ಆಷಾಢ ಸ್ಟೋರಿ :ನಂದಿನಿ ಮೈಸೂರು
ಆಷಾಢ ಶುಕ್ರವಾರ ಬಂತೆಂದರೇ ಸಾಕು ಚಾಮುಂಡಿ ಬೆಟ್ಟ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ.ಮಹಿಳಾ ಭಕ್ತರು ನಾಡ ಅಧಿದೇವತೆ ಚಾಮುಂಡೇಶ್ವರಿಯಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಅಂದರೇ ವಿದ್ಯೆ, ಮದುವೆ ಕಾರ್ಯ,ಸಂತಾನ ಭಾಗ್ಯ,ವೃತ್ತಿ,ವ್ಯವಹಾರ ಸೇರಿದಂತೆ ಇತರೇ ಬೇಡಿಕೆ ಇಟ್ಟು ಬೆಟ್ಟದ ಪ್ರತಿಯೊಂದು ಮೆಟ್ಟಿಲುಗಳಿಗೂ ಅರಶಿಣ ಕುಂಕುಮ ಹಾಕುವುದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ.ತಾಯಿ ಆಶಿರ್ವಾದ ಲಭಿಸಿ
ಬೇಡಿಕೆ ಈಡೇರಿದರೇ ಮಹಿಳಾ ಭಕ್ತರು ಆಷಾಢ ಮಾಸದಲ್ಲಿ
1,101 ಮೆಟ್ಟಿಲುಗಳಿಗೆ ಅರಿಶಿಣ -ಕುಂಕುಮವನ್ನು ಹಚ್ಚಿ ಹರಕೆ ತೀರಿಸುತ್ತಾರೆ.
ಮೈಸೂರು ಅಂದರೆ ಮೊದಲು ನೆನಪಾಗುವುದೇ ಚಾಮುಂಡಿಬೆಟ್ಟ. ಬೇರೆ ಊರುಗಳಿಂದ ಇಲ್ಲಿಗೆ ಬಂದವರು ತಾಯಿಯ ದರ್ಶನ ಪಡೆಯದೇ ಹಿಂತಿರುಗುವುದಿಲ್ಲ. ಇನ್ನು ಆಷಾಢ ಶುಕ್ರವಾರದಂದೂ ಲಕ್ಷಾಂತರ ಭಕ್ತರು ನಾಡ ಅಧಿದೇವತೆಯನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ.
ಮುಂಜಾನೆಯೇ ಹೆಂಗಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಣೆಗೆ ಕುಂಕುಮ,ಕೈಗೆ ಬಲೆ ಹಾಕಿಕೊಂಡು ಯಾರ ಸಹಾಯವೂ ಪಡೆಯದೇ ಅರಿಶಿಣ ಕುಂಕುಮ ಕೈಯಲ್ಲಿ ಹಿಡಿದು ಪ್ರತಿಯೊಂದು ಮೆಟ್ಟಿಲುಗಳಿಗೆ ಅರಿಶಿಣ ಕುಂಕುಮ ಹಾಕಿ ನಮಸ್ಕರಿಸಿ ಹರಕೆ ತೀರಿಸುತ್ತಾರೆ.
ಕೆಲವರು ಚಾಮುಂಡಿ ಬೆಟ್ಟದ ಮೆಟ್ಟಿಲು ಮಾರ್ಗದಿಂದ ಸಾಗಿ ಬಂದು ದೇವರ ದರ್ಶನ ಪಡೆದರು.
ಮುಂಜಾನೆಯಿಂದಲೇ ಚಳಿ, ಗಾಳಿ, ಹನಿ.. ಹನಿ.. ಮಳೆಯಲ್ಲೇ ಕೊಡೆ ಹಿಡಿದು ಮೆಟ್ಟಿಲು ಹತ್ತಿದರು.
ದಾರಿಯುದ್ದಕ್ಕೂ ಚಾಮುಂಡೇಶ್ವರಿ ತಾಯಿಗೆ ಜಯಘೋಷವನ್ನು ಮೊಳಗಿಸಿದರು.
