ನಂದಿನಿ ಮೈಸೂರು
ಅನ್ನದಾತರ ಬಳಿಗೆ ಅರಣ್ಯ ಇಲಾಖೆ ರಾಜ್ಯ ರೈತ ಕಲ್ಯಾಣ ಸಂಘದ ಮನವಿಗೆ ಅರಣ್ಯಾಧಿಕಾರಿಗಳ ಸ್ಪಂದನೆ
ಮೈಸೂರು: ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು,ಇದನ್ನು ತಡೆಗಟ್ಟಲು ಹಾಗೂ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಖುದ್ದು ಅರಣ್ಯಾಧಿಕಾರಿಗಳು ಗ್ರಾಮಸ್ಥರ ಬಳಿಗೆ ತೆರಳಿ ಸಮಾಲೋಚನೆ ಸಭೆ ನಡೆಸಿದರು.
ಕಾಡು ಪ್ರಾಣಿಗಳ ಹಾವಳಿ ತಡೆ ಸಂಬಂಧ ರೈತರ ನೆರವಿಗೆ ಧಾವಿಸಬೇಕೆಂಬ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಅವರ ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳು, ಶನಿವಾರ ನಂಜನಗೂಡು ತಾಲೂಕಿನ ರಾಜೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಸಭೆ ನಡೆಸಿ,ರೈತರಿಗೆ ಧೈರ್ಯ ತುಂಬಿದರು.
ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ನಿರ್ದೆಶಕರಾದ ಡಾ.ರಮೇಶ್ ಕುಮಾರ್, ಯಡಿಯಾಲ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್,ಗುಂಡ್ಲುಪೇಟೆ ವಲಯದ ಸಂರಕ್ಷಣಾಧಿಕಾರಿ ಸತೀಶ್ ಹಾಗೂ ಆರ್ ಎಫ್ ನಿವೇದಿತ ಅವರುಗಳು ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಾಜೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಖುದ್ದು ಭಾಗವಹಿಸಿ, ಅನ್ನದಾತರ ಮನವಿ ಆಲಿಸಿದರು.
ಈ ವೇಳೆ ಭೂಮಿಪುತ್ರ ಚಂದನ್ ಗೌಡ ಮಾತನಾಡಿ, ಹಿಂದಿನಿಂದಲೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಜನ- ಜಾಮುವಾರುಗಳು ಬಲಿಯಾಗಿವೆ.ಗ್ರಾಮಸ್ಥರು ಆತಂಕದಿಂದಲೇ ಜೀವನ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.ಆದ್ದರಿಂದ ಪ್ರಾಣಿಗಳ ದಾಳಿ ತಡೆಯುವ ಮತ್ತು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನೂತನ,ವೈಜ್ಞಾನಿಕ ವಿಧಾನಗಳನ್ನು ಜಾರಿಗೆ ತಂದು ಜನ-ಜಾನುವಾರುಗಳನ್ನು ಸಂರಕ್ಷಿಸಬೇಕಿದೆ ಎಂದರು.
ಕಾಡು ಪ್ರಾಣಿಗಳ ಹಾವಳಿ ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳುವ ಮೂಲಕ ಗ್ರಾಮಗಳಿಗೆ ಕಾಡು ಪ್ರಾಣಿಗಳು ಬರದಂತೆ ತಡೆಗಟ್ಟುವ ಶಾಶ್ವತ ಪರಿಹಾರಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು,ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಅರಣ್ಯಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಹೇಮಂತ್ ಗೌಡ, ಹರೀಶ್ ಪಿ.ಗೌಡ,ಮೂರ್ತಿ,ಕಂದಸ್ವಾಮಿ, ಉಮೇಶ್, ದಾಸೆಗೌಡ, ಪ್ರತಾಪ್, ರವಿಕುಮಾರ್, ನಂದೀಶ್, ಗಜೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.