ಮೈಸೂರು:18 ಫೆಬ್ರವರಿ 2022
ನಂದಿನಿ ಮೈಸೂರು
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿ ಎಂಟು ಸಾವಿರಕ್ಕೂ ಅಧಿಕ ಬಿಡಿ ಲೇಖನಗಳನ್ನು ಬರೆದು ಸಾಹಿತ್ಯಕೃಷಿಯನ್ನೇ ಬದುಕು ಮಾಡಿಕೊಂಡು ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಒಂದು ವಿಶಿಷ್ಟ ಸ್ಥಾನ ಗಳಿಸಿರುವ ಸಾಹಿತಿ ಹಾಗೂ ಪತ್ರಕರ್ತ ಬನ್ನೂರು ಕೆ ರಾಜು ಅವರ ಜೀವಮಾನದ ಸಾಹಿತ್ಯ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟ ಹಾಗೂ ಜೆ.ಪಿ. ನಗರದ ಲಯನ್ಸ್ ಕ್ಲಬ್ ವತಿಯಿಂದ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ನಗರದ ಹೋಟೆಲ್ ಪ್ರೆಸಿಡೆಂಟ್ ನ ಸಭಾಂಗಣದಲ್ಲಿ ಆಯೋಜಿಸಿದ್ದ ಜೆ.ಪಿ ನಗರದ ಲಯನ್ಸ್ ಕ್ಲಬ್ ನ 13ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಬನ್ನೂರು ರಾಜು ಅವರನ್ನು ಫಲತಾಂಬೂಲ ಸಹಿತ ಲೇಖಕಿಯೂ ಆದ ಲಯನ್ಸ್ ನ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾ.ಪ್ರಭಾಮೂರ್ತಿ ಅವರು ಸನ್ಮಾನಿಸಿ ವಿಶೇಷವಾಗಿ ಗೌರವಿಸಿದರು. ಲಯನ್ ಕೆ.ಎ. ಸಿದ್ದಲಿಂಗಪ್ಪ ಅವರು ಬನ್ನೂರು ರಾಜು ಅವರ ಸುಮಾರು 40 ವರ್ಷಗಳ ಸುದೀರ್ಘ ವಾದ ಸಾಹಿತ್ಯ ಬದುಕಿನ ಸಾಧನೆಯನ್ನು ಗೌರವ ಸನ್ಮಾನ ಪತ್ರದ ವಾಚನದಲ್ಲಿ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಬನ್ನೂರು ರಾಜು ಅವರು, ಸೇವೆಗೆ ಮತ್ತೊಂದು ಹೆಸರೇ ಲಯನ್ಸ್ ಕ್ಲಬ್.ಇಂಥ ಸೇವಾಸಂಸ್ಥೆಯು ನನ್ನಂತಹ ಸಾಹಿತ್ಯ ಸೇವಕನನ್ನು ಗುರುತಿಸಿ ಗೌರವಿಸುತ್ತಿರುವುದು ನನ್ನ ಸೌಭಾಗ್ಯವೆಂದು ಕೃತಜ್ಞತೆ ಸಲ್ಲಿಸಿದ ಅವರು, ಪ್ರಶಸ್ತಿ-ಪುರಸ್ಕಾರಗಳು, ಗೌರವ-ಸನ್ಮಾನಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಇಂದಿನ ಕಾಲಘಟ್ಟದಲ್ಲಿ ಅವುಗಳ ಮೌಲ್ಯ ಉಳಿಸುವ ಕೆಲಸ ಪ್ರಜ್ಞಾವಂತರಿಂದ ಮತ್ತು ಲಯನ್ಸ್ ಕ್ಲಬ್ ಗಳಂತಹ ಪ್ರಜ್ಞಾವಂತ ಸೇವಾ ಸಂಸ್ಥೆ ಗಳಿಂದ ಆಗಬೇಕಾಗಿದೆ. ದಾನ-ಧರ್ಮ, ಗೌರವ-ಸನ್ಮಾನ , ಸತ್ಪಾತ್ರರಿಗೆ, ಯೋಗ್ಯರಿಗೆ ಸಲ್ಲಿಕೆಯಾದಾಗ ಮಾತ್ರ ಅದು ಸಾರ್ಥಕವಾಗುತ್ತದೆಂದು ಹೇಳಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದ ಲಯನ್ಸ್ ನ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾ.ಪ್ರಭಾಮೂರ್ತಿ ಅವರು ಲಯನ್ಸ್ ಕ್ಲಬ್ ನ ಸಂಸ್ಥಾಪನಾ ದಿನಾಚರಣೆಯ ಮಹತ್ವ ಕುರಿತು ವಿವರವಾಗಿ ಮಾತನಾಡಿ,ಈ ಹಿನ್ನೆಲೆಯಲ್ಲಿ ಜೆ ಪಿ.ನಗರದ ಲಯನ್ಸ್ ಕ್ಲಬ್ ನ ಸೇವಾಕಾರ್ಯಗಳನ್ನು ಶ್ಲಾಘಿಸಿದರು. ಲಯನ್ ಕೆ.ವಿ. ಪಾರ್ಥ ರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ನ ವಲಯ ಮುಖ್ಯಸ್ಥ ಲಯನ್ ಯೋಗೇಶ್, ಸಂಸ್ಥಾಪನಾ ಸಮಿತಿ ಮುಖ್ಯಸ್ಥ ಲಯನ್ ಎಸ್.ಎಂ.ಶಿವಪ್ರಕಾಶ್, ಲಯನ್ ಸುಂದರಮೂರ್ತಿ, ಮಹಾನಗರ ಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್, ಜೆ.ಪಿ. ನಗರ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಕೆ.ವಿ. ಪಾರ್ಥ ರಾಜು, ಕಾರ್ಯದರ್ಶಿ ಲಯನ್ ಜೆ. ಮದ್ದಾನಸ್ವಾಮಿ, ಕೋಶಾಧಿಕಾರಿ ಬಿ.ಎಂ.ದಿನೇಶ್, ಲಯನ್ ಕೆ. ಸಿ. ಮಂಜುಳಾ, ಲಯನ್ ಎನ್. ವಿ.ಶ್ರೀನಿವಾಸ್, ಲಯನ್ ಕೆ.ಎ. ಸಿದ್ದಲಿಂಗಪ್ಪ, ಲಯನ್ ನಂದೀಶ್, ಲಯನ್ ಕಾರ್ಯಪ್ಪ, ಲಯನ್ ನಾಗೇಶ್ ಮೂರ್ತಿ, ಲಯನ್ ರಾಮಚಂದ್ರು ಬನ್ನೂರು,ಹಾಗೂ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ನಾಲಾಬೀದಿ ರವಿ ಮುಂತಾದವರು ಉಪಸ್ಥಿತರಿದ್ದರು. ಲಯನ್ ಕೆ.ಸಿ.ಮಂಜುಳಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಪ್ರಾರಂಭದಲ್ಲಿ ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಅವರಿಗೆ ಸಂತಾಪ ಸೂಚಿಸಲಾಯಿತು.