ಹುಣಸೂರು:4 ಜುಲೈ 2022
ನಂದಿನಿ ಮೈಸೂರು
*ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ, 05 ಮೋಟಾರ್ ಬೈಕ್ ವಶ*
(ಹುಣಸೂರು ಟೌನ್ ಪೊಲೀಸರ ಮಿಂಚಿನ ಕಾರ್ಯಾಚರಣೆ)*
ಹುಣಸೂರು: ದಿನಾಂಕ:31/07/2022 ರ ಭಾನುವಾರದಂದು ತಾಲ್ಲೋಕಿನ ಬೀರನಹಳ್ಳಿ ಗ್ರಾಮದ ವಾಸಿ ಹರೀಶ್ ಎಂಬುವರು ವೈಯಕ್ತಿಕ ಕೆಲಸಕ್ಕಾಗಿ ತಮ್ಮ HERO SPLENDOR ಮೋಟಾರ್ ಬೈಕ್ ನಲ್ಲಿ ಹುಣಸೂರು ಪಟ್ಟಣಕ್ಕೆ ಬಂದಿದ್ದು, ಮಧ್ಯಾಹ್ನ 1:30 ಗಂಟೆ ಸಮಯದಲ್ಲಿ ಬಜಾರ್ ರಸ್ತೆಯಲ್ಲಿರುವ SRS ಬಾರ್ ಸಮೀಪ ಬೈಕ್ ನಿಲ್ಲಿಸಿದ್ದಾಗ ಖದೀಮರು ತಮ್ಮ ಕೈಚಳಕ ತೋರಿಸಿ ಬೈಕ್ ಕಳ್ಳತನ ಮಾಡಿದ್ದು, ಈ ಸಂಬಂಧ ನೆನ್ನೆ ದಿನ ದಿನಾಂಕ:03/08/2022 ರಂದು ಹುಣಸೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇತ್ತೀಚಿಗೆ ಹುಣಸೂರು ಪಟ್ಟಣದಲ್ಲಿ ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚು-ಹೆಚ್ಚು ವರದಿಯಾಗುತ್ತಿದ್ದುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಣಸೂರು ಉಪ-ವಿಭಾಗದ DYSP ಶ್ರೀ ರವಿಪ್ರಸಾದ್ ರವರು ಹಾಗೂ ಟೌನ್ ಪೊಲೀಸ್ ಠಾಣೆಯ INSPECTOR ಶ್ರೀ ಶ್ರೀನಿವಾಸ್ ರವರು ತಮ್ಮ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳ ಒಂದು ತಂಡವನ್ನು ರಚನೆ ಮಾಡಿ ಸೂಕ್ತ ಮಾರ್ಗದರ್ಶನ ಮಾಡಿದ್ದು, ಈ ತಂಡವು ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ಹುಣಸೂರು ಪಟ್ಟಣದ ಹನಗೋಡು ರಸ್ತೆಯಲ್ಲಿರುವ ನಿಲುವಾಗಿಲು ಕ್ರಾಸ್ ಬಳಿ ಮೇಲ್ಕಂಡ ಪ್ರಕರಣದಲ್ಲಿ ಕಳ್ಳತನವಾಗಿದ್ದ ಮೋಟಾರ್ ಬೈಕ್ ಸಮೇತ 01) ತಟ್ಟೆಕೆರೆ ಹೊಸಕೋಟೆ ಗ್ರಾಮದ ರಾಮಸ್ವಾಮಿ (32 ವರ್ಷ) ಹಾಗೂ 02) ಅಂಗಟಹಳ್ಳಿ ಗ್ರಾಮದ ಗಿರೀಶ (28 ವರ್ಷ) ಎಂಬ ಇಬ್ಬರು ಆಸಾಮಿಗಳನ್ನು ಹಿಡಿದುಕೊಂಡು, ಹೆಚ್ಚಿನ ವಿಚಾರಣೆ ನಡೆಸಿ ಹುಣಸೂರು ಟೌನ್ ಪೊಲೀಸ್ ಠಾಣೆಯ 04 ಮತ್ತು ಹುಣಸೂರು ಗ್ರಾಮಾಂತರ ಠಾಣೆಯ 01 ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳನ್ನು ಭೇದಿಸಿ ಒಟ್ಟು 02 HONDA SHINE, 02 SPLENDOR ಮತ್ತು 01 TVS SCOOTY ಸೇರಿದಂತೆ ಒಟ್ಟು 05 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಹುಣಸೂರು ಟೌನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಶ್ರೀ ಲೋಕೇಶ್, ಸಿಬ್ಬಂದಿಯವರಾದ ASI ಪುಟ್ಟನಾಯಕ, ಪ್ರಭಾಕರ, ಇರ್ಫಾನ್, ಅನಿಲ್ ಕುಮಾರ್, ರಘು ಮತ್ತು ಟೌನ್ ಪೊಲೀಸ್ ಠಾಣೆಯ ಗುಪ್ತಮಾಹಿತಿ ಸಿಬ್ಬಂದಿ ಪ್ರಸಾದ್ ಧರ್ಮಾಪುರ ರವರುಗಳು ಭಾಗವಹಿಸಿದ್ದರು.
ಅಪರಾಧ ಪತ್ತೆ ತಂಡದ ಈ ಕಾರ್ಯಾಚರಣೆಯನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಚೇತನ್.ಆರ್ IPS ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ನಂದಿನಿ ರವರುಗಳು ಶ್ಲಾಘಿಸಿರುತ್ತಾರೆ.