*ಬಣ್ಣ ಕಳೆದುಕೊಂಡ ಪಿಂಕ್ ಸುಂದರಿ*
—————————————-
ದಸರಾದಲ್ಲೂ ವ್ಯಾಪಾರ ಪುಲ್ ಡಲ್
ಸದಾ ಪಿಂಕ್ ಧಿರಿಸಿನಲ್ಲಿ
ಕಂಗೊಳಿಸುತಿದ್ದ, ಎಲ್ಲಾ ವಯೋಮಾನದವರನ್ನು ತನ್ನತ್ತ ಬರಸೆಳೆಯುತಿದ್ದ ಪಿಂಕ್ ಸುಂದರಿ ಬಣ್ಣ ಕಳೆದುಕೊಂಡು ಪೇಲವವಾಗಿ ಕಾಣಿಸುತಿದ್ದಾಳೆ.
ಇವಳನ್ನೇ ನಂಬಿಕೊಂಡು ಜೀವನ ನಡೆಸುತಿದ್ದವರ ಬದುಕು ಅಯೋಮಯವಾಗಿದೆ.
ಬಾಂಬೆ ಮಿಠಾಯಿ, ಬೊಂಬಾಯಿ ಮಿಠಾಯಿ, ಕ್ಯಾಂಡಿ, ಹತ್ತಿ ಬತ್ತಿ ಮುಂತಾದ ಹೆಸರುಗಳಿಂದ ಕರೆಯಲಾಗುತಿದ್ದ ಈ ಸಿಹಿತಿಂಡಿಗೆ ಸರ್ಕಾರ ವಿಧಿಸಿದ ಆರೋಗ್ಯ ದೃಷ್ಟಿ ಕ್ರಮಗಳಿಂದಾಗಿ ಬಣ್ಣ ಹಚ್ಚಿಕೊಂಡು ರಂಗದ ಮೇಲೆ ಬರುವಂತಿಲ್ಲ. ಬಣ್ಣವಿಲ್ಲದಿದ್ದರೆ ಯಾರೂ ಇವಳ ಕಡೆ ನೋಡುವುದಿಲ್ಲ.
ಮಕ್ಕಳಿಗಂತೂ ಆಕರ್ಷಕ ತಿನಿಸಾಗಿದ್ದ ಬಾಂಬೆ ಮಿಠಾಯಿ ಆಲಿಯಾಸ್ ಬೊಂಬಾಯಿ ಮಿಠಾಯಿ ಉರುಫ್ ಕ್ಯಾಂಡಿಗೆ ತನ್ನ ರೂಪ ಬದಲಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ.
ಹಳ್ಳಿಗಳಲ್ಲಿ ಸೈಕಲ್ ಮೇಲೆ ಗಾಜಿನ ಡಬ್ಬಿಗಳಲ್ಲಿ ತುಂಬಿಕೊಂಡು ಬರುತ್ತಿದ್ದ, ಬಾಂಬೆ ಮಿಠಾಯಿ ಅಣ್ಣ ನಾಲ್ಕಾಣೆ, ಎಂಟಾಣೆಗೆ ಒಂದಷ್ಟು ಎಳೆಗಳನ್ನ ಕೈಗಿಡುತ್ತಿದ್ದ, ಅದನ್ನ ಸ್ವಲ್ಪ ಸ್ವಲ್ಪವೇ ಕಿತ್ತುಕೊಂಡು ನಾಲಗೆಯ ಮೇಲೆ ಇಟ್ಟುಕೊಂಡು, ಒಳ ಬಾಯಿಯ ಮೇಲ್ಭಾಗಕ್ಕೆ ಒತ್ತಿಕೊಂಡರೆ ಅದರಿಂದ ಸಿಗುತಿದ್ದ ಆನಂದ ವರ್ಣನಾತೀತ.
ಅಂತಹ ತಿನಿಸು ಆಧುನಿಕತೆಯ ಕಾಲಚಕ್ರಕ್ಕೆ ಸಿಲುಕಿ ಡಬ್ಬದಿಂದ ಹೊರಬಂದು ಪ್ಲಾಸ್ಟಿಕ್ ಕವರ್ ಗಳೊಳಗೆ ಬಂಧಿಯಾಯಿತು.ಪ್ಲಾಸ್ಟಿಕ್ ಕವರ್ ಒಳಗೆ ಬಂಧಿಯಾದರೂ ತನ್ನ ಕಲರ್ ನಿಂದಾಗಿ ಕ್ಯಾಂಡಿಗೆ ಡಿಮ್ಯಾಂಡ್ ಯಾವತ್ತೂ ಕಡಿಮೆಯಾಗಿರಲಿಲ್ಲ.
ನಗರದ ಪ್ರಮುಖ ರಸ್ತೆಗಳಲ್ಲಿ ಲತಾಂಗಿಯರು ಕೂಲಿಂಗ್ ಗ್ಲಾಸ್ಗಳನ್ನು ಹಾಕಿಕೊಂಡು ಕ್ಯಾಂಡಿಗಳನ್ನ ಕೈಯಲ್ಲಿಡಿದು ಬಿಂಕದಿಂದ ನಡೆಯುತಿದ್ದರೆ ಹುಡುಗರ ಕಣ್ಣೋಟಕ್ಕೆ ಕ್ಯಾಂಡಿಗಳು ಕರಗುತಿದ್ದವು.
ಮಕ್ಕಳ, ಯುವಜನರ, ಮಹಿಳೆಯರ ನೆಚ್ಚಿನ ತಿನಿಸಾಗಿರುವ ಬಾಂಬೆ ಮಿಠಾಯಿ ಹೊಸ ರೂಪಕ್ಕೆ ಜನ ಹೊಂದಿಕೊಳ್ಳುವರೋ ಅಥವಾ ಕ್ಯಾಂಡಿ ಕಾಲಗರ್ಭಕ್ಕೆ ಸೇರುವುದೋ ಕಾಲವೇ ಉತ್ತರಿಸಬೇಕಾಗಿದೆ.