ಅನ್ಯ ವ್ಯಕ್ತಿಗಳಿಂದ ಚರ್ಚ್‌ಗೆ ಅಪಪ್ರಚಾರ,ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶಿಲಾನ್ಯಾಸದ ಬರಹ ಮರೆಮಾಚಿಲ್ಲ:ಸ್ಟ್ಯಾನಿ ಡಿ.ಅಲ್ಮೆಡಾ

ಮೈಸೂರು:14 ಡಿಸೆಂಬರ್ 2021

ನಂದಿನಿ

ಮೈಸೂರಿನ ಸಂತ ಫಿಲೋಮಿನಾ ಚರ್ಚ್‌ನಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶಿಲಾನ್ಯಾಸದ ಬರಹವನ್ನು ಮರೆಮಾಚಲಾಗಿದೆ’ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸೆಂಟ್ ಫಿಲೋಮಿನಾ ಚರ್ಚ್‌ನ ಧರ್ಮಗುರು ಸ್ಟ್ಯಾನಿ ಡಿ.ಅಲ್ಮೆಡಾ ತಿಳಿಸಿದರು.

ಸೋಮವಾರ ಚರ್ಚ್ ಆವರಣದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ದೇವಾಲಯವು ಐತಿಹಾಸಿಕ ಹಾಗೂ ಪ್ರವಾಸಿ ಕೇಂದ್ರವಾಗಿದೆ. ಮೈಸೂರು ನಗರ ಶಾಂತಿ, ಸೌಹಾರ್ಧಕ್ಕೆ ಹೆಸರುವಾಸಿಯಾಗಿದೆ. ಆದರೆ, ನಗರದಲ್ಲಿ ನಮ್ಮ ಸಮುದಾಯದಲ್ಲೇ ಇರುವ ಕೆಲ ಕಿಡಿಗೇಡಿಗಳು ಶಾಂತಿ ಕದಡುವ ಹಾಗೂ ಚರ್ಚ್ ಘನತೆಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ದುಃಖಕರ ಸಂಗತಿ ಎಂದರು.

ಕ್ರಿಸ್ತನ ಪ್ರಾರ್ಥನೆಗೆ ಬರುವ ಜನರಿಗೆ ಅನುಕೂಲವಾಗಲೆಂದು ಸಲಹೆ ಸೂಚನೆಗಳನ್ನು ಫ್ಲೆಕ್ಸ್‌ಗಳಲ್ಲಿ ಮುದ್ರಿಸಿ ಇಡಲಾಗಿದೆ. ಅದು ಕೆಲವು ದಿನಗಳ ತನಕ ಚರ್ಚ್‌ನ ಮುಖ್ಯದ್ವಾರದಲ್ಲಿ ಇರಲಿದೆ. ನಂತರ ಬೇರೋಂದು ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ. ಈಗ ಅಳವಡಿಸಿರುವ ಫ್ಲೆಕ್ಸ್ ೨೦೨೩ರ ವರೆಗೆ ಚರ್ಚ್ ಆವರಣದಲ್ಲೇ ಇರಲಿದೆ. ಈ ನಡುವೆ ಅನ್ಯ ವ್ಯಕ್ತಿಗಳಿಂದ ಚರ್ಚ್‌ಗೆ ಅಪಪ್ರಚಾರ ಎಸಗುವ ಕೆಲಸ ಆಗಾಗ ನಡೆಯುತ್ತಿದ್ದು, ಇದಕ್ಕೆಲ್ಲ ಮನ್ನಣೆ ನೀಡುವ ಅವಶ್ಯಕತೆಯಿಲ್ಲ. ನಾವು ಬಹಳ ಹಿಂದಿನಿಂದಲೂ ರಾಜಮನೆತನಕ್ಕೆ ಗೌರವಯುತವಾಗಿಯೇ ನಡೆದುಕೊಂಡು ಬಂದಿದ್ದೇವೆ. ಮುಂದೆಯೂ ಅದೇ ರೀತಿ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಹ ಧರ್ಮಗುರುಗಳಾದ ಪ್ರವೀಣ್, ಅರುಣ್ ಫ್ರಾನ್ಸಿಸ್, ರಾಜು, ಆರೋಗ್ಯದಾಸ್, ಕ್ಸೇವಿಯರ್, ರಾಣಿ ಭರ್ನಾಡ್, ಮಹಿಳಾ ಆಯೋಗದ ಕಾರ್ಯದರ್ಶಿ ಎ.ಎಂ.ಎಮಿಲಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮತಾಂತರ ನಿಷೇಧ ಕಾಯ್ದೆ ಕುರಿತು ನಮಗೆ ಯಾವುದೇ ಆಕ್ಷೇಪವಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬೇಡಿಕೆಗಳನ್ನೂ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇವೆ. ಜನತೆಗೆ ಯಾವ ಸಮುದಾಯದಲ್ಲಿ ಶಾಂತಿ, ಸಮಾನತೆ ಹಾಗೂ ರಕ್ಷಣೆ ಸಿಗುತ್ತದೆಯೋ ಆ ಧರ್ಮವನ್ನು ಅವರು ಅನುಸರಿಸಬಹುದು. ಸಂವಿಧಾನದ ಚೌಕಟ್ಟಿನಲ್ಲೂ ಇದಕ್ಕೆ ಅವಕಾಶವಿದೆ. ಹಾಗಾಗಿ ನಾವು ಒತ್ತಾಯಪೂರ್ವಕವಾಗಿ ಯಾರನ್ನೂ ಮತಾಂತರ ಮಾಡುವುದಿಲ್ಲ. ವಿಶ್ವಾಸದಿಂದ ಸಮುದಾಯಕ್ಕೆ ಸೇರುವುದರಲ್ಲಿ ನಮ್ಮ ಆಕ್ಷೇಪವೇನೂ ಇಲ್ಲ.
– ಸ್ಟ್ಯಾನಿ ಡಿ.ಅಲ್ಮೆಡಾ, ಧರ್ಮಗುರು, ಸೆಂಟ್ ಫಿಲೋಮಿನಾ ಚರ್ಚ್.

Leave a Reply

Your email address will not be published. Required fields are marked *