ನಂದಿನಿ ಮೈಸೂರು
ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು : ಡಾ.ಈ.ಸಿ. ನಿಂಗರಾಜ್ ಗೌಡ.
ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ, ವರಕವಿ ಬೇಂದ್ರೆಯವರಿಂದ “ಯುಗದ ಕವಿ ಜಗದ ಕವಿ” ಎನಿಸಿಕೊಂಡವರು, ಜ್ನಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದು ಕೊಟ್ಟವರು, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು ಜಗತ್ತಿಗೆ “ವಿಶ್ವಮಾನವ ಸಂದೇಶ” ವನ್ನೂ ಸಾರಿದವರು ರಾಷ್ಟ್ರಕವಿ ಕುವೆಂಪು ರವರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.
ಕುವೆಂಪುನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ಅವರು ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಈ.ಸಿ.ನಿಂಗರಾಜ್ ಗೌಡರವರು,
ಕುವೆಂಪು ಅವರು ತಮ್ಮ ಬದುಕಿನ ಉತ್ತರಾರ್ಧದಲ್ಲಿ ವಿಶ್ವಮಾನವ ಸಂದೇಶ ಪ್ರಚಾರದ ವ್ರತ ಕೈಗೊಂಡಿದ್ದರು. ಯಾರೇ ಕಾರ್ಯಕ್ರಮಕ್ಕೆ ಕರೆಯಲು ಹೋದರೂ ವಿಶ್ವಮಾನವ ಸಂದೇಶದ ಪ್ರತಿಗಳನ್ನು ನೀಡಿ, ಇದರ ಪ್ರತಿಗಳನ್ನು ಮುದ್ರಿಸಿ ಹಂಚಿ ಎಂದು ಸಲಹೆ ನೀಡುತ್ತೀದ್ದರು. ಅದರ ಜೊತೆಯಲ್ಲಿಯೇ “ಎಲ್ಲದರೂ ಇರು, ಎಂಥಾದರೂ ಇರು, ಎಂದೆಂದಿಗೂ ಕನ್ನಡವಾಗಿರೂ” ಎಂದು ತಮ್ಮ ಕವನದ ಮೂಲಕ ಕುವೆಂಪುರವರು ನಮಗೆಲ್ಲರಿಗೂ ಸಂದೇಶ ನೀಡಿದ್ದಾರೆ ಎಂದರು.
ಜಾತಿ, ಮತ ನಿವಾರಣೆಯಾಗದೇ ಸಮಾಜ ಪರಿವರ್ತನೆ ಅಸಾಧ್ಯ ಎಂಬುದು ಅವರ ಧೃಡ ನಿಲುವಾಗಿತ್ತು.
ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ, ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ “ ಶ್ರೀ ರಾಮಾಯಣ ದರ್ಶನಂ”ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ “ಕಾನೂರು ಹೆಗ್ಗಡತಿ” ಹಾಗೂ “ಮಲೆಗಳಲ್ಲಿ ಮದುಮಗಳು” ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲವಂತೆ ಮಾಡಿದೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ. ಜಲಗಾರ, ಯಮನಸೋಲು, ರಕ್ತಾಕ್ಷಿ, ಶೂದ್ರ ತಪಸ್ವಿ, ಬೆರಳ್ ಗೆ ಕೊರಳ್, ಬಲಿದಾನ ನಾಟಕಗಳು ಪ್ರಮುಖವಾದವು ಎಂದು ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.
ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರೂ ಆಗಿದ್ದರು. ತದನಂತರ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದರು. ತಮ್ಮ ಕಲ್ಪನೆಯ ಕೂಸಾದ “ಮಾನಸ ಗಂಗೋತ್ರಿ”ಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಾಯನಾಂಗ, ಸಂಶೋಧನಾಂಗ ಹಾಗೂ ಪ್ರಸರಾಂಗ ಎಂದು ವಿಭಾಗಿಸಿ, ದೇಶದ ಇತರ ವಿಶ್ವವಿದ್ಯಾನಿಲಯಗಳಿಗೆ ಮಾದರಿಯಾಗುವಂತೆ ಬೆಳೆಸಿದರು.ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.
ಕುವೆಂಪು ಅವರ “ಬೆರಳ್ ಗೆ ಕೊರಳ್” ಮತ್ತು “ಕಾನೂರು ಹೆಗ್ಗಡತತಿ” ಕಾದಂಬರಿ ಚಲನಚಿತ್ರವಾಗಿದೆ. “ಮಲೆಗಳಲ್ಲಿ ಮದುಮಗಳು” ಕಾದಂಬರಿ ಧಾರಾವಾಹಿಯಾಗಿದೆ ಹಾಗೂ 9 ಘಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಮತ್ತು ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರದರ್ಶನಗೊಂಡಿರುವುದನ್ನೂ ಸ್ಮರಿಸುತ್ತಾ, ಕುವೆಂಪು ಅವರ ಕವನ ಸಂಕಲನಗಳು, ಮಹಾಕಾವ್ಯ, ಕಾದಂಬರಿ, ನಾಟಕಗಳು, ಆತ್ಮಕಥೆ, ವಿಮರ್ಶೆಗಳನ್ನು ಓದಿ ನಾವೇಲ್ಲರೂ ಅವರ ವಿಶ್ವಮಾನವ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಡಾ.ಈ.ಸಿ.ನಿಂಗರಾಜ್ ಗೌಡ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಲ್. ದೇವೆಗೌಡ ಅವರು ವಹಿಸಿದ್ದರು. ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್ ಅವರು ಕುವೆಂಪುರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ನಗರಪಾಲಿಕೆ ಸದಸ್ಯರಾದ ಕೆ.ವಿ. ಮಲ್ಲೇಶ್, ಉದ್ಯಮಿಗಳಾದ ಏಕನಾಥ್ ರೈ, ವೈ.ಎಸ್. ಪ್ರಾರ್ಪಟಿಸ್ ಮಾಲೀಕರಾದ ಕೆ.ಎನ್.ಸಂತೋಷ್, ಪುಣ್ಯಶ್ರೀ ಎಂಟರ್ ಪ್ರೈಸಸ್ ನ ಎಂ.ಮೋಹನ್, ಮಾಜಿ ಸೆನಟ್ ಸದಸ್ಯರಾದ ಜಗದೀಶ್, ರಾಮಪ್ಪ ರಮೇಶ್, ರಘರಾಮ್ ಗೌಡ, ರಾಮು, ಕೆ.ಆರ್.ಜಗದೀಶ್ ಕುಮಾರ್, ಸಂಸ್ಥೆಯ ಖಜಾಂಚಿ ಟಿ.ಕೃಷ್ಣಕುಮಾರ್, ಕಾರ್ಯದರ್ಶಿ ಚರಣ್ ಶಿವರಾಜ್, ಎಂ.ರಮೇಶ್ ಮತ್ತೀತರರು ಭಾಗವಹಿಸಿದ್ದರು.