ಅರಮನೆ ಅಂಗಳದಲ್ಲಿ ರಥಸಪ್ತಮಿ ಪೂಜೆ

ನಂದಿನಿ ಮೈಸೂರು

ಮೈಸೂರು- ರಥಸಪ್ತಮಿ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿನ ವಿವಿಧ ದೇವಾಲಯಗಳ ಉತ್ಸವ ಮೂರ್ತಿಗಳ ಉತ್ಸವ ಶನಿವಾರ ನಡೆಯಿತು.
ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯದೇವರ ಆರಾಧನೆ ಮಾಡಿ ಸಂಭ್ರಮಿಸಿದರು.


ಅರಮನೆ ಆವರಣದಲ್ಲಿನ ಎಲ್ಲಾ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಅರಮನೆ ಪ್ರಾಂಗಣದಲ್ಲಿ ಒಂದೇ ಸ್ಥಳಕ್ಕೆ ತಂದು ಅಲಂಕರಿಸಿ ಪೂಜಿಸಿ, ಭಕ್ತರ ದರ್ಶನಕ್ಕೆ ಅವ ಕಾಶ ಕಲ್ಪಿಸುವ ಕ್ರಮ ಬಹಳ ಹಿಂದಿನಿಂದಲೂ ಆಚರಣೆಯಲ್ಲಿದೆ. ಶನಿವಾರ ಮುಂಜಾನೆ ಅರಮನೆ ಆವರಣದ ಎಲ್ಲಾ ದೇವಾಲಯಗಳಲ್ಲೂ ಅಭಿಷೇಕ, ನೈವೇದ್ಯ ಸೇರಿದಂತೆ ವಿವಿಧ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಬೆಳಿಗ್ಗೆ 6.30ಕ್ಕೆ ಅರಮನೆ ಮುಂಭಾಗದ ಪ್ರಾಂಗಣದಲ್ಲಿ ಎಲ್ಲಾ ದೇವರ ಉತ್ಸವ ಮೂರ್ತಿಯನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನ 12ರವರೆಗೂ ಭಕ್ತರು ಅರಮನೆ ಆವರಣಕ್ಕೆ ಬಂದು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಶ್ರೀ ಗಾಯತ್ರಿ ದೇವಿ, ಭುವನೇಶ್ವರಿ, ತ್ರಿನೇಶ್ವರ, ಲಕ್ಷ್ಮಿ ವೆಂಕಟರಮಣಸ್ವಾಮಿ, ಖಿಲ್ಲೆ ವೆಂಕಟರಮಣ ಸ್ವಾಮಿ, ವರಾಹಸ್ವಾಮಿ, ಪ್ರಸನ್ನ ಕೃಷ್ಣ, ಆದಿಲಕ್ಷ್ಮಿ ದೇವಿಯ ಉತ್ಸವ ಮೂರ್ತಿಯನ್ನು ಅರಮನೆ ಮುಂಭಾಗ ಅಲಂಕರಿಸಿ ಇಡಲಾಗಿತ್ತು. ರಥಸಪ್ತಮಿ ದಿನ ಹತ್ತಾರು ದೇವರ ದರ್ಶನ ಮಾಡಿದರೆ ಒಳಿತಾಗಲಿದೆ ಎಂಬ ಪ್ರತೀತಿ ಇರುವುದರಿಂದ ದರ್ಶನ ಪಡೆಯಲು ಬಂದ ಭಕ್ತರು ಸಾಲುಗಟ್ಟಿದ್ದರು.

ಪ್ರಧಾನ ಅರ್ಚಕರೋರ್ವರು ಮಾತನಾಡಿ ಮಾಘ ಶುದ್ಧ ಸಪ್ತಮಿ ದಿನವನ್ನು ಸೂರ್ಯನ ಜನ್ಮ ದಿನ ಎಂದು ಕರೆಯುತ್ತೇವೆ. ಅದಿತಿಯ ಮಗನಾಗಿ ಸೂರ್ಯ ಜನ್ಮ ತಾಳಿದ ದಿನ ಇದಾಗಿದ್ದು, ರಥಸಪ್ತಮಿ ಎಂದು ಸೂರ್ಯ ಹಾಗೂ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸ ಲಾಗುತ್ತದೆ. ಅರಮನೆ ಆವರಣದಲ್ಲಿ ನಡೆಯುವ ರಥ ಸಪ್ತಮಿ ಉತ್ಸವಕ್ಕೆ 200 ವರ್ಷಗಳಿಗೂ ಮಿಗಿಲಾದ ಪರಂಪರೆಯಿದೆ. ಮಹಾರಾಜರ ಕಾಲದಲ್ಲಿ ಅರಮನೆ ಮುಂಭಾಗ ದೊಡ್ಡ ಸೂರ್ಯ ಮಂಡಲ ಕಟ್ಟಿ, ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನಿರಿಸಿ ಪೂಜಿಸುತ್ತಿದ್ದರಲ್ಲದೆ, ಮೈಸೂರಿನ ಜನತೆ ಒಂದೇ ಸ್ಥಳದಲ್ಲಿ ಹಲವು ದೇವರ ದರ್ಶನ ಪಡೆ ಯುವ ವ್ಯವಸ್ಥೆ ಮಾಡುತ್ತಿದ್ದರು. ಆ ಪದ್ಧತಿ ಇಂದಿಗೂ ಮುಂದುವರಿದಿದೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *