*2022ರ ಸೆಪ್ಟಂಬರ್ ಮಾಸದಲ್ಲಿ ಪವಿತ್ರ ಕುಂಭಮೇಳ ನಡೆಯಲಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮಕ್ಕೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿ ಭೇಟಿ* .
ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ಸೇರಿದಂತೆ ಮೂರು ಜೀವಂತ ನದಿಗಳು ಒಂದಾಗಿ ಸೇರುವ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಪುರ, ಅಂಬಿಗರಹಳ್ಳಿ ಹಾಗೂ ಸಂಗಾಪುರ ಗ್ರಾಮಗಳ ಸಮೀಪದಲ್ಲಿರುವ ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರ..
ಇದೇ 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಪವಿತ್ರ ಕುಂಭಮೇಳವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲು ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆಗಳು, ಪೂರ್ವಬಾವಿ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಮತ್ತು ತಹಶೀಲ್ದಾರ್ ಎಂ.ವಿ.ರೂಪ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸಮಾಲೋಚನೆ ಮಾಡಿದ ಜಿಲ್ಲಾಧಿಕಾರಿ ಅಶ್ವಥಿ…
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ನಿರ್ಮಲಾನಂದನಾಥ ಶ್ರೀಗಳು, ಜೆ.ಎಸ್.ಎಸ್ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶಿವರಾತ್ರಿಮಹಾದೇಶಿಕೇಂದ್ರ ಸ್ವಾಮೀಜಿಯವರು, ಶ್ರೀ ಚಂದ್ರವನ ಆಶ್ರಮದ ದುರ್ದುಂಡೇಶ್ವರ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳು, ಕಾಗಿನೆಲೆಯ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಶ್ರೀಗಳು, ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀ ಗಂಗಾಧರ ಶಿವಾಚಾರ್ಯ ಶ್ರೀಗಳು ಸೇರಿದಂತೆ ಕಾಪನಹಳ್ಳಿ ಗವಿಮಠದ ಶ್ರೀ ಚನ್ನವೀರಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅತಿರಥ ಮಹಾರಥರು ಕುಂಭಮೇಳದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರಿಗೆ ಯಾವುದೇ ಕುಂದುಕೊರತೆಗಳು ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಶ್ವಥಿ ಅವರು ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿ ಅಗತ್ಯ ಸಿದ್ಧತಾ ಕೆಲಸಗಳನ್ನು ಪಟ್ಟಿಮಾಡಿಕೊಂಡು ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರಿಂದ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು..
ತ್ರಿವೇಣಿ ಸಂಗಮವು ಕೆ.ಆರ್.ಪೇಟೆ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರವಿದ್ದು ಶ್ರೀ ಕ್ಷೇತ್ರಕ್ಕೆ ಸಂಪರ್ಕ ನೀಡುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆಯಲ್ಲದೇ, ಬಸ್ಸುಗಳು ಸೇರಿದಂತೆ ಇತರೆ ವಾಹನಗಳ ಸಂಚಾರವು ಇಲ್ಲದೇ ಭಕ್ತಾದಿಗಳು ಸಂಕಷ್ಠ ಎದುರಿಸುತ್ತಿದ್ದಾರೆ.. ಕಳೆದ 7 ವರ್ಷಗಳ ಹಿಂದೆ ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಕುಂಭಮೇಳವು ಕ್ಷೇತ್ರದ ಅಂದಿನ ಶಾಸಕರಾಗಿದ್ದ ಕೆ.ಸಿ.ನಾರಾಯಣಗೌಡರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದಿತ್ತು..ಕುಂಭಮೇಳದ ಸವಿ ನೆನಪಿಗಾಗಿ ಕಾವೇರಿ ನದಿಗೆ ಹೊಂದಿಕೊಂಡಂತೆ ಕೆ.ಆರ್.ಪೇಟೆ ಕೆ.ಆರ್.ನಗರ ತಾಲ್ಲೂಕಿನ ದಗ್ನಾಳು ಸೇತುವೆಯ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಪ್ರಸ್ತುತ ಸೇತುವೆಯ ಕೆಲಸವು ಸಂಪೂರ್ಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದ ಸಮಗ್ರವಾದ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಪಟ್ಟಿಯನ್ನು ತಯಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ರೂಪ ಅವರಿಗೆ ನಿರ್ದೇಶನ ನೀಡಿದರು..
ಈ ಸಂದರ್ಭದಲ್ಲಿ ಪವಿತ್ರ ತ್ರಿವೇಣಿ ಸಂಗಮ ಅಭಿವೃದ್ಧಿ ಕೆಲಸ ಕಾರ್ಯಗಳ ಅನುಷ್ಠಾನಕ್ಕೆ ಸಮಿತಿಯನ್ನು ರಚಿಸಿ ಸ್ಥಳೀಯ ಮುಖಂಡರನ್ನೊಳಗೊಂಡಂತೆ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಜಿಲ್ಲಾಧಿಕಾರಿಗಳು ಸಮ್ಮತಿ ಸೂಚಿಸಿದರು.. ಸಂಗಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಸಮಿತಿಯ ಸಂಚಾಲಕ ಡಾ.ಅಂ.ಚಿ.ಸಣ್ಣಸ್ವಾಮಿಗೌಡ ಉಪಸ್ಥಿತರಿದ್ದು ಅಗತ್ಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು..