್ನಡ ಚರಿತ್ರೆಯ ಬಗ್ಗೆ ತಿಳಿದುಕೊಂಡು ತಾವೂ ಸಹ ಅವರಂತಾಗ ಬೇಕೆಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದ ಅವರು ಕನ್ನಡ ಎನ್ನುವುದು ಕೇವಲ ಒಂದು ಭಾಷೆ ಮಾತ್ರವಲ್ಲ. ಆದೊಂದು ಉತ್ಕೃಷ್ಟವಾದ ಸಂಸ್ಕೃತಿಯಾಗಿದ್ದು ನಮ್ಮ ಕನ್ನಡ ಭಾಷೆಯೊಡನೆ ಇದನ್ನು ಉಳಿಸಿ ಕೊಂಡು ನಾವು ಬೆಳೆಸಿ ಕೊಂಡು ಹೋಗಬೇಕೆಂದು ಹೇಳಿದರು.
ಕಲಾವಿದೆ ಹಾಗೂ ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಅವರು ನೀತಿ ಕತೆಗಳನ್ನು ಹೇಳಿ ಮನರಂಜಿಸಿದರು. ಹಾಗೆಯೇ ಕಾವೇರಿ ಬಳಗದ ಅಧ್ಯಕ್ಷೆ ಹಾಗೂ ವಿಶ್ರಾಂತ ಶಿಕ್ಷಕಿ ಎನ್.ಕೆ. ಕಾವೇರಿಯಮ್ಮ ಅವರು ಕನ್ನಡ ಗೀತಾಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಆರಂಭದಲ್ಲಿ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ನಿವೃತ್ತ ಶಿಕ್ಷಕ ಎ.ಸಂಗಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ರಾಂತ ಶಿಕ್ಷಕ ಮತ್ತು ಸಂಸ್ಕೃತಿ ಚಿಂತಕ ರಾಜು ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್. ಎಸ್. ಗಿರೀಶ್ ಹುರ, ಶಿಕ್ಷಕಿಯರಾದ ಟಿ.ಬಲ್ಕೀಸ್, ಕೆ. ಎಸ್. ಉಮಾ, ಬಿ. ಕೆ. ಕವಿತಾ, ಎನ್. ಜ್ಯೋತಿ, ಎಸ್. ಶ್ರೀಲತಾ, ಎಂ.ಪಿ.ಶಾಂಭವಿ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ನಾಡು ನುಡಿ ಸಂಭ್ರಮದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಚಿತ್ರ ಕಲೆಯಲ್ಲಿ 3ನೇ ತರಗತಿಯ ಯಮುನಾ (ಪ್ರ ) ಮತ್ತು ಆದರ್ಶ ( ದ್ವಿ ),4ನೇ ತರಗತಿಯ ಯಶವಂತ್ (ಪ್ರ) ಮತ್ತು ಸಮರ್ಥ (ದ್ವಿ), ರಂಗೋಲಿ ಸ್ಪರ್ಧೆಯಲ್ಲಿ 5ನೇ ತರಗತಿಯ ಯಶೋಧಾ (ಪ್ರ) ಮತ್ತು ಪ್ರಾರ್ಥನಾ (ದ್ವಿ) ಹಾಗು ಲಕ್ಷ್ಮೀ (ತೃ ), ಗೀತ ಗಾಯನ ಸ್ಪರ್ಧೆಯಲ್ಲಿ 6ನೇತರಗತಿಯ ಲೋಕಮಣಿ (ಪ್ರ), ಸಂಜನ (ದ್ವಿ), ಲಕ್ಷ್ಮೀ(ತೃ), ಕೈ ಬರವಣಿಗೆ ಸ್ಪರ್ಧೆಯಲ್ಲಿ 7ನೇತರಗತಿಯ ಚೈತ್ರ(ಪ್ರ), ತೇಜಸ್ವಿನಿ (ದ್ವಿ), ಕಾವ್ಯಾ (ತೃ) ಅವರುಗಳಿಗೆ ಮುಖ್ಯ ಶಿಕ್ಷಕ ಗಿರೀಶ್ ಹುರ ಅವರು ಬಹುಮಾನ ವಿತರಣೆ ಮಾಡಿದರು. ಕೊನೆಯಲ್ಲಿ ಎಲ್ಲರಿಗೂ ಸಿಹಿ ವಿತರಿಸಲಾಯಿತು.