ಪಿರಿಯಾಪಟ್ಟಣ:6 ಜುಲೈ 2022
ನಂದಿನಿ ಮೈಸೂರು
ಪಿರಿಯಾಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲ್ಲೂಕಿನಲ್ಲಿ ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟ ರಚನೆ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.
ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜ್ ಅವರು ಮಾತನಾಡಿ ಕೆಲ ಅಧಿಕಾರಿಗಳು ಗ್ರಾ.ಪಂ ಸದಸ್ಯರಿಗೆ ಅಗೌರವ ತೋರಿ ಕಚೇರಿಯಲ್ಲಿನ ಕೆಲಸಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಶಾಸಕರು ಸಂಸದರು ಸೇರಿದಂತೆ ಮೇಲ್ವರ್ಗದ ಜನ ಪ್ರತಿನಿಧಿಗಳು ಗ್ರಾ.ಪಂ ಸದಸ್ಯರ ಕೆಲಸಗಳಿಗೆ ಅಡ್ಡಿ ಮಾಡುತ್ತಿದ್ದು ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ ಗ್ರಾ.ಪಂ ಗಳಿಗೆ ಅಧಿಕಾರ ನೀಡದೆ ವಂಚಿಸುತ್ತಿದ್ದಾರೆ ಇಂತಹ ದುರಾಡಳಿತಗಳ ವಿರುದ್ಧ ಕೆಲಸ ನಿರ್ವಹಿಸಲು ಸಂಘಟನೆ ಅತಿ ಮುಖ್ಯ ಪಾತ್ರ ವಹಿಸಲಿದೆ ಎಂದರು.
ಸಂಪನ್ಮೂಲ ವ್ಯಕ್ತಿ ರಾಜು ಅವರು ಮಾತನಾಡಿ ಗ್ರಾ.ಪಂ ಸದಸ್ಯರು ಸಹ ಸಂಸದರು ಶಾಸಕರ ರೀತಿಯೇ ಚುನಾಯಿತ ಪ್ರತಿನಿಧಿಗಳಾಗಿದ್ದು ಮಾಸಿಕ ಗೌರವಧನ ಹೆಚ್ಚಳ ಮತ್ತು ಉಚಿತ ಬಸ್ ಪಾಸ್ ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಸಂಘಟನೆ ಮೂಲಕ ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ಗ್ರಾ.ಪಂ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಘಟಕ ರಚನಾತ್ಮಕ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.
ಈ ಸಂದರ್ಭ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷರಾದ ರವಿಚಂದ್ರ ಬೂದಿತಿಟ್ಟು, ರಂಗಸ್ವಾಮಿ, ರಾಜ್ಯ ಜಂಟಿ ನಿರ್ದೇಶಕ ನಿಶಾಂತ್, ಜಿಲ್ಲಾ ಸಲಹೆಗಾರ ರಮೇಶ್, ಗ್ರಾ.ಪಂ ಸದಸ್ಯರುಗಳಾದ ದೇವೇಂದ್ರ, ರಘುಗೌಡ, ಚಂದ್ರೇಗೌಡ, ಗಿರಿಜಾ, ಪೂಜಾ, ಚಲುವರಾಜು, ನರಸಿಂಹಮೂರ್ತಿ, ಮಂಜುನಾಥ್ ಹಾಗು ತಾಲ್ಲೂಕಿನ ವಿವಿಧೆಡೆಯ ಗ್ರಾ.ಪಂ ಸದಸ್ಯರು ಹಾಜರಿದ್ದರು.