ನಂದಿನಿ ಮೈಸೂರು
ಸದ್ವಿದ್ಯಾ ಸಂಸ್ಥೆಗೆ ಶತೋತ್ತರ, ಸುವರ್ಣ, ರಜತ ಮಹೋತ್ಸವ
ಸದ್ವಿದ್ಯಾ ಆಂಗ್ಲೋ ಸಂಸ್ಕೃತ ಪಾಠಶಾಲೆಯ ಶತೋತ್ತರ, ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಅಂಗವಾಗಿ ಸೆ.೨, ೩ ಹಾಗೂ ೪ರಂದು ಶತೋತ್ತರ, ಸುವರ್ಣ, ರಜತ ಮಹೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ.ನರಹರಿಬಾಬು ತಿಳಿಸಿದರು.
ನಗರದ ಕಲಾಮಂದಿರದಲ್ಲಿ ಮೂರು ದಿನಗಳ ಕಾರ್ಯಕ್ರಮ ಆಯೋಜಿಸಿದ್ದು, ಸೆ.೨ರಂದು ಬೆಳಗ್ಗೆ ೧೦ ಗಂಟೆಗೆ ಲೇಖಕಿ ಡಾ.ವೀಣಾ ಬನ್ನಂಜೆ ಕಾರ್ಯಕ್ರಮ ಉದ್ಘಾಟಿಸುವರು. ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ವಿ.ಕೆ.ಗೋಪಾಲಾಚಾರ್ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಸಹ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ ಉಪಸ್ಥಿತರಿರುವರು. ಸೆ.೩ರಂದು ವಿಶೇಷ ಸಂಚಿಕೆ ಸುರದ್ರುಮ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಎನ್.ಆರ್ ಗ್ರೂಪ್ ಛರ‍್ಮನ್ ಆರ್.ಗುರು, ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿಂಧು ಬಿ.ರೂಪೇಶ್ ಭಾಗವಹಿಸುವರು ಎಂದರು.
ಸೆ.೪ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಪಾದರು, ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್ ದಿವ್ಯ ಸಾನಿಧ್ಯ ವಹಿಸುವರು. ಸಂಸ್ಥೆಯ ಹಿರಿಯ ಹಾಗೂ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು. ಇದೇ ವೇಳೆ ಸಂಸ್ಥೆಗೆ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಲಾಗುವುದು. ಅಲ್ಲದೆ ಆ.೨೭ರಂದು ಸಂಜೆ ೬ ಗಂಟೆಗೆ ಸಂಸ್ಥೆಯ ಟಿ.ಪಿ.ಕೈಲಾಸಂ ರಂಗಮAಟಪದಲ್ಲಿ ಜಯಂತಿ ಕುಮರೇಶ್ ವೀಣಾವಾದನ ನಡೆಸಿಕೊಡುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸ್ಥೆ ಆರಂಭವಾಗಿ ೧೬೯ ವರ್ಷ ಪೂರೈಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ, ಸಂಸ್ಕಾರ ನೀಡಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಪ್ರಸ್ತುತ ೪ ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಆಡಳಿತ ಮಂಡಳಿ ಸದಸ್ಯ ಎಂ.ಡಿ.ಗೋಪಿನಾಥ್, ಕಾಲೇಜಿನ ಪ್ರಾಂಶುಪಾಲ ವೈ.ಆರ್.ರಮೇಶ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್, ಆಂಗ್ಲೋ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕಿ ಸುಬ್ಬಮ್ಮ ಹಾಜರಿದ್ದರು.