ಅತ್ಯಾಧುನಿಕ 3ಡಿ ಅಬ್ಲೇಶನ್ ಚಿಕಿತ್ಸೆ ಪರಿಚಯಿಸುವ ಮೂಲಕ ಹೃದಯ ಬಡಿತದ ಏರುಪೇರಿಗೆ ಶ್ರೇಷ್ಠ ಚಿಕಿತ್ಸೆ ಒದಗಿಸುವ ಮಹತ್ವದ ಸಾಧನೆ ಮಾಡಿದ ನಾರಾಯಣ ಹೆಲ್ತ್

ನಂದಿನಿ ಮನುಪ್ರಸಾದ್ ನಾಯಕ್

 

ಮೈಸೂರಿನಲ್ಲಿ ಅತ್ಯಾಧುನಿಕ 3ಡಿ ಅಬ್ಲೇಶನ್ ಚಿಕಿತ್ಸೆ ಪರಿಚಯಿಸುವ ಮೂಲಕ ಹೃದಯ ಬಡಿತದ ಏರುಪೇರಿಗೆ ಶ್ರೇಷ್ಠ ಚಿಕಿತ್ಸೆ ಒದಗಿಸುವ ಮಹತ್ವದ ಸಾಧನೆ ಮಾಡಿದ ನಾರಾಯಣ ಹೆಲ್ತ್


ಮೈಸೂರಿನ ರೋಗಿಗಳು ಈಗ ಸಂಕೀರ್ಣ ಹೃದಯ ಸಂಬಂಧಿ ಚಿಕಿತ್ಸೆಗಳಿಗಾಗಿ ಮಹಾನಗರಗಳಿಗೆ ಪ್ರಯಾಣಿಸುವ ಅಗತ್ಯವಿಲ್ಲ; ಬದಲಿಗೆ ತಮ್ಮ ಮನೆಯ ಸಮೀಪವೇ ಅತ್ಯಾಧುನಿಕ ಚಿಕಿತ್ಸೆ ಪಡೆಯಬಹುದು.

ಮೈಸೂರು, 25 ಮಾರ್ಚ್, 2026: ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಆಗಿರುವ ನಾರಾಯಣ ಹೆಲ್ತ್ ಸಂಸ್ಥೆಯು, ಇದೀಗ ಮೈಸೂರಿನಲ್ಲಿ ಅತ್ಯಾಧುನಿಕ 3ಡಿ-ಗೈಡೆಡ್ ಏಟ್ರಿಯಲ್ ಫಿಬ್ರಿಲೇಷನ್ ಅಬ್ಲೇಶನ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪರಿಚಯಿಸಿದ್ದು, ಈ ಮೂಲಕ ಪ್ರಾದೇಶಿಕ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ. ಈ ಅತ್ಯಾಧುನಿಕ ಚಿಕಿತ್ಸೆ ಒದಗಿಸುವ ಮೂಲಕ ಮೈಸೂರು ಮತ್ತು ಸುತ್ತಮುತ್ತಲ ಭಾಗದ ರೋಗಿಗಳಿಗೆ ಉತ್ಕೃಷ್ಟ ಹೃದಯ ಚಿಕಿತ್ಸೆಯನ್ನು ಅತ್ಯಂತ ಸುಲಭವಾಗಿ ಲಭ್ಯವಾಗುವಂತೆ ಮಾಡಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾ. ಕೇಶವ ಮೂರ್ತಿ, ಹಿರಿಯ ಹೃದ್ರೋಗ ತಜ್ಞರು ಹಾಗೂ ವೈದ್ಯಕೀಯ ಸಲಹೆಗಾರರು, ಡಾ. ಅಭಿನವ ಭೈರವನಾಥ ಪಾಂಡೆ ಆನಂದ, ಹೃದ್ರೋಗ ತಜ್ಞರು – ಎಲೆಕ್ಟ್ರೋ ಫಿಸಿಯೋಲಾಜಿಸ್ಟ, ಹಾಗೂ ಡಾ. ಅಶೋಕ.ಎ, ತುರ್ತು ಚಿಕಿತ್ಸಾ ತಜ್ಞರು ಹಾಗೂ ವೈದ್ಯಕೀಯ ಅಧೀಕ್ಷಕರು, ನಾರಾಯಣ ಆಸ್ಪತ್ರೆ, ಮೈಸೂರು ಇವರು ಭಾಗವಹಿಸಿದ್ದರು.

ವಿಶ್ವಾದ್ಯಂತ ಕಂಡುಬರುವ ಅತ್ಯಂತ ಸಾಮಾನ್ಯ ಹೃದಯದ ಲಯದ ಸಮಸ್ಯೆಗಳಲ್ಲಿ ಒಂದಾದ ‘ಏಟ್ರಿಯಲ್ ಫಿಬ್ರಿಲೇಷನ್’, ಸಾಮಾನ್ಯವಾಗಿ ಅನಿಯಮಿತ ಹೃದಯ ಬಡಿತ, ಉಸಿರಾಟದ ತೊಂದರೆ ಮತ್ತು ಸುಸ್ತಿನ ರೂಪದಲ್ಲಿ ಕಂಡುಬರುತ್ತದೆ. ಗಂಭೀರ ಪ್ರಕರಣಗಳಲ್ಲಿ ಈ ಸಮಸ್ಯೆಯು ಪಾರ್ಶ್ವವಾಯು ಅಥವಾ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದಾಗಿದೆ. ಇತ್ತೀಚಿನವರೆಗೂ, ಇಂತಹ ಉನ್ನತ ಮಟ್ಟದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಮೈಸೂರಿನ ರೋಗಿಗಳು ಬೆಂಗಳೂರು, ಚೆನ್ನೈ ಅಥವಾ ಹೈದರಾಬಾದ್‌ನಂತಹ ಮಹಾನಗರಗಳಿಗೆ ಪ್ರಯಾಣಿಸಬೇಕಾಗಿತ್ತು. ಆದರೆ ಈಗ ಈ ಚಿಕಿತ್ಸೆ ಮೈಸೂರಿನಲ್ಲಿಯೇ ಲಭ್ಯವಾಗುತ್ತಿರುವುದು ವಿಶೇಷ.

ಪ್ರಸ್ತುತ ಯಶಸ್ವಿಯಾದ ಪ್ರಕರಣದಲ್ಲಿ ಈ ಚಿಕಿತ್ಸಾ ಪ್ರಕ್ರಿಯೆಯನ್ನು ಅತ್ಯಾಧುನಿಕ ತ್ರೀಡಿ ಎಲೆಕ್ಟ್ರೋ-ಅನಾಟಮಿಕಲ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿ ನಡೆಸಲಾಗಿದ್ದು, ಈ ತಂತ್ರಜ್ಞಾನವು ವೈದ್ಯರಿಗೆ ಅನಿಯಮಿತ ಹೃದಯ ಬಡಿತದ ಮೂಲವನ್ನು ನಿಖರವಾಗಿ ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಈ ಪ್ರಕರಣದಲ್ಲಿ ರೋಗಿಯು ಹೃದಯ ಬಡಿತದ ಏರುಪೇರಿನಿಂದಾಗಿ ಪದೇ ಪದೇ ತಲೆಸುತ್ತು ಮತ್ತು ಮೂರ್ಛೆ ಹೋಗುವ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ವಿವರವಾಗಿ ತಪಾಸಣೆ ಮಾಡಿದ ನಂತರ ಈ ಚಿಕಿತ್ಸೆಗೆ ಒಳಪಡಿಸಲಾಯಿತು ಮತ್ತು ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು.

ಅಬ್ಲೇಶನ್ ಚಿಕಿತ್ಸೆಯ ಒಂದು ವಾರದ ನಂತರ ನಡೆಸಿದ ‘ಹೋಲ್ಟರ್ ಮಾನಿಟರಿಂಗ್’ ಪರೀಕ್ಷೆಯಲ್ಲಿ ಅನಿಯಮಿತ ಹೃದಯ ಬಡಿತದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಲಕ್ಷಣಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಉತ್ತಮ ಫಲಿತಾಂಶದ ಹೊರತಾಗಿ ಈ ಬೆಳವಣಿಗೆಯು ಕೇವಲ ವೈದ್ಯಕೀಯ ಯಶಸ್ಸು ಮಾತ್ರವಲ್ಲದೆ, ರೋಗಿಗಳು ಚಿಕಿತ್ಸೆಗಾಗಿ ದೂರದ ಊರುಗಳಿಗೆ ಅಲೆಯುವುದನ್ನು ತಪ್ಪಿಸಿ, ತಮ್ಮೂರಿನಲ್ಲೇ ಸಕಾಲದಲ್ಲಿ ಚಿಕಿತ್ಸೆ ಮತ್ತು ತಪಾಸಣೆಗಳನ್ನು ಪಡೆಯಲು ಸಹಾಯ ಮಾಡಲಿದೆ.

ಈ ಕುರಿತು ಮಾತನಾಡಿದ ಮೈಸೂರಿನ ನಾರಾಯಣ ಹೆಲ್ತ್‌ ನ ಡಾ. ಅಭಿನವ್ ಭೈರವನಾಥ್ ಪಾಂಡೆ ಆನಂದ್ ಅವರು, “ಸಕಾಲದಲ್ಲಿ ಸುಧಾರಿತ ಹೃದಯ ಚಿಕಿತ್ಸೆ ಲಭ್ಯವಾಗುವುದು, ರೋಗಿಗಳು ಹೃದಯದ ಲಯದ ಸಮಸ್ಯೆಗಳಿಂದ ಚೇತರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಲವು ಸಂದರ್ಭಗಳಲ್ಲಿ, ರೋಗಿಗಳು ಕೇವಲ ಕಾಯಿಲೆಯ ಸಂಕೀರ್ಣತೆ ಮಾತ್ರವಲ್ಲದೆ, ಚಿಕಿತ್ಸೆಗಾಗಿ ದೂರದ ನಗರಗಳಿಗೆ ಪ್ರಯಾಣಿಸುವ ಒತ್ತಡವನ್ನೂ ಎದುರಿಸಬೇಕಾಗುತ್ತಿತ್ತು. ಈಗ ಮನೆಯ ಸಮೀಪವೇ ಇಂತಹ ಉನ್ನತ ಮಟ್ಟದ ಚಿಕಿತ್ಸೆ ಸಿಗುತ್ತಿರುವುದರಿಂದ, ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚಲು, ನಿರಂತರವಾಗಿ ವೈದ್ಯಕೀಯ ತಪಾಸಣೆ ನಡೆಸಲು ಮತ್ತು ಒಟ್ಟಾರೆ ಚಿಕಿತ್ಸಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಾಧ್ಯವಾಗುತ್ತದೆ. ಪ್ರಾದೇಶಿಕ ಕೇಂದ್ರಗಳಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣತಿ ಲಭ್ಯವಾಗುತ್ತಿರುವುದು ಒಂದು ಪ್ರಮುಖ ಬದಲಾವಣೆಯಾಗಿದೆ. ಇದು ರೋಗಿಗಳು ಮತ್ತು ಅವರ ಕುಟುಂಬಗಳಲ್ಲಿ ಚಿಕಿತ್ಸೆಯ ಬಗ್ಗೆ ನಂಬಿಕೆಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.

ಈ ಮೂಲಕ ನಾರಾಯಣ ಹೆಲ್ತ್ ಸಂಸ್ಥೆಯು ಮೈಸೂರಿನಲ್ಲಿ ತನ್ನ ‘ಅರಿತ್ಮಿಯಾ’ (ಹೃದಯ ಬಡಿತದ ಏರುಪೇರು) ಚಿಕಿತ್ಸಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಏಟ್ರಿಯಲ್ ಫಿಬ್ರಿಲೇಷನ್, ಸಂಕೀರ್ಣ ಸುಪ್ರಾವೆಂಟ್ರಿಕ್ಯುಲರ್ ಟಾಕಿಕಾರ್ಡಿಯಾ, ವೆಂಟ್ರಿಕ್ಯುಲರ್ ಅರಿತ್ಮಿಯಾ ಮತ್ತು ಸುಧಾರಿತ ಕಾರ್ಡಿಯಾಕ್ ಡಿವೈಸ್ ಥೆರಪಿಗಳಂತಹ ಉನ್ನತ ಶ್ರೇಣಿಯ ಚಿಕಿತ್ಸೆಗಳನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿದೆ. ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿರುವ ಈ ಕಾಲದಲ್ಲಿ, ಇಂತಹ ಬೆಳವಣಿಗೆಗಳು ಮಹಾನಗರಗಳ ಆಚೆಗೂ ಅತ್ಯಾಧುನಿಕ ವೈದ್ಯಕೀಯ ಸೇವೆಗಳು ಲಭ್ಯವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

 

 

Leave a Reply

Your email address will not be published. Required fields are marked *