ಹುಣಸೂರು :11 ಜನವರಿ 2022
ನಂದಿನಿ
ಅಣ್ಣ ಕಾರು ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದು ಚಿಕ್ಕಪ್ಪನ ಮಗಳು ತೀವ್ರ ಆಘಾತಗೊಂಡು ಹೃದಯಾಘಾತದಿಂದ ಮೃತಪಟ್ಟಿರುವ ಮನಕಲಕುವ ಘಟನೆ ಹುಣಸೂರಿನಲ್ಲಿ ನಡೆದಿದೆ.
ಅತಿಯಾದ ವೇಗದಿಂದ ಚಲಿಸುತ್ತಿದ್ದ ಕಾರು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ (ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ)ಹುಣಸೂರು ತಾಲೂಕಿನ ಸೋಮನಹಳ್ಳಿ ಬಳಿ ನಡೆದಿದೆ.
ಸೋಮವಾರ ತಡರಾತ್ರಿ ಸಂಭವಿಸಿದ ದುರ್ಘಟನೆಯಲ್ಲಿ ಕಾರು ಚಾಲಕ ಬನ್ನಿಕುಪ್ಪೆ ಗ್ರಾಮದ ಕೀರ್ತಿರಾಜ್(೩೯) ಮತ್ತು ಬೈಕ್ ಸವಾರ ಮೈಸೂರು ನಗರದ ರವಿಕುಮಾರ್(೩೭) ಮೃತಪಟ್ಟಿದ್ದಾರೆ. ಮೈಸೂರು ಉದಯಗಿರಿಯ ನಿವಾಸಿ ಇರ್ಫಾನ ಖಾನ್ ಮತ್ತು ಬನ್ನಿಕುಪ್ಪೆ ಗ್ರಾಮದ ನಾಗೇಂದ್ರ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬನ್ನಿಕುಪ್ಪೆ ಗ್ರಾಮದ ವಿಜಯವಾಣಿ ಪತ್ರಿಕೆ ಪ್ರತಿನಿಧಿ ಚಲುವರಾಜುರ ಪುತ್ರ ಕೀರ್ತಿರಾಜ್ ಕಾರ್ಯನಿಮಿತ್ತ ಕಾರಿನಲ್ಲಿ ಸಂಜೆ ೮ರ ಸಮಯದಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದರು. ಅತಿಯಾದ ವೇಗದಿಂದ ಚಲಿಸುತ್ತಿದ್ದ ಕಾರಣ ವೇಗ ನಿಯಂತ್ರಣಕ್ಕೆ ಬಾರದೆ ಎದುರಿನಲ್ಲಿ ಚಲಿಸುತ್ತಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ್ದಾರೆ. ಪರಿಣಾಮ ಕೀರ್ತಿರಾಜ್ ಸ್ಥಳದಲ್ಲೇ ಮೃತಪಟ್ಟರು. ಕೂಡಲೇ ಮೂವರು ಬೈಕ್ ಸವಾರರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮಚಿಕಿತ್ಸೆ ನೀಡಿ ಮೈಸೂರಿಗೆ ರವಾನಿಸಲಾಯಿತು.
ಮಂಗಳವಾರ ಇರ್ಫಾನ್ ಖಾನ್‌ನೊಂದಿಗೆ ಪ್ರಯಾಣಿಸುತ್ತಿದ್ದ ರವಿಕುಮಾರ್ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ನಾಗೇಂದ್ರ ಮತ್ತು ಇರ್ಫಾನ್ ಖಾನ್‌ರಿಗೆ ಚಿಕಿತ್ಸೆ ಮುಂದುವರದಿದೆ.
ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಖಂಗೊಂಡಿರುವ ಕಾರು ಮತ್ತು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕೀರ್ತಿರಾಜ್ ಸಾವಿನ ಸುದ್ದಿ ಕೇಳಿದ ರಶ್ಮಿ ದು:ಖ ತಾಳದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಮಂಗಳವಾರ ಸಂಜೆ ಇಬ್ಬರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು.
ಬದುಕಿ ಬಾಳಬೇಕಿದ್ದ ಅಣ್ಣ ತಂಗಿ ಬಾರದ ಲೋಕಕ್ಕೆ ಜೊತೆಯಾಗಿಯೇ ಹೊರಟಿದ್ದನ್ನ ಕಂಡ ಕುಟುಂಬಸ್ಥರ ಆಕ್ರಂದನ ಕರುಳು ಹಿಂಡುವಂತಿತ್ತು.