ನಂದಿನಿ ಮೈಸೂರು
ಮೈಸೂರು,ಮಾ.4:- ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲೂ ಕಡ್ಡಾಯವಾಗಿ ಸ್ಮಶಾನ ಇರಬೇಕು. ಸ್ಮಶಾನ ಜಾಗವನ್ನು ಗುರುತಿಸಿ, ಒತ್ತುವರಿ ತೆರವುಗೊಳಿಸುವ ಮೂಲಕ ಮೂಲಭೂತ ಸೌಕರ್ಯ ಒಳಗೊಂಡಂತೆ ಅಭಿವೃದ್ಧಿಪಡಿಸಬೇಕು ಎಂದು ಶಾಸಕರಾದ ಜಿ.ಟಿ.ದೇವೇಗೌಡ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ಶನಿವಾರ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮೀಣ ಭಾಗದಲ್ಲಿರ ಗ್ರಾಮಗಳಿದ್ದು, 83 ಗ್ರಾಮಗಳು ಸ್ಮಶಾನದ ಜಾಗ ಹೊಂದಿದ್ದು, 9 ಗ್ರಾಮಗಳಿಗೆ ಹೊಸದಾಗಿ ಸ್ಮಶಾನದ ಜಾಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 33 ಸ್ಮಶಾನಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಬಾಕಿ ಉಳಿದಿರುವ 59 ಸ್ಮಶಾನಗಳನ್ನು ಎಲ್ಲಾ ಯೋಜನೆಗಳನ್ನು ಒಗ್ಗೂಡಿಸಿಕೊಂಡು ಬರುವ ಆರ್ಥಿಕ ವರ್ಷದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಸೂಚಿಸಿದರು.
ಗ್ರಾಮಗಳಲ್ಲಿ ಅಳತೆಯಾಗದ ಹಾಗೂ ಒತ್ತುವರಿಯಾಗಿರುವ ಸ್ಮಶಾನಗಳನ್ನು ಒಂದು ವಾರದೊಳಗೆ ಒತ್ತುವರಿ ತೆರವುಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು. ಅಭಿವೃದ್ಧಿ ಪಡಿಸದೇ ಬಾಕಿ ಇರುವ ಸ್ಮಶಾನಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆ 2023-24 ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಸೇರಿಸಿ ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮುಂಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಲ್ಲಿ ಖಾಸಗಿ ಬೋರ್‌ವೆಲ್ ಪಟ್ಟಿಮಾಡಬೇಕು. ಅಲ್ಲದೆ ನೀರಿನ ಟ್ಯಾಂಕ್ ವಾಹನಗಳನ್ನು ಸುಸ್ತಿಯಲ್ಲಿಡಬೇಕು. ಅಂಗನವಾಡಿ, ಶಾಲೆಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿಯುವ ನೀರು, ಬೀದಿ ದೀಪ, ಸ್ವಚ್ಚತೆ ಕುರಿತಂತೆ ಎಲ್ಲಾ ಸೌಲಭ್ಯಗಳು ಒದಗಿಸುವುದರ ಜೊತೆಗೆ ನಿರ್ವಹಣೆಯನ್ನೂ ಮಾಡಬೇಕು. ಪ್ರತಿ ಗ್ರಾಮದಲ್ಲಿರುವ ಕುಡಿಯುವ ಟ್ಯಾಂಕ್ ಗಳನ್ನು ಶುಚಿಗೊಳಿಸಬೇಕು, ಬೇಸಿಗೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಎಲ್ಲರು ಒಟ್ಟಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ಮಾತನಾಡಿ,
ಮಾನವೀಯ ನೆಲೆಗಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಸ್ಮಶಾನ ಅಭಿವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳುವ ಮೂಲಕ ಗ್ರಾಮಗಳಲ್ಲಿ ಜಾಗ ಗುರುತಿಸಿಕೊಟ್ಟರೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು ಎಂದರು.
ಬದುಕಿದ್ದಾಗ ಜೀವನ ನಡೆಸಲು ನೆಲೆ ಹುಡುಕುತ್ತೇವೆ. ಮರಣ ಹೊಂದಿದಾಗ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ನೆಲೆ ಇಲ್ಲ ಎಂದರೆ ಅದು ಅಮಾನವೀಯವಾಗುತ್ತದೆ. ಹಾಗಾಗಿ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಮಶಾನ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಚ್.ಡಿ.ಗಿರೀಶ್ ಅವರು, ತಹಶಿಲ್ದಾರ್ ಬಿ.ಎನ್.ಗಿರೀಶ್ ಅವರು, ಭೂ ದಾಖಲೆ ಸಹಾಯಕ ನಿರ್ದೇಶಕರ ಚಿಕ್ಕಣ್ಣ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಜರಿದ್ದರು.