ನಂದಿನಿ ಮೈಸೂರು
*ತೊರವಳ್ಳಿ ಗ್ರಾಮದ ಸುತ್ತಮುತ್ತ ಹುಲಿ ಬೀಡುಬಿಟ್ಟಿರುವ ಶಂಕೆ*
*ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ*
*ಸಮಸ್ಯೆಗೆ ಸ್ಪಂದಿಸದ ಅರಣ್ಯ ಇಲಾಖೆ*
ಎಚ್.ಡಿ.ಕೋಟೆ: ತಾಲೂಕಿನ ತೊರವಳ್ಳಿ ಗ್ರಾಮದ ಸುತ್ತಮುತ್ತ ಹುಲಿ ಇರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗ್ರಾಮದ ದನಗಾಹಿಯೋರ್ವ ಹುಲಿಯ ಹೆಜ್ಜೆ ಗುರುತು ಕಂಡು ಆತಂಕ ವ್ಯಕ್ತಪಡಿಸಿ, ಊರಿನವರು ತಮ್ಮಗಳ ಜಮೀನಿಗೆ ಹೋಗುವಾಗ ಎಚ್ಚರಿಕೆ ವಹಿಸುವಂತೆ ಗ್ರಾಮಸ್ಥರಲ್ಲಿ ತಿಳಿಸಿದ್ದಾನೆ.
ಗ್ರಾಮದ ಮಾರ್ಗದಲ್ಲಿ ಹುಲಿಕುರ, ಇಟ್ನಾ ಗ್ರಾಮಗಳು ಇದ್ದು, ಒಂದು ವಾರದ ಹಿಂದಷ್ಟೇ ಹುಲಿಕುರ ಸಮೀಪದ ಜಮೀನೊಂದರಲ್ಲಿ 2 ನಾಯಿಗಳನ್ನು ಬಲಿ ಪಡೆಯುವುದರ ಜತೆಗೆ, ಮೊನ್ನೆಯಷ್ಟೇ ಇಟ್ನಾ ಗ್ರಾಮದ ಒಂದು ಕುರಿಯು ಆಹುತಿಯಾಗಿ ರುವುದರಿಂದ ದಾರಿ ಹೋಕರು ಹಾಗೂ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.
ಇದಕ್ಕೆ ಇಂಬು ನೀಡುವಂತೆ ಗ್ರಾಮದ ಜಮೀನೊಂದರಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಇದರಿಂದ ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ, ವಿಷಯ ತಿಳಿಸಿದರೂ ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಇದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.