ನಂದಿನಿ ಮೈಸೂರು
ಮತದಾನದಿಂದ ದೂರ ಉಳಿಯಬೇಡಿ: ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್
ಮೈಸೂರು,ಏ.14:- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಸಂವಿಧಾನತ್ಮಕ ಹಕ್ಕಾಗಿದ್ದು, ಯಾರೂ ಕೂಡ ಮತದಾನದಿಂದ ದೂರ ಉಳಿಯಬಾರದು ಎಂದು ಮೈಸೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಡಿ.ಗಿರೀಶ್ ಅವರು ಕರೆ ನೀಡಿದರು.
ಮೈಸೂರು ತಾಲ್ಲೂಕಿನ ಇಲವಾಲ ಗ್ರಾಮದಲ್ಲಿ ಗುರುವಾರ ತಾಲ್ಲೂಕು ಸ್ವೀಪ್ ಸಮಿತಿ ಹಾಗೂ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಮತದಾನ ಕುರಿತು ಮೇಣದ ಬತ್ತಿ ಮೆರವಣಿಗೆಯಲ್ಲಿ ಜಾಗೃತಿ ಮೂಡಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನದ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ಮತದಾನದ ಪ್ರಕ್ರಿಯೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಮತದಾರರ ಮೇಲಿದೆ. ದೇಶ ಅಭಿವೃದ್ಧಿಯಾಗಲು ಪ್ರತಿಯೊಬ್ಬ ನಾಗರಿಕರೂ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಸ್ವಂತ ವಿವೇಚನೆಯಿಂದ ಕಡ್ಡಾಯವಾಗಿ ಮತದಾನ ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಆದಿಕಾರಿ ಕೆ.ಎಂ.ಗಾಯಿತ್ರಿ ಅವರ ಮಾರ್ಗದರ್ಶನದಂತೆ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಚಟುವಟಿಕೆಯಡಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿಗಳಿಂದ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದ್ದು, ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ವೀಲ್ ಚೇರ್ ವ್ಯವಸ್ಥೆ, ಮತದಾರರಿಗೆ ನೆರಳು, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮೆರವಣಿಗೆಯು ಇಲವಾಲ ಗ್ರಾಮದ ಬೀದಿಗಳಲ್ಲಿ ಸಾಗಿ ಗ್ರಾಮಸ್ಥರಿಗೆ ‘ಮತದಾನ ನಿಮ್ಮ ಹಕ್ಕು ಕಡ್ಡಾಯವಾಗಿ ಮತದಾನ ಮಾಡಿ, ಆಸೆ- ಆಮಿಷಗಳಿಗೆ ಒಳಗಾಗಬೇಡಿ, ಮತದಾನ ಮಾಡೋಣ ಪ್ರಜಾಪ್ರಭುತ್ವ ಸದೃಢಗೊಳಿಸೋಣ ಎಂಬ ಜಾಗೃತಿ ಫಲಕ ಹಿಡಿದು ಅರಿವು ಮೂಡಿಸಲಾಯಿತು. ಇದೇ ವೇಳೆ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್, ತಾಲ್ಲೂಕು ಆರೋಗ್ಯ ಅಧಿಕಾರಿ ರಾಜೇಶ್ವರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹೇಮಂತ್ ಕುಮಾರ್, ಪ್ರದೀಪ್ ಕುಮಾರ್, ವಿ.ಕೆ.ಗಿರೀಶ್, ಇಲವಾಲ ಹೋಬಳಿಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.