ನಂದಿನಿ ಮೈಸೂರು
ಸಣ್ಣ ಕೈಗಾರಿಕೆಗಳ ಬಲವರ್ಧನೆಗೆ ಮೈಸೂರಿನಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್ ಬ್ಯುಸಿನೆಸ್ ಕಾನ್ಕ್ಲೇವ್ 2025
ಮೈಸೂರು: ಲಾಭರಹಿತ ಸಾರ್ವಜನಿಕ ಸಾಮಾಜಿಕ ಟ್ರಸ್ಟ್ ಆದ ಅಂತರರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ವತಿಯಿಂದ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಮೂರು ದಿನಗಳ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್ಕ್ಲೇವ್ – 2025 ಅನ್ನು ಜನವರಿ 17 ರಿಂದ 19 ರವರೆಗೆ ಆಯೋಜಿಸಲಾಗಿದೆ ಎಂದು ಐಲೈಫ್ನ ಸಂಸ್ಥಾಪಕರು ಹಾಗೂ ಸಮಾವೇಶದ ಮುಖ್ಯ ಸಂಚಾಲಕರಾದ ಸಂತೋಷ್ ಕೆಂಚಾಂಬ ತಿಳಿಸಿದರು.
ಇಂದು ನಗರದ ಹೋಟೆಲ್ ರಿಯೋ ಮೆರಿಡಿಯನ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಈ ಸಮಾವೇಶವು ಎಲ್ಲಾ ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ಮೂರು ದಿನಗಳ ಕಾಲ ಮಹಾರಾಜ ಗ್ರೌಂಡ್ಸ್ನಲ್ಲಿ ಕಾನ್ಕ್ಲೇವ್ ನಡೆಯುತ್ತದೆ. ದೇಶದ ವಿವಿಧ ಭಾಗಗಳಿಂದ ಬರುವ ಹಲವಾರು ಜನರನ್ನು, ವೃತ್ತಿಪರರನ್ನು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಲು ಸಹಾಯವಾಗುವ ಕಾರ್ಯಕ್ರಮ ಇದು. ಅನೇಕ ಉದ್ಯಮಿಗಳು ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಅತ್ಯುತ್ತಮ ವೇದಿಕೆಯೂ ಹೌದು. ಸಮಾವೇಶದಲ್ಲಿ ಮೂರು ದಿನವೂ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಮಾವೇಶದಲ್ಲಿ ಭಾಗಿಯಾಗಲು ಪೂಜ್ಯ ಶ್ರೀ ಸುತ್ತೂರು ಮಠದ ಸ್ವಾಮೀಜಿಗಳು ಒಪ್ಪಿಗೆ ನೀಡಿದ್ದಾರೆ. ಇಲ್ಲಿ ಉದ್ಯಮಕ್ಕೆ ಸಂಬಂಧಿಸಿದಂತೆ ವಿವಿಧ ಮಳಿಗೆಗಳು, ಚರ್ಚಾ ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆʼ ಎಂದು ಹೇಳಿದರು.
ʼಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲದೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕದ ನಗರಗಳಲ್ಲಿ ಒಂದಾಗಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಮೈಸೂರು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿದೆ. ಈ ಸಮಾವೇಶವು ಜಾಗತಿಕ ಹಂತದಲ್ಲಿ ನಗರದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಮೈಸೂರಿನತ್ತ ಹೂಡಿಕೆದಾರರನ್ನು ಆಕರ್ಷಿಸುವುದು, ವ್ಯಾಪಾರ-ವಹಿವಾಟು ಹೆಚ್ಚಾಗುವಂತೆ ಮಾಡುವುದು ಹಾಗೂ ನಗರದ ಒಟ್ಟಾರೆ ಉನ್ನತೀಕರಣ ಈ ಸಮಾವೇಶದ ಮುಖ್ಯ ಉದ್ದೇಶ. ಈ ಸಮಾವೇಶವು ಮುಖ್ಯವಾಗಿ ಮಹಿಳಾ ಉದ್ಯಮಶೀಲತೆ, ಮೈಕ್ರೋ ಎಂಟರ್ಪ್ರೈಸಸ್ (ಸಣ್ಣ ಕೈಗಾರಿಕೆಗಳು) ಮತ್ತು ಮೈಸೂರಿನ ಸಾಂಸ್ಕೃತಿಕತೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇಲ್ಲಿನ ಪ್ರತಿ ಪ್ರಾಂತ್ಯದ, ಪ್ರತಿ ಹಳ್ಳಿಯ ಜನರನ್ನು ತಲುಪುವ ಉದ್ದೇಶ ನಮ್ಮದುʼ ಎಂದು ವಿವರಿಸಿದರು.
