*ರಾಜಸ್ಥಾನದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು , ಮೋದಿಯವರು ಮೂರನೇ ಅವಧಿಗೆ ಫ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಮಿತ ಶಾ*
ಜನಸಮೂಹದ ನಾಡಿಮಿಡಿತವನ್ನು ಅರಿಯುವ ತಮ್ಮ ಅಸಾಮಾನ್ಯ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾರವರು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಜನರು ಗೆಹ್ಲೋಟ್‌ರ “3D” ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇತ್ತೀಚೆಗೆ ರಾಜಸ್ಥಾನದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ನರೇಂದ್ರ ಮೋದಿಯವರು 2024 ರಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಮರು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರ್ಯಾಲಿಯಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಜನಸಮೂಹದಿಂದ ಉತ್ಸಾಹಗೊಂಡ ಶಾ, “ಗೆಹ್ಲೋಟ್‌ರವರೇ, ನಿಮ್ಮ ಈ ಇಳಿ ವಯಸ್ಸಿನಲ್ಲಿ ನೀವು ಯಾಕೆ ಅಧಿಕಾರಕ್ಕಾಗಿ ಅಲ್ಲಿ ಇಲ್ಲಿ ಓಡುತ್ತಿದ್ದೀರಿ? ಯಾರಾದರು ಈ ಸಭೆಯ ವಿಡಿಯೋವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿರಿ. ಅವರ ಸರ್ಕಾರದ ಕೌಂಟ್‌ಡೌನ್ ಆರಂಭವಾಗಿದೆ ಎಂದು ಅವರಿಗೆ ತಿಳಿಯಲಿದೆ. 2023 ಮತ್ತು 2024ರ ಚುನಾವಣೆಗಳಲ್ಲಿ ಬಿಜೆಪಿ ಸಂಪೂರ್ಣವಾಗಿ ಗೆಲುವು ಸಾಧಿಸಲಿದೆ’ ಎಂದು ಎಂದಿನಂತೆ ತಮ್ಮ ನಿರಂಕುಶ ಶೈಲಿಯಲ್ಲಿ ಹೇಳಿದರು.
ಈಗಾಗಲೇ ರಾಜ್ಯದ ಜನತೆ ಗೆಹ್ಲೋಟ್ ಸರಕಾರದಿಂದ ಹತಾಶರಾಗಿದ್ದಾರೆ ಎಂದು ಎಲ್ಲೆಡೆ ಕಂಡು ಬರುತ್ತಿದೆ. ಗೆಹ್ಲೋಟ್‌ರವರು ದೇಶದಲ್ಲಿ “ಅತ್ಯಂತ ಭ್ರಷ್ಟ” ಆಡಳಿತವನ್ನು ನಡೆಸಿದ ಅಪವಾದವನ್ನು ಹೊಂದಿದ್ದಾರೆ ಮತ್ತು ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ರಾಜಸ್ಥಾನವು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ವಿವಿಧ ಸಮೀಕ್ಷೆಗಳು ಸೂಚಿಸಿವೆ. ಗೆಹ್ಲೋಟ್ ಆಡಳಿತವನ್ನು 3D ಸಂಕ್ಷಿಪ್ತ ರೂಪ ಬಳಸಿ ಟೀಕಿಸಿದ ಶಾ, ಇವರ ಆಡಳಿತದಲ್ಲಿ ಕೇವಲ ದಂಗೆ (ಗಲಭೆಗಳು), ದಲಿತರ ಮೇಲೆ ದೌರ್ಜನ್ಯಗಳು ಮತ್ತು (ದುರ್ವ್ಯವಹಾರ) ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಾಗಿವೆ ಎಂದು ಟೀಕಿಸಿದರು.
ಹಾಡು ಹಗಲೇ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯ ಸಚಿವಾಲಯದಿಂದ ಅಪಾರ ಪ್ರಮಾಣದ ಲೆಕ್ಕಕ್ಕೆ ಸಿಗದ ನಗದು ಮತ್ತು ಒಂದು ಕಿಲೋಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಗೆಹ್ಲೋಟ್ 2018ರ ಚುನಾವಣಾ ಪೂರ್ವದಲ್ಲಿ ತಮ್ಮ ಪಕ್ಷ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಸಾಲ ಮನ್ನಾ ಆಗಿಲ್ಲ, ಸಾಲ ಮರುಪಾವತಿ ಮಾಡದ 19 ಸಾವಿರ ರೈತರ ಜಮೀನು ವಶಪಡಿಸಿಕೊಳ್ಳಲಾಗಿದೆ. ಯುವಜನರಿಗೆ ಉದ್ಯೋಗ ದೊರೆಯುತ್ತಿಲ್ಲ. ರಾಜ್ಯವು ನಿರುದ್ಯೋಗ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ.
ಕ್ಷುಲ್ಲಕ ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಗೆಹ್ಲೋಟ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದ್ದರೆ, ಇಷ್ಟೊತ್ತಿಗೆ ಆರೋಪಿಗಳನ್ನು ಗಲ್ಲಿಗೇರಿಸಲಾಗಿರತ್ತಿತ್ತು. ಸದ್ಯ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನುಪುರ್ ಶರ್ಮಾ ಅವರ ಪ್ರವಾದಿ ಮೊಹಮ್ಮದ್ ಮೇಲಿನ ಹೇಳಿಕೆಯನ್ನು ಬೆಂಬಲಿಸಿದರು ಎಂಬ ಕಾರಣಕ್ಕಾಗಿ ಜೂನ್ 28 ರಂದು ಲಾಲ್ ಅವರನ್ನು ಇಬ್ಬರು ವ್ಯಕ್ತಿಗಳು ಕೊಂದಿದ್ದರು.
“ಕನ್ಹಯ್ಯಾ ಲಾಲ್‌ಗೆ ಭದ್ರತೆ ಒದಗಿಸುವಲ್ಲಿ ವಿಫಲರಾದವರು ಯಾರು? ಪೊಲೀಸರು ಮೌನಕ್ಕೆ ಶರಣಾಗಲು ಕಾರಣವೇನು? ಭಯೋತ್ಪಾದಕರನ್ನು ಹಿಡಿಯಲು ರಾಜಸ್ಥಾನ ಪೊಲೀಸರಿಗೆ ಇಷ್ಟವಿರಲಿಲ್ಲ. ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ಅವರನ್ನು ಬಂಧಿಸಿದೆ,” ಎಂದ ಶಾ, “ಶಂಕಿತರ ವಿರುದ್ಧ ಯಾವುದೇ ಆರೋಪಪಟ್ಟಿ ಸಲ್ಲಿಸಿಲ್ಲ” ಎಂದು ಮುಖ್ಯಮಂತ್ರಿಗಳು ಸುಳ್ಳು ವದಂತಿಗಳನ್ನು ಹರಡಬಾರದು ಎಂದು ಹೇಳಿದರು. “ಡಿಸೆಂಬರ್ 22, 2022 ರಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ತನ್ನ ಮತ-ಬ್ಯಾಂಕ್ ರಾಜಕೀಯದ ಬಗ್ಗೆ ಕಾಂಗ್ರೆಸ್ ನಾಚಿಕೆಪಡಬೇಕು” ಎಂದು ಕಠಿಣ ಪದಗಳಲ್ಲಿ ಕಾಂಗ್ರೆಸ್‌ನ್ನು ಟೀಕಿಸದರು.
ರಾಜಸ್ಥಾನ ಸರ್ಕಾರ, ರಾಜ್ಯದಲ್ಲಿ ನಿಷೇಧಿತ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಗೆ ಮುಕ್ತ ಸ್ವಾತಂತ್ರ್ಯ ನೀಡಿದೆ ಎಂದು ಆರೋಪಿಸಿದ ಶಾ, “ಮೋದಿಯವರು ಪಿಎಫ್‌ಐ ಅನ್ನು ನಿಷೇಧಿಸಿದ್ದರು, ಆದರೆ ಗೆಹ್ಲೋಟ್ ಆಳ್ವಿಕೆಯಲ್ಲಿ, ಪಿಎಫ್‌ಐ ಕೋಟಾದಲ್ಲಿ ರ್ಯಾಲಿ ನಡೆಸಿತು. ವಸುಂಧರಾ ರಾಜೇಯವರು ಇಲ್ಲಿನ ಮುಖ್ಯಮಂತ್ರಿಯಾಗಿದ್ದಾಗ, ನಾವು ಭಯೋತ್ಪಾದನೆಗೆ ಕಠಿಣ ಲಗಾಮು ಹಾಕಿದ್ದೆವು” ಎಂದು ತಮ್ಮ ಪಕ್ಷದ ಭಯೋತ್ಪಾದನಾ ವಿರೋಧಿ ನಿಲುವನ್ನು ಸ್ಪಷ್ಟಪಡಿಸಿದರು.