ಸಂತಫಿಲೋಮಿನಾ ಕಾಲೇಜಿನಲ್ಲಿ ೭ನೇ ವಾರ್ಷಿಕ ಘಟಿಕೋತ್ಸವ

 

ನಂದಿನಿ ಮೈಸೂರು

ಜ್ಞಾನದ ಜೊತೆಗೆ ಸಂಸ್ಕೃತಿ ಮತ್ತು ವಿವೇಕ ಬೆಳೆಸಿಕೊಳ್ಳಿ: ಡಾ.ಸಿ.ಎನ್.ಮಂಜುನಾಥ್

– ಸಂತಫಿಲೋಮಿನಾ ಕಾಲೇಜಿನಲ್ಲಿ ೭ನೇ ವಾರ್ಷಿಕ ಘಟಿಕೋತ್ಸವ

ಜ್ಞಾನದ ಜೊತೆಗೆ ಸಂಸ್ಕೃತಿ ಮತ್ತು ವಿವೇಕ ಬೆಳೆಸಿಕೊಳ್ಳಿ ಎಂದು ಜಯದೇವ ಹೃದ್ರೋಗ ಸಂಶೋದನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕರೆ ನೀಡಿದರು.

ನಗರದ ಸಂತಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ೭ನೇ ವಾರ್ಷಿಕ ಘಟಿಕೋತ್ಸವ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಮೌಲ್ಯ ಗಳಿಸಲು ವಿಶ್ವವಿದ್ಯಾಲಯ, ಪದವಿ, ಪದಕ ಹಾಗೂ ಶ್ರೇಣಿ ಇದ್ದರೆ ಸಾಲದು. ಅದರೊಂದಿಗೆ ನಮ್ಮ ಸಂಸ್ಕೃತಿ ಹಾಗೂ ವಿವೇಕ ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ವಿದ್ಯಾರ್ಥಿಗಳ ಭವಿಷ್ಯ ಕಾಲೇಜುಗಳಲ್ಲಿ ರೂಪುಗೊಳ್ಳಲಿದೆ. ಅದರ ಹೊರತಾಗಿಯೂ ಮಾನವೀಯತೆ, ಸಾಮಾನ್ಯ ಜ್ಞಾನ, ಉತ್ತಮ ನಡವಳಿಕೆ, ಕೌಶಲ್ಯತೆ ಮೂಲಕ ನೀವು ನಿಮ್ಮ ವ್ಯಕ್ತಿತ್ವನ್ನು ಮತ್ತಷ್ಟು ಉನ್ನತೀಕರಿಸಿಕೊಳ್ಳಲು ಪ್ರಯತ್ನಿಸಬೇಕು. ನಿಮ್ಮಲ್ಲಿರುವ ಶಕ್ತಿ ಈ ರಾಜ್ಯ , ಈ ದೇಶಕ್ಕೆ ಕೊಡುಗೆಯಾಗಿ ಬರಬೇಕು ಎಂದು ಆಶಿಸಿದರು.

ದುರಾದೃಷ್ಟವಶಾತ್ ಇಂದು ಕೆಲ ಆಚರಣೆಗಳು ನಮ್ಮ ಯುವಶಕ್ತಿಯ ಭವಿಷ್ಯದ ಮೇಲೆ ಸವಾರಿ ಮಾಡುತ್ತಿವೆ. ಆಚರಣೆ, ಅಪರಾಧಗಳು, ದ್ವೇಷ, ವಿನಾಶಕಾರಿ ವಿಚಾರಗಳೇ ಇಂದು ಹೆಚ್ಚು ಹೆಚ್ಚಾಗಿ ಮುನ್ನೆಲೆಗೆ ಬರುವ ಮೂಲಕ ಭವಿಷ್ಯವನ್ನು ಮಂಕಾಗಿಸುತ್ತಿವೆ ಎಂದ ಅವರು, ನಮ್ಮ ಬುದ್ದಿವಂತಿಕೆಯನ್ನು ಹೆಚ್ಚು ರಚನಾತ್ಮಕವಾಗಿ ಬಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸಂಸ್ಕೃತಿ, ಬುದ್ದಿವಂತಿಕೆ ಹಾಗೂ ಸಾಮಾಜಿಕ ಬದ್ಧತೆಯಿಲ್ಲದ ವಿದ್ಯೆ ಕೊಳಚೆ ನೀರಿದ್ದಂತೆ. ರಾಷ್ಟ್ರದ ಬೆಳವಣಿಗಾಗಿ ನಾವು “ಎಂಪ್ಯಾಥಿ, ಎಜುಕೇಷನ್, ಎನರ್ಜಿ, ಎನ್ವಿರಾನ್‌ಮೆಂಟ್ ಹಾಗೂ ಎಂಟರ್‌ಪ್ರುನರ್‌ಶಿಪ್” ಎಂಬ ಐದು ‘ಇ’ ಗಳನ್ನು ಒಳಗೊಳ್ಳಬೇಕಿದೆ ಎಂದು ತಿಳಿಸಿದರು.

ಡಿಜಿಟಲ್ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮ ಇಂದು ಉತ್ತುಂಗದಲ್ಲಿದೆ. ಅವುಗಳಿಂದ ಜ್ಞಾನ ಹಾಗೂ ಆಲೋಚನೆಗಳ ಪ್ರಸರಣ ವೇಗದ ಗತಿಯಲ್ಲಿ ಪಸರಿಸುತ್ತಿದೆ. ಇದು ಒಂದು ಬಗೆಯಲ್ಲಿ ಎರಡು ಅಲಗಿನ ಆಯುಧ ಇದ್ದಂತೆ. ಈ ಮೂಲಕ ಇಡೀ ಪ್ರಪಂಚವನ್ನು ಇಂದು ನಮ್ಮ ಕೈಯಲ್ಲಿ ನೋಡಬಹುದಾಗಿದೆ ಎಂದರು.