ವಿವಿಧ ಬಗೆಯ ಅಭಿಷೇಕಗಳ ಸಲ್ಲಿಕೆ
ಸೂರ್ಯ ಉದಯಿಸುವ ಮೊದಲು ಅಂದರೆ ಮುಂಜಾನೆ 3.30ರಿಂದ ದೇಗುಲದಲ್ಲಿ ಪೂಜೆ ಕಾರ್ಯಕ್ರಮಗಳು ಆರಂಭವಾದವು. ತಾಯಿ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ರುದ್ರಾಭಿಷೇಕ, ಪಂಚಮಾಭಿಷೇಕ, ಸಹಸ್ರ ನಾಮಾರ್ಚನೆ ಸಲ್ಲಿಸಲಾಯಿತು. ಬೆಳಗ್ಗೆ 5.30ಕ್ಕೆ ದೇವಿಗೆ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ನಂತರ ಬೆಳಗ್ಗೆ 6 ಗಂಟೆಯಿಂದ ದರ್ಶನಕ್ಕೆ ಅವಕಾಶ ನೀಡಲಾಯಿತು. ಭಕ್ತರು ಸರದಿಯಲ್ಲಿ ನಿಂತು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಹೂವುಗಳ ಅಲಂಕಾರದಿಂದ ಕಂಗೊಳಿಸಿದ ದೇವಾಲಯ
ಚಾಮುಂಡೇಶ್ವರಿ ದೇಗುಲವನ್ನು ಬಣ್ಣಬಣ್ಣದ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ದೇವಾಲಯದ ಮುಂಭಾಗ ಅಮ್ಮ ಎಂಬ ಅಕ್ಷರದಲ್ಲಿ ಬರೆಸಿದ್ದ ಹೂವಿನ ಅಲಂಕಾರ ಎಲ್ಲರ ಗಮನ ಸೆಳೆಯಿತು.ತಾಯಿಯ ದರ್ಶನ ಪಡೆದು ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಚಾಮುಂಡಿ ಬೆಟ್ಟದಲ್ಲಿ ಆಷಾಢ ಹಿನ್ನೆಲೆ ಭದ್ರತಾ ದೃಷ್ಟಿಯಿಂದ 46 ಶಾಶ್ವತ ಕ್ಯಾಮರಾಗಳನ್ನು ಅಳವಡಿಸಲಾಗಿದೆ.ವಿಶೇಷ ದರ್ಶನ ಪಡೆಯಲು 50 ರಿಂದ 300 ರೂ ದರ ನಿಗದಿಪಡಿಸಲಾಗಿದೆ.65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ.ಹಾಗೂ ಧರ್ಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಉಚಿತ ಬಸ್ ವ್ಯವಸ್ಥೆ, ಕುಡಿಯುವ ನೀರು,ಶೌಚಾಲಯ,ಎಮರ್ಜೆನ್ಸಿ ಗೇಟ್ ತೆರೆಯಲಾಗಿದೆ ಭಕ್ತರು ಯಾವುದೇ ತೊಂದರೇ ನೂಕು ನುಗ್ಗಲಿಗೆ ಸಿಲುಕದೇ ಸರಾಗವಾಗಿ ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯಬಹುದಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.ಬೆಟ್ಟಕ್ಕೆ ಖಾಸಗೀ ವಾಹನಗಳಿಗೆ ನಿರ್ಬಂಧ ಏರಲಾಗಿದೆ.ಅದ್ದರಿಂದ ಲಲಿತಮಹಲ್ ಹೆಲಿಪ್ಯಾಡ್ ಬಳಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಿ, ಕೆಎಸ್ಆರ್ಟಿಸಿ ಬಸ್ನಲ್ಲಿ ಚಾಮುಂಡಿ ಬೆಟ್ಟಕ್ಕೆ ಪ್ರಯಾಣಿಸಬೇಕಾಗುತ್ತದೆ.ಕಳ್ಳತನ ,ಗಲಾಟೆ,ತೊಂದರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ವಾರದಂತೆ ಈ ವಾರವೂ ಸಾವಿರಕ್ಕೂ ಹೆಚ್ಚು ಪೋಲೀಸರನ್ನು ನಿಯೋಜಿಸಲಾಗಿದೆ.
ಕಳೆದ ಎರಡು ಆಷಾಢ ಶುಕ್ರವಾರಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ಡಿಸಿಪಿ ಮುತ್ತುರಾಜ್ ತಿಳಿಸಿದರು.