ಐಲೈಫ್ನ ಮಾಜಿ ಅಧ್ಯಕ್ಷರಾದ ಬಿ.ಎಸ್.ಪ್ರಶಾಂತ್ ಮಾತನಾಡಿ, ʼಹಳ್ಳಿಯಿಂದ ಪಟ್ಟಣಕ್ಕೆ ಬರುವ ಉದ್ಯಮಿಗಳೆಲ್ಲರೂ ಬೃಹತ್ ಹಾಗೂ ಮಧ್ಯಮ ಉದ್ಯಮಗಳ ಮೇಲೆ ಮಾತ್ರ ಗಮನ ಕೊಡುತ್ತಾರೆ. ಅದಕ್ಕೂ ಮೀರಿ ನಮ್ಮ ನಾಡಿನಲ್ಲಿ ಕಡಕೋಳ ಚಾಪೆ, ರೋಸ್ವುಡ್ ಇನ್ಲೇ, ಅಗರಬತ್ತಿ ತಯಾರಿಕೆ ಸೇರಿದಂತೆ ಇನ್ನಿತರ ಸಣ್ಣ ಕೈಗಾರಿಕೆಗಳಿವೆ. ಇಂತಹ ಸಣ್ಣಪುಟ್ಟ ಉದ್ಯಮಿಗಳು ಸಹ ಇಂತಹ ದೊಡ್ಡ ಕಾರ್ಯಕ್ರಮಗಳ ಪ್ರಯೋಜನ ಪಡೆದು ತಮ್ಮ ಉದ್ಯಮವನ್ನು ದೊಡ್ಡ ಮಟ್ಟಕ್ಕೆ ಬೆಳೆಯುವಂತೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ಸಣ್ಣಪುಟ್ಟ ಹಳ್ಳಿಗಳ ಜನರೂ ಇದರ ಉಪಯೋಗ ಪಡೆಯಲಿ ಎಂಬುದು ನಮ್ಮ ಉದ್ದೇಶʼ ಎಂದರು.
ಸಮಾವೇಶದ ಮುಖ್ಯಾಂಶಗಳು:
1. ಕರ್ನಾಟಕ ಸರ್ಕಾರವು ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಹಾಗೂ ಕೃಷಿ ಸಮುದಾಯಗಳ ಪೈಕಿ ಪ್ರಚಲಿತಗೊಳಿಸುವುದು.
2. ಸ್ಟಾರ್ಟ್ ಅಪ್ಗಳ ಬಲಪಡಿಸುವಿಕೆ, ಜಿಲ್ಲಾ ಮಟ್ಟದಲ್ಲಿ ಮಹಿಳಾ ಉದ್ಯಮಶೀಲತೆ ಹಾಗೂ ಯುವ ಉದ್ಯಮಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗದರ್ಶನ.
3. ವಿವಿಧ ಉತ್ಪನ್ನಗಳು ಹಾಗೂ ಸೇವೆಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸುವ ಮೂಲಕ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸಾಮರ್ಥ್ಯವನ್ನು ಪ್ರದರ್ಶಿಸುವುದು.
4. ಅನುಭವಿ ಉದ್ಯಮಿಗಳು, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮಿಗಳು, ಅಧಿಕಾರಿಗಳು ಮತ್ತಿತತರನ್ನು ಒಳಗೊಂಡ ಉಪಯುಕ್ತ ಚರ್ಚೆಗಳು.
5. ವೀರಶೈವ ಲಿಂಗಾಯತ ಸಮುದಾಯದ ಶಕ್ತಿ ಹಾಗೂ ಮೈಸೂರಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವುದು.
6. ಜಗತ್ತಿನಾದ್ಯಂತ ಇರುವ ಇತರ ವೀರಶೈವ ಲಿಂಗಾಯತ ಸಂಘಗಳ ಮೂಲಕ ಜಾಗತಿಕ ಪ್ರೇಕ್ಷಕರನ್ನು ತಲುಪುವುದು.
ಏನಿದು iLYF?:
ವಾಣಿಜ್ಯೋದ್ಯಮಿಗಳು, ಅಧಿಕಾರಿಗಳು, ಯುವ ಹಾಗೂ ಮಹಿಳಾ ಉದ್ಯಮಿಗಳು, ಸಾಂಸ್ಕೃತಿಕ ಪ್ರತಿಭೆಗಳು, ವೀರಶೈವ ಲಿಂಗಾಯತ ಸಮುದಾಯದ ಸದಸ್ಯರು, ಮಾಧ್ಯಮ ಮಿತ್ರರು ಹಾಗೂ ಮೈಸೂರಿಗರೆಲ್ಲರನ್ನೂ ಸಮಾವೇಶಕ್ಕೆ iLYF ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಕಾರ್ಯಕ್ರಮದ ಸಂಯೋಜಕರು ತಿಳಿಸಿದರು.
ಇದೇ ವೇಳೆ ಈ ಬಾರಿಯ ಸಮಾವೇಶದ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು. ಪತ್ರಿಕಾಗೋಷ್ಠಿಯಲ್ಲಿ iLYF ಸಂಸ್ಥಾಪಕರಾದ ಸಂತೋಷ ಕೆಂಚಾಂಬ, ಅವಿನಾಶ್ ಪಾಲೇಗಾರ್, iLYF ಮೈಸೂರು ಅಧ್ಯಕ್ಷರಾದ ಮಹದೇವ ಪ್ರಸಾದ್, ಮಾಜಿ ಅಧ್ಯಕ್ಷರಾದ ಬಿ.ಎಸ್.ಪ್ರಶಾಂತ್, ಮಾಜಿ ಅಧ್ಯಕ್ಷರಾದ ವೀರೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ತೀರ್ಥ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.