ನಂದಿನಿ ಮೈಸೂರು
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಒಂದೆಡೆ ಸರ್ಕಾರದ ಹಲವು ಕಾರ್ಯಕ್ರಮ ನಡೆದರೆ, ಮೈಸೂರು ಅರಮನೆಯಲ್ಲಿ ರಾಜರ ಕಾಲದ ಗತವೈಭವ ಮರುಕಳಿಸುವ ವೈಭವೋಪೇತ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮ ನೆರವೇರಲಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದದ ಮತ್ತೊಂದು ಪ್ರಮುಖ ಆಕರ್ಷಣೆಯಾದ ಮೈಸೂರು ರಾಜವಂಶಸ್ಥ ಯದುವೀರ್ ಅವರ ಖಾಸಗಿ ದರ್ಬಾರ್ ನಾಳೆಯಿಂದ ಆರಂಭಗೊಳ್ಳಲಿದೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಅರಮನೆಯಲ್ಲಿ ನಡೆಯುವ ರಾಜವಂಶಸ್ಥರ ಸಾಂಪ್ರದಾಯಿಕ ಖಾಸಗಿ ದರ್ಬಾರ್ ಕಣ್ಮನ ಸೆಳೆಯಲಿದೆ.
ನಾಳೆ ಮುಂಜಾನೆಯಿಂದಲೆ ಮೈಸೂರು ಅರಮನೆಯಲ್ಲಿ ಹಲವು ಪೂಜಾ ಕಾರ್ಯ ಆರಂಭಗೊಳ್ಳಲಿದೆ. ಬೆಳಿಗ್ಗೆ ಕಂಕಣಧಾರಣೆಗೊಳ್ಳುವ ಯದುವೀರ್ ಅವರು ಹಲವು ರೀತಿಯ ಹೋಮ ಹವನ ನೆರವೇರಿಸುವರು. ತರುವಾಯ ತ್ರಿಷಿಕಾ ಕುಮಾರಿ ಅವರು ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧರಿಸಿ ಪತಿ ಯದುವೀರ್ ಜೊತೆ ಪೂಜಾ ಕಾರ್ಯದಲ್ಲು ಭಾಗಿಯಾಗುವರು. ನಂತರ ಪತಿಗೆ ಪಾದಪೂಜೆ ಮಾಡುವರು. ಇದೆಲ್ಲಾ ಆದ ನಂತರ ರಾಜ ಪೋಷಾಕಿನಲ್ಲಿ ಮಿರಮಿರನೆ ಮಿಂಚುವ ಯದುವೀರ್ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ದರ್ಬಾರ್ ಹಾಲ್ ಗೆ ಆಗಮಿಸುವರು.
ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮನವಾಗಲಿದೆ. ಚಾಮರಾಜನಗರ, ಮೈಸೂರು ಸೇರಿದಂತೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ, ಮಲೈ ಮಹದೇಶ್ವರ ದೇವಸ್ಥಾನ, ಚಾಮುಂಡಿ ಬೆಟ್ಟದ ದೇವಸ್ಥಾನ ಸೇರಿದಂತೆ ಪ್ರಮುಖ ಏಳು ದೇವಾಲಯಗಳಿಂದ ಪುರೋಹಿತರು ತರುವ ತೀರ್ಥ ಪ್ರಸಾದವನ್ನು ಯದುವೀರ್ ಗೆ ನೀಡುವರು. ತರುವಾಯ ದೇಶದ ಸಪ್ತ ನದಿಗಳ ತೀರ್ಥ ಸ್ವೀಕರಿಸಿ ಸಿಂಹಾಸನಕ್ಕೆ ಪ್ರೋಕ್ಷಣೆ ಮಾಡರು. ನಾಳೆ ಬೆಳಿಗ್ಗೆ 9 ಗಂಟೆ 45 ನಿಮಿಷದಿಂದ 10.05 ಗಂಟೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಕಲಶ ಪೂಜೆ ನೆರವೇರಿಸಿದ ಬಳಿಕ ಯದುವೀರ್ ಸಿಂಹಾಸನಾರೋಹಣ ಮಾಡುವರು. ಸಿಂಹಾಸನವೇರುತ್ತಿದ್ದಂತೆ ವಂದಿಮಾಗದರು ಜೈಕಾರದ ಘೋಷಣೆ ಮೊಳಗಿಸುವರು. ಹಿಂಬಾಲಕರು, ಹೊಗಳು ಭಟ್ಟರು ಸೇರಿದಂತೆ ವಂದಿ ಮಾಗದರ ಕುಶಲ ವಿಚಾರಿಸುವ ಯದುವೀರ್ ಅವರಿಗೆ ಭಕ್ಷಿಸ್ ನೀಡುವರು.
ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿ ನೆಲೆಸಲಿ ಎಂದು ಆ ತಾಯಿ ಚಾಮುಂಡೇಶ್ವರಿಗೆ ಯದುವೀರ್ ಪ್ರಾರ್ಥನೆ ಸಲ್ಲಿಸುವರು. ನವರಾತ್ರಿ ಕೊನೆಗೊಳ್ಳುವ ದಿನದ ತನಕ ಪ್ರತಿದಿನ ಯದುವೀರ್ ಖಾಸಗಿ ದರ್ಬಾರ್ ನಡೆಸುವರು.