ಜಗತ್ತು ಸ್ಪರ್ಧಾತ್ಮಕತೆಯತ್ತ ಹೊರಳಿದೆ. ಇಂತಹ ಹೊತ್ತಿನಲ್ಲಿ ಒತ್ತಡ ಸಹಜ. ಈ ವೇಳೆ ನಿಮ್ಮ ಕನಸು ಸಾಕಾರಗೊಳ್ಳಬೇಕಾದಲ್ಲಿ ಬದ್ಧತೆ, ಸಹಾನುಭೂತಿ, ಸ್ಥಿರತೆ ಹಾಗೂ ಸಂಪರ್ಕ ಸಾಧನೆ ಬಗ್ಗೆ ಅರಿವು ಇರಬೇಕು ಎಂದ ಅವರು, ಜೀವನವು ಸದಾ ಏರಿಳಿತಗಳಿಂದ ಕೂಡಿರುತ್ತದೆ. ಅದು ಒಂದು ಬಗೆಯ ಇಸಿಜಿ ಇದ್ದಂತೆ. ನಾವು ಸದಾ ಚಟುವಟಿಕೆಯಲ್ಲಿ ಇದ್ದರೆ ಅದರ ಗ್ರಾಫ್ ಫಲಿತಾಂಶ ಸರಿಯಾಗಿಯೇ ಇರುತ್ತದೆ ಎಂದು ಸೂಚ್ಯವಾಗಿ ನುಡಿದರು.

ಗುರಿಗಳನ್ನು ಬೇಗ ತಲುಪಬೇಕೆಂಬ ಆತುರಕ್ಕೆ ಬಿದ್ದು ಅಡ್ಡ ದಾರಿ ಹಿಡಿಯುವುದು ಸರಿಯಲ್ಲ. ಗುರಿಯನ್ನು ತಲುಪಬೇಕಾದಲ್ಲಿ ದಾರಿಯುದ್ದಕ್ಕೂ ಕಲ್ಲು, ಮುಳ್ಳು ಇರುತ್ತವೆ. ಅವುಗಳ ಬಗ್ಗೆ ನಿಗಾ ಇಟ್ಟುಕೊಂಡೇ ಹೆಜ್ಜೆ ಇರಿಸಬೇಕಾಗುತ್ತದೆ. ಅದಕ್ಕಾಗಿ ಕಠಿಣ ಪರಿಶ್ರಮದ ಅಗತ್ಯವಿದೆ ಎಂದು ಹೇಳಿದರು.
ನಾವು ಕಲಿಯುವ ಅಂಶಗಳಲ್ಲಿ ಶಾಲೆಗಳಿಂದ ಶೇ.೫೦ರಷ್ಟು ಲಭ್ಯವಾದರೆ, ಉಳಿದ ೫೦ರಷ್ಟು ಭಾಗ ಜೀವನದ ಅಂಶಗಳಿಂದ ತಿಳಿಯುತ್ತೇವೆ. ಮನಸ್ಸು ಇಲ್ಲದ ಅಂಕಗಳಿಗೆ ಅರ್ಥವಿಲ್ಲ. ನಮ್ಮ ವರ್ತನೆ, ನಡವಳಿಕೆ, ಮೌಲ್ಯಗಳು ಭವಿಷ್ಯಗಳ ಗುರುತುಗಳಾಗಿ ಪರಿಗಣಿಸಲ್ಪಡುತ್ತವೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತಕುಮಾರ್, ಕ್ರೈಸ್ತ ಸಮುದಾಯದ ಮೈಸೂರು ಪ್ರಾಂತ್ಯದ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಂ, ರೆ.ಫಾ.ಲೆಸ್ಲಿ ಮೊರಾಸ್, ಎಂಡಿಇಎಸ್ ಕಾರ‍್ಯದರ್ಶಿ ರೆ.ಫಾ.ವಿಜಯಕುಮಾರ್, ರೆಕ್ಟರ್ ರೆ.ಫಾ. ಬರ್ನಾಡ್ ಪ್ರಕಾಶ್ ಬಾರ್ನಿಸ್, ಪ್ರಾಂಶುಪಾಲ ಡಾ.ಆಲ್ಫೋನ್ಸ್ ಡಿಸೋಜಾ, ಪರೀಕ್ಷಾ ನಿಯಂತ್ರಕ ಆರ್. ಬ್ರಿಟ್ಟೋ ಡೊಮಿನಿಕ್ ರಾಯನ್ ಉಪಸ್ಥಿತರಿದ್ದರು.
ಇದೇ ವೇಳೆ ಸ್ನಾತಕೋತ್ತರ ವಿಭಾಗದಲ್ಲಿ ೧೧ ಹಾಗೂ ಪದವಿ ವಿಭಾಗದಲ್ಲಿ ೪೯ ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು.

ವಿವಿಧ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಗೆ ಮೈಸೂರು ಮಹಾರಾಜರ ಖಾಸಗಿ ಕಾರ‍್ಯದರ್ಶಿಯಾಗಿದ್ದ ಟಿ.ಆರ್.ಎ.ತುಂಬುಚೆಟ್ಟಿ ಅವರ ಸ್ಮರಣಾರ್ಥ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *