ಯುವಜನರು ಕ್ಷಣಿಕ ಸುಖದ ಆಸೆಗೆ ಬಲಿಯಾಗಿ ದುಶ್ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೇ ಶಿಸ್ತು, ಸಂಯಮ ಹಾಗೂ ಪರೋಪಕಾರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಛೇರಿಯ ಸಂಪನ್ಮೂಲ ವ್ಯಕ್ತಿ ಭಾಸ್ಕರ್ ಮನವಿ ಮಾಡಿದರು.
ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು…
ಯುವಶಕ್ತಿಯು ಬಲಿಷ್ಠವಾದ ಶಕ್ತಿಯಾಗಿದ್ದು ಸುಭದ್ರ ರಾಷ್ಟ್ರದ ನಿರ್ಮಾಣದಲ್ಲಿ ಯುವಜನರ ಪಾತ್ರವು ಅಪಾರವಾಗಿದೆ. ಯುವಜನರು ಕೆಲವು ವ್ಯಕ್ತಿಗಳಿಂದ ಆಮಿಷಕ್ಕೆ ಒಳಗಾಗಿ ಕ್ಷಣಿಕ ಸುಖದ ಆಸೆಯಿಂದ ಸಮಾಜಕ್ಕೆ ಕೇಡುಂಟಾಗುವ ಕೃತ್ಯಗಳನ್ನು ಎಸಗುವ ಮೂಲಕ ಸಮಾಜ ಕಂಟಕರಾಗುತ್ತಿದ್ದಾರೆ. ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಸೇವಿಸಿ, ಮಧ್ಯವ್ಯಸನಿಗಳಾಗಿ ತಮ್ಮ ಅಮೂಲ್ಯವಾದ ಆರೋಗ್ಯವನ್ನು ಹಾಳಾಮಾಡಿಕೊಳ್ಳುವ ಜೊತೆಗೆ ಸಮಾಜಕ್ಕೆ ಹೊರೆಯಾಗಿ ಜೀವಂತ ಶವಗಳಂತಾಗಿ ದಿನ ಕಳೆಯುತ್ತಿದ್ದಾರೆ. ಮಾದಕ ವಸ್ತುಗಳು ಯುವಜನರ ಜೀವನವನ್ನೇ ಬಲಿ ತೆಗೆದುಕೊಳ್ಳುವ ಜೊತೆಗೆ ಅಕಾಲಿಕವಾಗಿ ಮೃತ್ಯುವಿನ ದವಡೆಗೆ ಯುವಜನರು ಸಿಲುಕಿ, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಯುವಜನರ ಭವಿಷ್ಯ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಈ ಬೆಳವಣಿಗೆಯು ಆಘಾತಕಾರಿಯಾಗಿದೆ. ಯುವಜನರು ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರವಿದ್ದು ತಂದೆತಾಯಿಗಳಿಗೆ ಹಾಗೂ ಗುರುಹಿರಿಯರಿಗೆ ಹೆಸರು ಮತ್ತು ಕೀರ್ತಿಯನ್ನು ತರುವಂತಹ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಸೇವಾಮನೋಭಾವನೆ ಹಾಗೂ ಪರೋಪಕಾರ ಗುಣಗಳು ಜೀವನದ ಉಸಿರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಜಿಲ್ಲಾ ಹಾಲು ಒಕ್ಕೂಟದ ಮಾಜಿನಿರ್ದೇಶಕ ಶೀಳನೆರೆ ಅಂಬರೀಶ್ ಮಾತನಾಡಿ ಯುವಜನರು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಸ್ವಾಭಿಮಾನಿಗಳಾಗಿ ಕಾಯಕ ತತ್ವಕ್ಕೆ ಒತ್ತು ನೀಡಿ ಕಷ್ಟಪಟ್ಟು ದುಡಿದು ಜೀವನ ನಡೆಸಬೇಕು. ಪೋಷಕರು ತಮ್ಮ ಮಕ್ಕಳಿಗಾಗಿ ಹಣ ಆಸ್ತಿಯನ್ನು ಸಂಪಾದನೆ ಮಾಡದೇ ಸುಸಂಸ್ಕೃತರಾಗಿ ವಿದ್ಯಾವಂತರಾಗಿರುವ ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯಾಗಿ ಕೊಡುಗೆ ನೀಡಬೇಕು ಎಂದು ಹೇಳಿದರು..
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲಕುಲಾಲ್, ಪುರಸಭೆ ಸದಸ್ಯ ಡಾ.ಕೆ.ಎಸ್.ರಾಜೇಶ್, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್, ತಾಲ್ಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎನ್.ಎಸ್.ಸತೀಶ್, ತಾಲ್ಲೂಕು ಕಸಾಪ ಮಾಜಿಅಧ್ಯಕ್ಷ ಕೆ.ಆರ್.ನೀಲಕಂಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಚಾಲಕಿ ಅನ್ನಪೂರ್ಣ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು, ಸ್ವಾಸ್ಥ್ಯ ಸಂಕಲ್ಪ ಯೋಜನೆಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*ವರದಿ.ಡಾ.ಕೆ.ಆರ್.ನೀಲಕಂಠ* .
*ಕೃಷ್ಣರಾಜಪೇಟೆ* . *ಮಂಡ್ಯ*