ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರೆ ಸಕಲವೂ ಸಿದ್ಧಿಯಾಗುತ್ತದೆ ಎಂಬ ನಂಬಿಕೆ

ನಂದಿನಿ ಮನುಪ್ರಸಾದ್ ನಾಯಕ್

ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರೆ ಸಕಲವೂ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಸಾವಿರಾರು ಭಕ್ತರಲ್ಲಿದೆ.


ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿ ಬೆಟ್ಟದಲ್ಲಿ
ಆಷಾಡದ ಪ್ರತಿ ಶುಕ್ರವಾರವೂ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವುದು ಮೈಸೂರಿನ ಸಂಪ್ರದಾಯ. ಈ ಬಾರಿಯೂ ನಾಲ್ಕೂ ಶುಕ್ರವಾರಗಳು ಅದ್ದೂರಿಯಾಗಿ ಆಚರಿಸಲ್ಪಟ್ಟವು. ಕಡೆಯ ದಿನದಂದು ಮಹಾಲಕ್ಷ್ಮಿ ಸ್ವರೂಪದಲ್ಲಿ ಕಂಗೊಳಿಸಿದ ದೇವಿಯನ್ನು ನೋಡಿ ಭಕ್ತರು ಪುಳಕಿತರಾದರು.

ಕೊನೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಾಲಯವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದು, ಮಹಾಲಕ್ಷ್ಮಿ ಅಲಂಕಾರದಲ್ಲಿ ತಾಯಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಆಕಾಶ ನೀಲಿ ಬಣ್ಣದ ಸೀರೆಯಲ್ಲಿ ತಾಯಿ ಚಾಮುಂಡೇಶ್ವರಿ ಕಂಗೊಳಿಸುತ್ತಿದ್ದಾಳೆ.

ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಲಲಿತಾ ಮಹಲ್ ಗ್ರೌಂಡ್‌ನಿಂದ ಸರ್ಕಾರಿ ಬಸ್‌ಗಳ ಮೂಲಕ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಗೆ ಧರ್ಮ ದರ್ಶನದ ಜೊತೆಗೆ ₹2,000 ಟಿಕೆಟ್ ಮೂಲಕ ವಿಶೇಷ ದರ್ಶನದ ಅವಕಾಶವಿದ್ದು, ಟಿಕೆಟ್ ಪಡೆದವರಿಗೆ ಎಸಿ ಬಸ್ ವ್ಯವಸ್ಥೆ ಹಾಗೂ ಶೀಘ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನದ ಬಳಿಕ ಪ್ರಸಾದದ ಕಿಟ್‌ ಕೂಡ ವಿತರಿಸಲಾಗುತ್ತಿದ್ದು, ಕಿಟ್‌ನಲ್ಲಿ ನೀರಿನ ಬಾಟಲ್, ಲಾಡು ಪ್ರಸಾದ, ಚಾಮುಂಡೇಶ್ವರಿ ವಿಗ್ರಹ ಹಾಗೂ ಕುಂಕುಮ ನೀಡಲಾಗುತ್ತಿದೆ.

ಚಾಮುಂಡಿ ಬೆಟ್ಟದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿವಿಐಪಿಗಳಿಗೆ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 10 ಗಂಟೆಯ ನಂತರ ಬರುವವರಿಗೆ ₹2,000 ಟಿಕೆಟ್ ಅಥವಾ ಧರ್ಮ ದರ್ಶನದ ಮೂಲಕ ದರ್ಶನ ಪಡೆಯಲು ಸೂಚಿಸಲಾಗಿದೆ.

ಆಷಾಡ ಮಾಸದ ಕಡೆಯ ಶುಕ್ರವಾರದಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.

ಕಳೆದ 4 ಶುಕ್ರವಾರಗಳಿಂದಲೂ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ, ಹವನಗಳು ನಡೆಯುತ್ತಿದ್ದವು. ಕಡೆಯ ಶುಕ್ರವಾರವಾದ್ದರಿಂದ ಭಕ್ತರ ಸಂಖ್ಯೆ ಇನ್ನೂ ಹೆಚ್ಚಿತ್ತು. ಬೆಳಗ್ಗೆ 4 ಗಂಟೆಯಿಂದಲೇ ಭಕ್ತರು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಲು ಆರಂಭಿಸಿದರು.

ದೇವಸ್ಥಾನ ಆವರಣ, ಮೆಟ್ಟಿಲುಗಳು ಮತ್ತು ರಸ್ತೆಗಳ ಉದ್ದಕ್ಕೂ ಭಕ್ತರ ಕ್ಯೂ ಕಂಡುಬಂತು. ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಎಲ್ಲರೂ ಭಕ್ತಿಯಿಂದ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪೊಲೀಸ್ ಮತ್ತು ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಹಾಗೂ ಅನೌನ್ಸ್‌ಮೆಂಟ್ ವ್ಯವಸ್ಥೆ ಮಾಡಲಾಗಿತ್ತು.ಕಡೆ ಆಷಾಢ ಶುಕ್ರವಾರದಂದು ರಾಜಕೀಯ ನಾಯಕರಾದ ಶೋಭಾ ಕರಂದ್ಲಾಜೆ, ಹೆಚ್.ಡಿ.ರೇವಣ್ಣ,ಕೆ.ಎಸ್.ಈಶ್ವರಪ್ಪ,ಎಲ್.ನಾಗೇಂದ್ರ ಹಾಗೂ ನಟಿ ಕಾರುಣ್ಯ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *