ನಂದಿನಿ ಮೈಸೂರು
ಅಭಿನವ ಬಸವಣ್ಣ ಶ್ರೀ ಸಿದ್ದೇಶ್ವರಸ್ವಾಮೀಜಿ
ಸಿದ್ದಗಂಗಾಶ್ರೀ ಉದ್ಯಾನವನದಲ್ಲಿ ಶರಣು ಸಮರ್ಪಣೆ
ಮಂಡ್ಯ : ಹನ್ನೆರಡನೇ ಶತಮಾನದ ಬಸವಣ್ಣನವರ ಆದರ್ಶಗಳನ್ನು ತಮ್ಮ ಸುದೀರ್ಘ 82 ವರ್ಷಗಳ ಕಾಲ ಚಾಚೂ ತಪ್ಪದೆ ಅನುಷ್ಠಾನಗೊಳಿಸಿದ ಅನುಭಾವಿ ಶರಣ ವಿಜಯಪುರದ
ಜ್ಞಾನಯೋಗಾಶ್ರಮದ ಸಂತ ಪೂಜ್ಯಶ್ರೀ ಸಿದ್ದೇಶ್ವರಸ್ವಾಮೀಜಿಯವರು ಮಹಾನ್ ಮಾನವತಾವಾದಿಯಾಗಿದ್ದರು ಎಂದು ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ತೀವ್ರ ಸಂತಾಪ ವ್ಯಕ್ತಪಡಿಸಿದರು.
ನಗರದ ಸ್ವರ್ಣಸಂದ್ರ ಬಡಾವಣೆಯ ಪರಮಪೂಜ್ಯ ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್, ಸಿದ್ದಗಂಗಾಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ ಆಯೋಜಿಸಿದ್ದ ಪೂಜ್ಯಶ್ರೀ ಸಿದ್ದೇಶ್ವರಸ್ವಾಮೀಜಿ ಶ್ರದ್ಧಾಂಜಲಿಯ ಶರಣು ಸಮರ್ಪಣೆ ಕಾರ್ಯಕ್ರಮದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮಠದೊಳಗೆ ಐಷಾರಾಮಿ ಜೀವನ ನಡೆಸುತ್ತಾ, ಹೊರಗೆ ನೂರಾರು ಸೇವಕರ ಜೊತೆ ಸಮಾಜದಲ್ಲಿ ತಮ್ಮನ್ನೇ ತಾವು ಶ್ರೇಷ್ಠ ಎಂದು ಬಿಂಬಿಸಿಕೊಳ್ಳುತ್ತ, ತಮ್ಮ ಪಾದಗಳನ್ನ ಮುಟ್ಟಿ ಮೋಕ್ಷ ಪಡೆಯಿರಿ ಎಂದು ಜನರನ್ನ ಮರಳು ಮಾಡುವ ಹೈಟೆಕ್ ಮಠಾಧಿಪತಿಗಳಿಗೆ ಅಪವಾದವಾಗಿ ನಿಂತ ಸಂತ ಶ್ರೀ ಸಿದ್ದೇಶ್ವರಸ್ವಾಮೀಜಿಯವರು ರಾಷ್ಟ್ರ ನಿರ್ಮಾಣದತ್ತ ಸಾಗಿದ್ದವರು ಎಂದರು.
ಶ್ವೇತವಸ್ತ್ರಧಾರಿಗಳಾಗಿ ಖಾವಿ ಮುಕ್ತ ಜೀವನ ನಡೆಸಿದ ಪೂಜ್ಯರು ಧರ್ಮವನ್ನೇ ಅನುಮಾನಿಸಿ ನೋಡುವಂತೆ ಬದುಕಿದ ಕೆಟ್ಟ ಸ್ವಾಮೀಜಿಗಳ ನಡುವೆ ಬದುಕನ್ನ ಸಮಾಜದ ಒಳಿತಿಗೆ ಮೀಸಲಿಟ್ಟ ಸಂತಶ್ರೇಷ್ಠ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮುಖಂಡರಾದ ಮನೋಜ್, ರಾಜೇಗೌಡ, ಪವನ್, ರಾಜಶೇಖರ್, ಮಂಜುನಾಥ್, ಜಗದೀಶ್ ಮತ್ತಿತರರಿದ್ದರು.
