ಎಜಿ&ಪಿ ಪ್ರಥಮ್‌ನ ೨೦೧ನೇ ಸಿಎನ್‌ಜಿ ಮತ್ತು ೪ನೇ ಎಲ್‌ಸಿಎನ್‌ಜಿ ಸ್ಟೇಷನ್ ಉದ್ಘಾಟಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರ್ದೀಪ್ ಎಸ್.ಪುರಿ

ನಂದಿನಿ ಮೈಸೂರು

ಮೈಸೂರು: ಎಜಿ&ಪಿ ಪ್ರಥಮ್‌ನ ೨೦೧ನೇ ಸಿಎನ್‌ಜಿ ಮತ್ತು ೪ನೇ ಎಲ್‌ಸಿಎನ್‌ಜಿ ಸ್ಟೇಷನ್ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರ್ದೀಪ್ ಎಸ್.ಪುರಿ ಉದ್ಘಾಟಿಸಿದರು.

ಪೈಪ್‌ಲೈನ್ ಮೂಲಕ ಮನೆಮನೆಗೆ ನೈಸರ್ಗಿಕ ಅನಿಲ ಪೂರೈಕೆ ಮಾಡುವ ಯೋಜನೆ ಇದಾಗಿದ್ದು, ಹೆಬ್ಬಾಳಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಎಲ್‌ಸಿಎನ್‌ಜಿ ಸ್ಟೇಷನ್‌ನ್ನು ಸಚಿವ ಹರ್ದೀಪ್ ಎಸ್.ಪುರಿ ವರ್ಚುವಲ್ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪೈಪ್‌ಲೈನ್ ಮೂಲಕ ಮನೆಮನೆಗೆ ಗ್ಯಾಸ್ ಪೂರೈಕೆ ಮಾಡುವ ಯೋಜನೆ ಇತರ ದೇಶಗಳಿಗೂ ಮಾದರಿಯಾಗಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ಹಣದ ಉಳಿತಾಯದೊಂದಿಗೆ ಗ್ಯಾಸ್ ಮುಗಿದಾಗ ಸಿಲಿಂಡರ್‌ಗೆ ಕಾಯುವುದೂ ತಪ್ಪಲಿದೆ ಎಂದರು.
ಎಜಿ&ಪಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಭಿಲೇಷ್ ಗುಪ್ತಾ ಮಾತನಾಡಿ, ನಮ್ಮ ೨೦೧ನೇ ಸಿಎನ್‌ಜಿ ಸ್ಟೇಷನ್ ಪ್ರಾರಂಭ ೨೦೩೦ರ ವೇಳೆಗೆ ಪ್ರಾಥಮಿಕ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಶೇ.೧೫ರಷ್ಟು ಪಾಲನ್ನು ಹೊಂದುವ ಭಾರತದ ಬದ್ಧತೆಗೆ ಮಹತ್ವದ ಕೊಡುಗೆಯಾಗಿದೆ ಎಂದರು.

