ನಂದಿನಿ ಮೈಸೂರು
*ತಿ.ನರಸೀಪುರ.ಫೆ.09:* ನಾಳೆಯಿಂದ ಮೂರು ದಿನಗಳ ಕಾಲ ತ್ರಿವೇಣಿ ಸಂಗಮದಲ್ಲಿ ನಡೆಯುವ 13 ನೇ ಕುಂಭಮೇಳಕ್ಕೆ ಜಿಲ್ಲಾಡಳಿತವು ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಹೇಳಿದರು.
ತ್ರಿವೇಣಿ ಸಂಗಮಕ್ಕೆ ಭಾನುವಾರ ಭೇಟಿ ನೀಡಿ ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಿದ ನಂತರ ಪತ್ರಕರ್ತರಿಗೆ ಸಿದ್ದತೆ ಬಗ್ಗೆ ವಿವರ ನೀಡಿ ಅವರು ಮಾತನಾಡಿದರು.
ಕಳೆದ 3 ವರ್ಷದ ಹಿಂದೆ ಕೋವಿಡ್ ಇದ್ದ ಹಿನ್ನೆಲೆಯಲ್ಲಿ ಕುಂಭಮೇಳ ನಡೆದಿರಲಿಲ್ಲ.ಹಾಗಾಗಿ ನಾಳೆಯಿಂದ ನಡೆಯುವ 13 ನೇ ಕುಂಭಮೇಳಕ್ಕೆ ಹೆಚ್ಚಿನ ಭಕ್ತಾಧಿಗಳು ಬರಬಹುದೆಂಬ ನಿರೀಕ್ಷೆ ಹೊಂದಿದ್ದು ಭಕ್ತಾಧಿಗಳ ಆಗಮನಕ್ಕೆ ತಕ್ಕಂತೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.ಹಾಗಾಗಿ ಕುಂಭಮೇಳಕ್ಕೆ ಬರುವ ಭಕ್ತಾಧಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಭಕ್ತಾಧಿಗಳ ಅನುಕೂಲಕ್ಕಾಗಿ ಕುಂಭಮೇಳ ನಡೆವ ತಿರುಮಕೂಡಲು ಕ್ಷೇತ್ರದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಕ್ಯೂ ಸಿಸ್ಟಮ್,ಶೌಚಾಲಯ, ಕುಡಿಯುವ ನೀರು,ಬಟ್ಟೆ ಬದಲಿಸುವ ಕೊಠಡಿ,ಸ್ಯಾನಿಟೈಷೇನ್ ಆಸ್ಪತ್ರೆ ಸೇರಿದಂತೆ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ,ಸರ್ಕಾರದ ವತಿಯಿಂದ ಊಟದ ವ್ಯವಸ್ಥೆ ಮಾಡಿಲ್ಲವಾದರೂ ವಿವಿಧ ಮಠಗಳು,ವಿವಿಧ ಸಂಘಟನೆಯವರು ಪ್ರಸಾದ ವ್ಯವಸ್ಥೆ ಕಲ್ಪಿಸಿಕೊಡಲಿದ್ದಾರೆ ಎಂದು ತಿಳಿಸಿದರು.
ನಾಗಾ ಸಾಧುಗಳು,ಅಘೋರಿಗಳು ಬರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ.ಒಂದು ವೇಳೆ ಬಂದರೆ ಅವರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ ಎಂದರು.ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ಮೇಳಕ್ಕೆ ಬರುವುದರಿಂದ ವಾಹನಗಳ ಪಾರ್ಕಿಂಗ್ ಗೆ ಸೂಕ್ತವಾದ ವಿಶಾಲವಾದ ಜಾಗ ಗುರುತಿಸಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
*ಉಚಿತ ಬಸ್ ವ್ಯವಸ್ಥೆ ಶಾಲಾ-ಕಾಲೇಜಿಗೆ ರಜೆ….!*
ಕುಂಭಮೇಳಕ್ಕೆ ಬರುವ ಭಕ್ತಾಧಿಗಳಿಗೆ ಕೆಎಸ್ ಆರ್ಟಿ ಸಿ ಸಂಸ್ಥೆಯು ವಿವಿಧ ಜಿಲ್ಲೆಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ.ಟಿ.ನರಸೀಪುರ ಪಟ್ಟಣದಲ್ಲಿ ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನಕ್ಕೆ ಓಡಾಡಲು ಸಾರ್ವಜನಿಕರಿಗೆ ತೊಂದರೆಯನ್ನು ಗಮನಿಸಿ ಜಿಲ್ಲಾಡಳಿತದ ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.ಕುಂಭಮೇಳ ನಡೆಯುವ ಆಸು ಪಾಸು ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಇಂದಿನಿಂದ ಹೆಚ್ಚುವರಿಯಾಗಿ ಹೊರಗುತ್ತಿಗೆ ಮೇಲೆ 180 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು,ಇಂದು ಸಂಜೆ ಒಳಗೆ ಸಂಪೂರ್ಣವಾಗಿ ಕ್ಷೇತ್ರ ಸ್ವಚ್ಚತೆಯಾಗಿ ನಾಳೆ ಕುಂಭಮೇಳಕ್ಕೆ ಅಣಿಯಾಗಲಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಕುಂಭ ಮೇಳದ ಅಂತಿಮ ದಿನವಾದ 12 ರ ಬುಧವಾರ ಸಾರ್ವಜನಿಕ ಒತ್ತಾಯದ ಮೇರೆಗೆ ಪುಣ್ಯ ಸ್ನಾನದಲ್ಲಿ ಪಾಲ್ಗೊಳ್ಳಲು ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಟಿ.ನರಸೀಪುರ ಪಟ್ಟಣ ವ್ಯಾಪ್ತಿಯ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
*ಮದ್ಯ ಮಾರಾಟ ನಿಷೇಧ….!*
ಕುಂಭಮೇಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಫೆ.9 ರ ಮದ್ಯರಾತ್ರಿ 12 ಘಂಟೆಯಿಂದ ಫೆ.13 ರ ಬೆಳಿಗ್ಗೆ 6 ಘಂಟೆವರೆಗೆ ಟಿ.ನರಸೀಪುರ ಪುರಸಭೆ ವ್ಯಾಪ್ತಿಗೊಳಪಡುವ ಎಲ್ಲ ಮದ್ಯದಂಗಡಿ ಹಾಗು ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಆದೇಶ ನೀಡಿದ್ದಾರೆ.
ಇದಕ್ಕೂ ಮೊದಲು ಜಿಲ್ಲಾಧಿಕಾರಿಗಳು ಪುಣ್ಯ ಸ್ನಾನ ಮಾಡುವ ಸಂಗಮ ಕ್ಷೇತ್ರ ಪರಿಶೀಲಿಸಿದರು.ಈ ವೇಳೆ ಮಹಿಳೆಯರ ಬಟ್ಟೆ ಬದಲಿಸುವ ಕೊಠಡಿಗೆ ವಿದ್ಯುತ್ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಭಕ್ತಾಧಿಗಳು ಹಾಗು ವಿಐಪಿಗಳು ಪುಣ್ಯ ಕ್ಷೇತ್ರಕ್ಕೆ ಸ್ನಾನ ಮಾಡಲು ಸರತಿ ಸಾಲಿನಲ್ಲಿ ಸಾಗಲಿರುವ ಬ್ಯಾರಿಕೇಡ್ ವ್ಯವಸ್ಥೆ ಪರಿಶೀಲಿಸಿದ ಅವರು ಸಾರ್ವಜನಿಕರಿಗೆ ವಿಶಾಲವಾದ ಜಾಗ ಮಾಡಿ ಸುಗಮವಾಗಿ ತೆರಳಲು ಅವಕಾಶ ಮಾಡಿಕೊಡಿ,ಬೇಕಿದ್ದಲ್ಲಿ ವಿಐಪಿ ಗಳಿಗೆ ಓಡಾಡಲು ಮಾಡಿಕೊಟ್ಟಿರುವ ಸ್ಥಲಾವಕಾಶವನ್ನು ಸ್ವಲ್ಪ ಕಿರಿದು ಮಾಡಿ ಎಂದರಲ್ಲದೇ ಬ್ಯಾರಿ ಕೇಡ್ ಗಳನ್ನು ಚೌಡಯ್ಯ ವೃತ್ತದ ವರೆಗೂ ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದರು.
*ಸೋಮವಾರದ ಕಾರ್ಯಕ್ರಮ…!*
ಸೋಮವಾರ ಬೆಳಿಗ್ಗೆ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ ದೊರಕಲಿದ್ದು ಅಗಸ್ತ್ಯೇಶ್ವರ ಸ್ವಾಮಿ ಸನ್ನಿದಿಯಲ್ಲಿ ಅನುಜ್ಙಾ ಕಾರ್ಯಕ್ರಮ ಅಂಕುರಾರ್ಪಣೆ ಮತ್ತು ದ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘನ ಉಪಸ್ಥಿತಿಯಲ್ಲಿ ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಸಚಿವ ಕೆ.ವೆಂಕಟೇಶ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ,ವಿರೋಧ ಪಕ್ಷದ ನಾಯಕ ಆರ್.ಅಶೋಕ್,ಲೋಕಸಭಾ ಸದಸ್ಯ ಸುನೀಲ್ ಬೋಸ್,ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷರು,ಮಾನ್ಯ ಶಾಸಕರಾದ ಸಿ.ಅನಿಲ್ ಕುಮಾರ್,ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ, ಶಾಸಕ ಸಿ. ಪುಟ್ಟರಂಗಶೆಟ್ಟಿ,ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ,ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.