ನಂದಿನಿ ಮನುಪ್ರಸಾದ್ ನಾಯಕ್
*ಆ.2 ರಂದು ಮೈಸೂರಿನಲ್ಲಿ ನಡೆಯುತ್ತಿರುವ ಬ್ರಾಹ್ಮಣ ಮಹಾಸಭಾ ಸಮಾವೇಶಕ್ಕೆ ರಾಜ್ಯ ಉಪಾಧ್ಯಕ್ಷರಾಗಿರುವ ನನ್ನನ್ನೂ ಆಹ್ವಾನಿಸಿಲ್ಲ ಎಂದು ಎನ್.ಎಂ.ನವೀನ್ ಕುಮಾರ್ ತಿಳಿಸಿದರು.
ದಿನಾಂಕ 02/08/2025ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾದ ಎಸ್. ರಘುನಾಥ್ ಹಾಗೂ ಹಿರಿಯ ಉಪಾಧ್ಯಕ್ಷರಾದ ಆರ್. ಲಕ್ಷ್ಮಿಕಾಂತ್ ರವರಿಗೆ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ರಾಜಕೀಯ ಪಿತೂರಿ ಮತ್ತು ವೈಯಕ್ತಿಕ ವ್ಯಕ್ತಿ ವೈಭವೀಕರಣವನ್ನು ಹೆಚ್.ವಿ.ರಾಜೀವ್ ರವರು ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಕೈಬಿಟ್ಟಿರುವುದಲ್ಲದೆ, ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಎಸ್.ರಘುನಾಥ್ ರವರ ಉಪಸ್ಥಿತಿಯಲ್ಲೇ ಉಪಾಧ್ಯಕ್ಷರಾದ ಹೆಚ್.ವಿ.ರಾಜೀವ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿರುವುದು ಶಿಷ್ಟಾಚಾರದ ಉಲ್ಲಂಘನೆ ಅಲ್ಲದೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಘನತೆಗೆ ಉಂಟು ಮಾಡಿರುವ ಅವಮಾನವೇ ಸರಿ ಎಂದು ತಿಳಿಸಿದರು. ಮುಂದುವರಿದು ಮಾತನಾಡಿದ ನವೀನ್ ಕುಮಾರ್ ರವರು ನನ್ನ ಹೆಸರನ್ನು ಕೈಬಿಟ್ಟು ಕಾರ್ಯಕ್ರಮ ಮಾಡಿದರೆ ನನಗೆ ಮಾಡಿದ ಅವಮಾನವೆಂದು ಅವರು ಭಾವಿಸಿದರೆ ಅದು ಅವರ ತಪ್ಪು ಗ್ರಹಿಕೆ ಇದು ಮೈಸೂರಿನ ಸಮಸ್ತ ವಿಪ್ರ ಸಮಾಜಕ್ಕೆ ಮಾಡಿರುವ ಅಪಮಾನವೆಂದು ಹೇಳಿದರು. ರಾಜ್ಯಾಧ್ಯಕ್ಷರಿಗೂ ಕಾರ್ಯಕ್ರಮದ ಅಧ್ಯಕ್ಷತೆ ನೀಡದೆ ಸ್ಥಳೀಯ ಶಾಸಕರಿಗೂ ಅಧ್ಯಕ್ಷತೆ ನೀಡದೆ, ವಿಪ್ರ ಸಮಾಜದ ಹಲವಾರು ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳು, ವಿವಿಧ ಬ್ರಾಹ್ಮಣ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಮುದಾಯದ ಅನೇಕ ಹಿರಿಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಕೇವಲ ಸ್ವಯಂ ವೈಭವೀಕರಣಕ್ಕೆ ಮತ್ತು ರಾಜಕೀಯ ದುರುದ್ದೇಶದಿಂದ ಸಮುದಾಯವನ್ನು ದುರುಪಯೋಗ ಮಾಡುತ್ತಿರುವ ಇವರ ನಡೆಯನ್ನು ವಿರೋಧಿಸಿ ಈ ಕಾರ್ಯಕ್ರಮದ ಬಗ್ಗೆ ವಿಷಾದ ವ್ಯಕ್ತಪಡಿಸಿ, ಈ ಸಮಾರಂಭದಿಂದ ದೂರ ಉಳಿಯುವುದಾಗೆ ಸ್ಪಷ್ಟನೆ ನೀಡಿದರು. ಈ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಂಟಿ ಕಾರ್ಯದರ್ಶಿ ಆರ್.ಎಸ್.ಸತ್ಯನಾರಾಯಣ, ಹಿರಿಯ ವಿಪ್ರ ಮುಖಂಡರಾದ ಮಂಜುನಾಥ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಬಿ.ವಿ.ಗದಾಧರ, ವಿಪ್ರ ಮುಖಂಡರಾದ ನಾಗೇಂದ್ರ ಬಾಬು, ಸಂದೀಪ್ ಇನ್ನಿತರರು ಉಪಸ್ಥಿತರಿದ್ದರು.