ಮಾಧು / ನಂದಿನಿ ಮೈಸೂರು
*ತಿ.ನರಸೀಪುರ.ಡಿ.22* -ಚಿರತೆಯೊಂದು ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಸೆರೆಯಾಗುವ ಮೂಲಕ ಸಾರ್ವಜನಿಕರಲ್ಲಿ ಕೊಂಚ ಮಟ್ಟಿನ ಆತಂಕ ದೂರವಾದರೆ ,ಅರಣ್ಯ ಇಲಾಖೆಯವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬುಧವಾರ ರಾತ್ರಿ 8 ಗಂಟೆ ಸಮಯದಲ್ಲಿ ತಾಲೂಕಿನ ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಕೋಳಿಯನ್ನು ತಿನ್ನಲು ಬಂದ ಚಿರತೆ ಸೆರೆಯಾಗಿದೆ.
ಕಳೆದ 20 ದಿನಗಳಿಂದಲೂ ಗ್ರಾಮದಲ್ಲಿ ಚಿರತೆ ಓಡಾಡುತ್ತಿದೆ ಎಂಬ ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆಯವರು ಮುತ್ತತ್ತಿ ಗ್ರಾಮದ ದಿಲೀಪ್ ಎಂಬುವರ ತೋಟದಲ್ಲಿ ಚಿರತೆ ಸೆರೆಗೆ ಬೋನನ್ನು ಇಟ್ಟಿದ್ದರು.ಬೋನಿನೊಳಗೆ ಮತ್ತೊಂದು ಕಂಪಾರ್ಟ್ ಮೆಂಟಿನಲ್ಲಿ ಕೋಳಿಯನ್ನು ಕಟ್ಟಿ ಚಿರತೆ ಬೇಟೆಗೆ ಬಲೆ ಬೀಸಲಾಗಿತ್ತು.ನಿನ್ನೆ ರಾತ್ರಿ 8 ರ ಸಮಯದಲ್ಲಿ ಕೋಳಿ ತಿನ್ನಲು ಬಂದ ಎರಡೂವರೆ ವರ್ಷದ ಚಿರತೆ ಬೋನಿನೊಳಗೆ ಬಂಧಿಯಾಗಿದೆ.
ಚಿರತೆ ಸೆರೆ ಬಗ್ಗೆ ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ಮಂಜುನಾಥ್ ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಡುತ್ತಿದ್ದ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು.ಹಾಗಾಗಿ ಬೋನು ಇಟ್ಟು ಚಿರತೆ ಸೆರೆಗೆ ಬಲೆ ಬೀಸಲಾಗಿತ್ತು.ಕಳೆದ ಎರಡು ತಿಂಗಳಿಂದಲೂ ಬೋನುಗಳನ್ನು ಅಳವಡಿಸಿ ವೈಜ್ಞಾನಿಕ ತಂತ್ರಜ್ಞಾನದ ಮೂಲಕ ಚಿರತೆ ಸೆರೆಗೆ ಕಾರ್ಯಾಚರಣೆ ರೂಪಿಸಲಾಗಿತ್ತು.ಕೊನೆಗೂ ಒಂದು ಚಿರತೆ ಬೋನಿಗೆ ಬೀಳುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದರು.
ಕಳೆದೆರಡು ತಿಂಗಳಿನಿಂದ ನರಹಂತಕ ಚಿರತೆ ಇಬ್ಬರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತಲ್ಲದೇ ಮತ್ತಿಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು.ಚಿರತೆ ಬಂಧಿಸುವಂತೆ ಸಾರ್ವಜನಿಕ ವಲಯ,ಜನ ಪ್ರತಿನಿಧಿಗಳು ಹಾಗು ಶಾಸಕರಿಂದ ಒತ್ತಡ ಹೆಚ್ಚಿತ್ತು.ಚಿರತೆ ಬಂಧಿಸಲು ವಿಫಲರಾಗಿದ್ದಾರೆಂದು ವಿವಿಧ ಸಂಘ ಸಂಸ್ಥೆಗಳು ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ಸಹ ನಡೆಸಿ ಇಲಾಖೆಯ ನಡೆಯನ್ನು ಖಂಡಿಸಿದ್ದರು.ಈಗ ಒಂದು ಚಿರತೆ ಸೆರೆ ಸಿಕ್ಕುವ ಮೂಲಕ ಅರಣ್ಯ ಇಲಾಖೆ ಹಾಗು ಸಾರ್ವಜನಿಕರು ಸ್ವಲ್ಪ ಮಟ್ಟಿನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸೆರೆ ಸಿಕ್ಕ ಚಿರತೆಯನ್ನು ಕಾಲರ್ ಐಡಿ ಅಳವಡಿಸಿ ಮತ್ತೆ ಅರಣ್ಯಕ್ಕೆ ಬಿಡುವ ಸಾಧ್ಯತೆ ಇದ್ದು ಚಿರತೆ ಚಲನ ವಲನಗಳ ಬಗ್ಗೆ ಮತ್ತಷ್ಟು ಮಾಹಿತಿ ಹಾಗು ಚಿರತೆಗಳಿರುವ ಸಂಖ್ಯೆ ಇದರಿಂದ ಲಭ್ಯವಾಗಲಿದೆ ಎನ್ನಲಾಗಿದೆ.