ಜ್ಞಾನಯೋಗಿ ಅಮರ : ಸರಳ ಸಜ್ಜನಿಕೆಯ ಸಾಕಾರಮೂರ್ತಿಗಳಾಗಿದ್ದ ಈ ನಾಡು, ದೇಶ ಕಂಡಂತಹ ವಿಚಾರವಂತ ಸಂತ ಸಿದ್ದೇಶ್ವರಸ್ವಾಮೀಜಿಯವರ ಅಗಲಿಕೆ ಅಪಾರವಾದ ನೋವು ತಂದಿದ್ದು ವೈಚಾರಿಕ ಕ್ರಾಂತಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ದು:ಖ ವ್ಯಕ್ತಪಡಿಸಿದರು.
ಪೂಜ್ಯರ ಮಠ ಜನಸಾಮಾನ್ಯರ ಮಹಾಮನೆಯಾಗಿತ್ತು. ಸ್ವಾಮೀಜಿಯವರ ಬಳಿ ಐಷಾರಾಮಿ ಕಾರುಗಳು ಇರಲಿಲ್ಲ, ಅವರೆಂದೂ ಅಡ್ಡಪಲ್ಲಕ್ಕಿ ಉತ್ಸವ ಮಾಡಿಕೊಳ್ಳಲಿಲ್ಲ,
ಜನರ ಮುಗ್ಧತೆಯನ್ನ ದುರುಪಯೋಗ ಪಡಿಸಿಕೊಂಡು ಸರ್ಕಾರದ ವಿರುದ್ಧ ಎತ್ತಿಕಟ್ಟಿ ವೈಯಕ್ತಿಕ ಲಾಭ ಪಡೆದುಕೊಳ್ಳದ ಅಪರೂಪದ ಮಹಾಯೋಗಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ್ಞಾನ ಹಂಚಿಕೆಯ ನೆಪದಲ್ಲಿ ಹಣ ಸಂಪಾದಿಸಲಿಲ್ಲ, ಪಾದಪೂಜೆ ಮಾಡಿಸಿಕೊಂಡು ಆ ನೀರನ್ನ ಶ್ರೇಷ್ಠ ಎಂದು ಜನರು ತಲೆಗೆ ಹಾಕಿಕೊಳ್ಳುವಂತೆ ಮಾಡಲಿಲ್ಲ, ಹಾಗೆ ನೋಡಿದರೆ ಭಕ್ತರಿಗೆ ತಮ್ಮ ಪಾದವನ್ನ ಸ್ಪರ್ಶಿಸೋಕೆ ಅವಕಾಶವನ್ನೇ ಕೊಡದ ವೈರಾಗಿ. ಈ ದೇಶದ ಪ್ರಧಾನಿಯವರೆ ಸ್ವಾಮೀಜಿಯವರ ವಿಚಾರಗಳಿಗೆ ಭಾಷಣಕ್ಕೆ ಮಾರುಹೋಗಿದ್ದರು.
ಯಾವತ್ತೂ ಜಾತಿಯಿಂದ ಗುರುತಿಸಿಕೊಂಡು ತಮ್ಮ ಜಾತಿಗೆ ಮೀಸಲಾತಿ ಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಲಿಲ್ಲ. ಬಹಿರಂಗ ಸಭೆಗಳಲ್ಲಿ ಜಾತಿ ಪರ ಹೇಳಿಕೆಗಳನ್ನ ಕೊಡಲಿಲ್ಲ, ಬಸವಣ್ಣನವರ ವಿಶ್ವಮಾನವ ಸಂದೇಶವನ್ನ ತುಂಬಾ ಸ್ಪಷ್ಟವಾಗಿ ಜನರಿಗೆ ತಲುಪಿಸಿದ ಶ್ರೇಷ್ಠ ವ್ಯಕ್ತಿ ಸಿದ್ದೇಶ್ವರ ಸ್ವಾಮೀಜಿಯವರು ಎಂದು ಹೇಳಿದರು.
ಮಂಡ್ಯದಲ್ಲಿ ಈ ಹಿಂದೆ ನಡೆದ ಬಸವಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಅತ್ಯಂತ ಸಜ್ಜನಿಕೆಯಿಂದ ಆಗಮಿಸಿ ಪ್ರವಚನ ನೀಡಿದ್ದ ಪೂಜ್ಯರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದವರು ಸಂತಾಪ ವ್ಯಕ್ತಪಡಿಸಿದ್ದಾರೆ.