ನಂದಿನಿ ಮೈಸೂರು
ಸ್ಪರ್ಧಾತ್ಮಕ ಮ್ಯಾರಥಾನ್ ಓಟ ಸ್ಪರ್ಧೆ ಶ್ಲಾಘನೀಯ : ಪ್ರದೀಪ್ ಕುಮಾರ್ ಬಣ್ಣನೆ.
ಕನ್ನಡರಾಜ್ಯೋತ್ಸವ ನಿತ್ಯೋತ್ಸವವಾಗಬೇಕೆಂಬ ಮಹಾತ್ವಾಕಾಂಕ್ಷೆಯನ್ನಿಟ್ಟುಕೊಂಡು ರಾಜ್ಯಮಟ್ಟದ ಮ್ಯಾರಥಾನ್ ಓಟ ಸ್ಪರ್ಧೆಯನ್ನು ಮಂಡ್ಯದಲ್ಲಿ ಡಿ.೧೧ರಂದು ಆಯೋಜಿಸಿರುವುದು ಶ್ಲಾಘನೀಯ ಎಂದು ಕಾಂಗ್ರೆಸ್ ಯುವಮುಖಂಡ ಪ್ರದೀಪ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರ ವೈಯುಕ್ತಕ ಸಂಘರ್ಷ, ನಿಂದನೆ, ಟೀಕೆಗಳಿಗೆ ಸೀಮಿತವಾಗಿರುವುದು ಮುಜುಗರವನ್ನುಂಟು ಮಾಡುತ್ತಿದೆ. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯ ಬಗ್ಗೆ ಆಲೋಚನೆ ಮಾಡಬೇಕಾದ ರಾಜಕೀಯ ಮುಖಂಡರು ಸಂಘರ್ಷದ ಹಾದಿಯಲ್ಲಿ ನಿರತರಾಗಿದ್ದಾರೆ ಎಂದು ವಿಷಾದಿಸಿದರು.
ಮಂಡ್ಯದ ಕಾಯಕಯೋಗಿ ಫೌಂಡೇಶನ್ ಕಳೆದ ಆರು ವರ್ಷಗಳಿಂದ ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು’ ಘೋಷಣೆಯೊಂದಿಗೆ ರಾಜ್ಯಮಟ್ಟದ ‘ಮಂಡ್ಯ ಮ್ಯಾರಥಾನ್’ ೫ ಕಿ.ಮೀ. ಓಟಸ್ಪರ್ಧೆಯನ್ನು ಡಿ.೧೧ರಂದು ಬೆಳಿಗ್ಗೆ ೬ಗಂಟೆಗೆ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಮಂಡ್ಯ ನಗರದ ಪ್ರವಾಸಿಮಂದಿರ ಪಕ್ಕದ ಶ್ರೀ ಕೆ.ವಿ.ಶಂಕರಗೌಡ ರಸ್ತೆಯಿಂದ ತಹಸೀಲ್ದಾರ್ ಕಚೇರಿ, ಜಿಲ್ಲಾ ಕಾರಾಗೃಹ, ಕ್ಯಾತುಂಗೆರೆ ಬಡಾವಣೆ ಮಾರ್ಗವಾಗಿ ಬೇವಿನಹಳ್ಳಿ ಗ್ರಾಮದ ಪ್ರವೇಶದ್ವಾರದವರೆಗೆ (೫ ಕಿ.ಮೀ.) ಮಂಡ್ಯ ಮ್ಯಾರಥಾನ್ ಓಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಮಟ್ಟದ ‘ಮಂಡ್ಯ ಮ್ಯಾರಥಾನ್’ ಓಟ ಸ್ಪರ್ಧೆಯನ್ನು ನಡೆಸಿ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯದ ಅರಿವು ಮೂಡಿಸುವ ಉತ್ತಮ ಕಾರ್ಯವನ್ನು ನಮ್ಮ ಸಂಸ್ಥೆ ನಡೆಸಿಕೊಂಡು ಬರುತ್ತಿದೆ.
ಪೊಲೀಸ್ ಇಲಾಖೆ ಸಿಬ್ಬಂದಿಗಳು, ಕ್ರೀಡಾಪಟುಗಳು, ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಸಂಘ ಸಂಸ್ಥೆಗಳ ಸ್ವಯಂ ಸೇವಕರು, ಗ್ರಾಮೀಣ ಪ್ರದೇಶದ ಯುವಕರು ಈ ಓಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪಾಲ್ಗೊಳ್ಳುವ ಎಲ್ಲಾ ಸ್ಪರ್ಧಿಗಳಿಗೂ ಟೀ-ಶರ್ಟ್ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು.
ಪುರಷ, ಮಹಿಳೆ ಹಾಗೂ ಹಿರಿಯ ನಾಗರೀಕರ ವಿಭಾಗವನ್ನು ಓಟ ಸ್ಪರ್ಧೆಯಲ್ಲಿ ಮಾಡಲಾಗಿದ್ದು, ಪ್ರಥಮ ವಿಜೇತರಿಗೆ ೧೦ಸಾವಿರ, ದ್ವಿತೀಯ ೭,೫೦೦, ತೃತೀಯ ೫,೦೦೦/- ರೂ. ನಗದು ಬಹುಮಾನ ನೀಡಲಾಗುವುದು. ಆಸಕ್ತರು ತಮ್ಮ ಹೆಸರನ್ನು ಮೊ. ೯೭೪೦೦೧೧೬೨೪, ೯೯೮೦೬೦೫೪೮೪, ೯೧೪೮೫೭೫೫೨ ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಯಕಯೋಗಿ ಫೌಂಡೇಶನ್ ನಿರ್ದೇಶಕ ಕೆ.ಎಂ.ಬಾಲಚಂದ್ರ, ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ಅಧ್ಯಕ್ಷ ಅನಿಲ್‌ಕುಮಾರ್ ಉಪಸ್ಥಿತರಿದ್ದರು.