ಪ್ರಸ್ತುತ ಕಂಪನಿಯು 1,85,000 ನೋಂದಾಯಿತ ಗೃಹ ಬಳಕೆ ಸಂಪರ್ಕಗಳು, 95 ನೋಂದಾಯಿತ ವಾಣಿಜ್ಯ ಗ್ರಾಹಕರು ಮತ್ತು 70 ನೋಂದಾಯಿತ ಕೈಗಾರಿಕಾ ಗ್ರಾಹಕರಿಗೆ ಅನಿಲ ಸಂಪರ್ಕ ಒದಗಿಸುವ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಎಜಿ&ಪಿ ಪ್ರಥಮ್ ಪ್ರಸಕ್ತ ಹಣಕಾಸು ವರ್ಷದಲ್ಲಿ 3.36 ಲಕ್ಷ ಕುಟುಂಬಗಳಿಗೆ ಅನಿಲ ಸಂಪರ್ಕ ಒದಗಿಸಲು 720 ಕಿ.ಮೀ ಸ್ಟೀಲ್ ಪೈಪ್ ಲೈನ್, 3500 ಕಿ.ಮೀ ಎಂ ಡಿ ಪಿ ಇ ಪೈಪ್ ಲೈನ್ ಹಾಗೂ ಡಿ ಪಿ ಎನ್ ಜಿ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ.
ಕಂಪನಿಯು ಮೈಸೂರಿನಲ್ಲಿ 08, ಮಂಡ್ಯದಲ್ಲಿ 04 ಮತ್ತು ಚಾಮರಾಜನಗರದಲ್ಲಿ 01 ಸಿಎನ್ ಜಿ ಸ್ಟೇಷನ್ ಗಳನ್ನು ಹೊಂದಿದೆ. ಕಂಪನಿಯು 2023 ರ ಆರ್ಥಿಕ ವರ್ಷದ ಯೋಜನೆಯ ಭಾಗವಾಗಿ ಮೈಸೂರಿನಲ್ಲಿ 15, ಮಂಡ್ಯದಲ್ಲಿ 09 ಮತ್ತು ಚಾಮರಾಜನಗರದಲ್ಲಿ 05 ಸ್ಟೇಷನ್ ಗಳನ್ನು ನಿರ್ಮಿಸಲಿದೆ. ಕರ್ನಾಟಕ ರಾಜ್ಯಕ್ಕಾಗಿ ತನ್ನ ವ್ಯವಹಾರ ವಿಸ್ತರಣೆ ಕಾರ್ಯತಂತ್ರದ ಭಾಗವಾಗಿ, ಎಜಿ&ಪಿ ಪ್ರಥಮ್ ಗೃಹ ಬಳಕೆ ಪಿ ಎನ್ ಜಿ ಸಂಪರ್ಕಗಳಿಗೆ ನೋಂದಣಿಗಳನ್ನು ಪ್ರಾರಂಭಿಸಿದೆ. ಮೈಸೂರಿನಿಂದ 27,641 ನೋಂದಣಿಗಳನ್ನು ಮತ್ತು ಮಂಡ್ಯದಿಂದ 110 ನೋಂದಣಿಗಳನ್ನು ಸ್ವೀಕರಿಸಿದೆ. 2023ರ ಆರ್ಥಿಕ ವರ್ಷದೊಳಗೆ ಮೈಸೂರಿನಲ್ಲಿ 27024, ಮಂಡ್ಯದಲ್ಲಿ 4050 ಮತ್ತು ಚಾಮರಾಜನಗರದಲ್ಲಿ 1890 ಗೃಹ ಬಳಕೆ ಪಿ ಎನ್ ಜಿ ಸಂಪರ್ಕಗಳನ್ನು ಹೊಂದುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಮೈಸೂರಿನಲ್ಲಿ 362.6 ಕಿ.ಮೀ (ಅಂದಾಜು) ಎಂ.ಡಿ.ಪಿ.ಇ ಗ್ಯಾಸ್ ಪೈಪ್ ಲೈನ್, ಮಂಡ್ಯದಲ್ಲಿ 16 ಕಿ.ಮೀ ಮತ್ತು ಚಾಮರಾಜನಗರದಲ್ಲಿ 45 ಕಿ.ಮೀ ಮಾರ್ಗ ಹಾಗೂ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ 76 ಕಿ.ಮೀ (ಅಂದಾಜು) ಉಕ್ಕಿನ ಕೊಳವೆ ಮಾರ್ಗವನ್ನು ನಿರ್ಮಿಸಲಿದೆ.
ಇದೇ ವೇಳೆ ಸಚಿವ ಹರ್ದೀಪ್ ಎಸ್.ಪುರಿ ಅವರು ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಉಪ ವಿಭಾಗಾದಿಕಾರಿ ಕಮಲಾಭಾಯಿ, ಎಜಿ&ಪಿ ಪ್ರಥಮ್‌ನ ಸಿಬ್ಬಂದಿ ಮುಖ್ಯಸ್ಥರು, ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *