ಕೊಡಗು ವಿವಿ ಮುಚ್ಚಲು ವಿರೋಧ* *ಮಡಿಕೇರಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ನಂದಿನಿ ಮೈಸೂರು

*ಕೊಡಗು ವಿವಿ ಮುಚ್ಚಲು ವಿರೋಧ*

*ಮಡಿಕೇರಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ*

ಕಳೆದ ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ಸ್ಥಾಪನೆಗೊಂಡಿದ್ದ ನೂತನ 10 ವಿಶ್ವವಿದ್ಯಾನಿಲಗಳ ಪೈಕಿ 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ರಾಜ್ಯ ಸಚಿವ ಸಂಪುಟದ ಉಪಸಮಿತಿ ತೀರ್ಮಾನಿಸಿದ್ದು, ಮುಚ್ಚುವ ಭೀತಿಯಲ್ಲಿ ಕೊಡಗು ವಿಶ್ವವಿದ್ಯಾಲಯವು ಕೂಡ ಸೇರಿರುವುದರಿಂದ ರಾಜ್ಯ ಸರಕಾರದ ನಿರ್ಧಾರಕ್ಕೆ ಜಿಲ್ಲೆಯಲ್ಲಿ ವ್ಯಾಪಕ ವಿರೋಧವಾಗಿದೆ. ಈ ಹಿನ್ನೆಲೆಯಲ್ಲಿ ಎ.ಬಿ.ವಿಪಿ. ಸಂಘಟನೆಯ ಕಾರ್ಯಕರ್ತರು ಹಾಗೂ ಮಡಿಕೇರಿ ಸರಕಾರಿ ಪದವಿ ಕಾಲೇಜು ಎಂ ಮಹಿಳಾ ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾವಣೆಗೊಂಡು ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಈ ಸಂದರ್ಭ ಮಾತನಾಡಿದ ಎ.ಬಿ.ವಿ.ಪಿ. ಸಂಘಟನೆಯ ಪ್ರಮುಖರು, ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಸರಕಾರವು ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಬಲಿಷ್ಠಗೊಳಿಸುವ ಕಾಳಜಿ ವಹಿಸದೇ ಮತ್ತು ಇಚ್ಛಾಶಕ್ತಿಯನ್ನು ತೋರದೇ ಕೊಡಗು ಮತ್ತು ಇತರೆ ಹಿಂದುಳಿದ ಜಿಲ್ಲೆಗಳಲ್ಲಿರುವ ಹೊಸ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸುವುದಾಗಿ ಹೇಳಿದರು. ರಾಜ್ಯ ಸರಕಾರದ ಈ ನಿರ್ಧಾರದಿಂದ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು ತನ್ನ ನಿರ್ಧಾರವನ್ನು ಹಿಂಪಡೆಯಬೆಕು ಎಂದು ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿಗಳ ಕಛೇರಿಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

Leave a Reply

Your email address will not be published. Required fields are marked *