ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಸುದರ್ಶನ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ- ಡಾ.ಹೆಚ್.ಸಿಎಂ‌ ಬಣ್ಣನೆ

ನಂದಿನಿ ಮನುಪ್ರಸಾದ್ ನಾಯಕ್

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ

ಸುದರ್ಶನ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ- ಡಾ.ಹೆಚ್.ಸಿಎಂ‌ ಬಣ್ಣನೆ

 

ಮೈಸೂರು: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.ಆದ್ದರಿಂದ ಮಕ್ಕಳಿಗೆ ಉತ್ತಮ, ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಉನ್ನತ ಸ್ಥಾನಕ್ಕೇರುವಲ್ಲಿ ರೂಪಿಸುವ ಕಾರ್ಯಕ್ಕೆ ಶಿಕ್ಷಕರು ಮುಂದಾಗಬೇಕೆಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ‌.ಮಹದೇವಪ್ಪ ಕರೆ ನೀಡಿದರು.
ಅವರು ಇಲ್ಲಿನ ಹೂಟಗಳ್ಳಿಯ ಕೆ.ಹೆಚ್.ಬಿ‌ ಕಾಲೋನಿಯಲ್ಲಿರುವ ಸುದರ್ಶನ್ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿಗಳೂ ಹಾಗೂ ಸುದರ್ಶನ್ ವಿದ್ಯಾಸಂಸ್ಥೆಯ ಮುಖ್ಯಸ್ಥರೂ ಆಗಿರುವ ಡಾ.ಎನ್‌.ಶ್ರೀನಿವಾಸನ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದ ಸಚಿವರು, ಈ ಸಂಸ್ಥೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ,ಸಮವಸ್ತ್ರ ಹಾಗೂ ಶೈಕ್ಷಣಿಕ ಸಾಮಾಗ್ರಿಗಳನ್ನು ನೀಡಿ ಯಾವುದೇ ಜಾತಿ- ಧರ್ಮ ಬೇಧ,ತಾರತಮ್ಯವಿಲ್ಲದೇ ಎಲ್ಲಾ ವರ್ಗದ ಮಕ್ಕಳನ್ನು ಸಮಾನವಾಗಿ ಕಾಣುವ ಮೂಲಕ ಉನ್ನತ ಶಿಕ್ಷಣ ನೀಡುತ್ತಿರುವುದು ಎಲ್ಲರು ಮೆಚ್ಚುವಂತದ್ದು ಎಂದರು.
ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ, ಸಂವಿಧಾನದ ಒಲವಿನಂತೆ
ಶಿಕ್ಷಣದಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬಿತ್ತುವ ಮುಖೇನ ಮೂಢನಂಬಿಕೆಯಿಂದ ದೂರವಿರುವ ಬಗ್ಗೆ ಅರಿವು ಮೂಡಿಸಬೇಕೆಂದ ಸಚಿವರು, ಶಿಕ್ಷಣ ಮಾತ್ರವೇ ಕತ್ತಲಿನಿಂದ ಬೆಳಕಿನಡೆಗೆ ಇರುವ ಮಾರ್ಗ.ಅಂತೆಯೇ ಗುಣಮಟ್ಟದ ಶಿಕ್ಷಣ ಕಲ್ಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸುತ್ತಿರುವ ಶ್ರೀನಿವಾಸನ್ ಅವರ ಶ್ರಮ ಅಪಾರ ಎಂದು ಸಂತೋಷದಿಂದ ನುಡಿದರು.
ನಾನು ಇಂದೂ ಭಾರತೀಯ,ಎಂದೆಂದಿಗೂ ಭಾರತೀಯ ಎಂಬ ಸಂದೇಶವನ್ನು ನಮ್ಮ ಭಾರತದ ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಬರೆದಿದ್ದಾರೆ.ಅಂತೆಯೇ ಶಿಕ್ಷಕರು ಮಕ್ಕಳಿಗೆ ನಾವು ಭಾರತೀಯರು,ನಾವೆಲ್ಲ ಒಂದೇ ಎಂಬ ಕುರಿತು ಬೋಧಿಸಿ ಅವರಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದರಲ್ಲದೇ, ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದಿಸಬೇಕೆಂಬ ನಿಯಮವನ್ನು ಆದೇಶಿಸಿ ಸರ್ಕಾರ ಈಗಾಗಲೇ ಜಾರಿಗೊಳಿಸಿದೆ.ಈ ಸಂಸ್ಥೆಯಲ್ಲೂ ಅದು ನಿರಂತರವಾಗಿ ನಡೆಯಲಿ.ನಾಗರೀಕತೆ,ಸನ್ನಡತೆಯನ್ನು ಮೈಗೂಡಿಸಿಕೊಂಡು ಶ್ರೀನಿವಾಸನ್ ಅವರು ಇಂತಹ ಸಂಸ್ಥೆಯನ್ನು ನಡೆಸುತ್ತಿದ್ದು, ಅವರ ಈ ಜವಾಬ್ದಾರಿಯುತ, ಉನ್ನತ ಕಾರ್ಯ ಹೀಗೆ ಮುಂದುವರೆಯಲ್ಲಿ‌.ಅದಕ್ಕೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ವೇಳೆ ಸಚಿವರು ಭರವಸೆ ನೀಡಿದರು.
ಇದೇ ವೇಳೆ ಮಕ್ಕಳು ಪ್ರದರ್ಶಿಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಚೆನ್ನಮ್ಮ ಹಾಗೂ ರಾಯಣ್ಣ ಗಲ್ಲಿಗೇರುವ ಸಮಯದಲ್ಲೂ ತಮ್ಮ ನಾಡು- ನುಡಿ ಮತ್ತು ದೇಶಾಭಿಮಾನವನ್ನು ಬಿಟ್ಟುಕೊಡಲಿಲ್ಲ.ಮಕ್ಕಳು ದೇಶಾಭಿಮಾನವನ್ನು ಬೆಳೆಸಿಕೊಂಡು ನಾಡಿನ ಉತ್ತಮ ಪ್ರಜೆಗಳಾಗಿ ರೂಪುಗೊಂಡು, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರುವಂತಾಗಬೇಕೆಂದರಲ್ಲದೇ, ಸುದರ್ಶನ ವಿದ್ಯಾ ಸಂಸ್ಥೆ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ.ಎನ್.ಶ್ರೀನಿವಾಸನ್, ಮುಖ್ಯ ಶಿಕ್ಷಕ ಸುರೇಶ್,ಶಿಕ್ಷಣ ಸಂಘದ ನೇಹಾ ಪ್ರಕಾಶ್, ಮುಖ್ಯೋಪಧ್ಯಾಯಿನಿ ವಿನೂತ ಸೇರಿದಂತೆ ಪೋಷಕರು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *