ಪ್ರತಿಯೊಬ್ಬರು ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಿ ಮಾಜಿ ಶಾಸಕ ಬಿ ಹರ್ಷವರ್ಧನ್

ನಂದಿನಿ ಮನುಪ್ರಸಾದ್ ನಾಯಕ್

ಪ್ರತಿಯೊಬ್ಬರು ಅಂಬೇಡ್ಕರ್ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಿ ಮಾಜಿ ಶಾಸಕ ಬಿ ಹರ್ಷವರ್ಧನ್

ಮಲ್ಕುಂಡಿ:- ಪ್ರತಿಯೊಬ್ಬರು ಡಾ.ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಬಿ ಹರ್ಷವರ್ಧನ್ ಹೇಳಿದರು.

ನಂಜನಗೂಡು ತಾಲ್ಲೂಕಿನ ಹಳೇಪುರ ಗ್ರಾಮದಲ್ಲಿ ಅಯೋಜಿಸಿದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಅವರು, ಶ್ರೀನಿವಾಸ್ ಪ್ರಸಾದ್, ಧ್ರುವನಾರಾಯಣ್, ಕೆ.ಶಿವರಾಂ ರವರು ಸಮುದಾಯಕ್ಕಾಗಿ ದುಡಿದು ಅಪಾರ ಕೊಡುಗೆ ನೀಡಿದ್ದಾರೆ. ಸಮುದಾಯಕ್ಕೆ ಜನಪ್ರತಿನಿಧಿಗಳು ಕೆಲಸ ಮಾಡಿದಾಗ ಮಾತ್ರ ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಸಮುದಾಯಕ್ಕೆ ದುಡಿಯಬೇಕು. ಅಧಿಕಾರ ಸಿಗುವುದು ಮುಖ್ಯವಲ್ಲ, ಅಧಿಕಾರ ಸಿಕ್ಕಾಗ ಅದನ್ನು ಬಳಸಿಕೊಂಡು ಜನಾಂಗಕ್ಕೆ ಕೆಲಸ ಮಾಡಿದಾಗ ಅಧಿಕಾರಕ್ಕೆ ಒಂದು ಘನತೆ ಬರುತ್ತದೆ. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು. ಪ್ರತಿ ದಿನ ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡಿಕೊಳ್ಳಬೇಕು.
ಮಹಿಳೆಯರಿಗೆ ಮೀಸಲಾತಿ ನೀಡುವುದರಿಂದ ರಾಜಕೀಯವಾಗಿ ಸ್ಥಾನಮಾನ ದೊರೆಯುತ್ತದೆ. ಶೇ.33 ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಮಾತನಾಡಿ, ಯುವಕರು ವಿದ್ಯಾವಂತರಾದಾಗ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಆಚರಣೆ ಮಾಡಿದರೆ ಅವರ ವಿಚಾರಗಳನ್ನು ತಿಳಿದುಕೊಳ್ಳಬಹುದು. ಆರ್ಥಿಕವಾಗಿ ಶೈಕ್ಷಣಿಕವಾಗಿ ಮಹಿಳೆಯರು ಮುಂದೆ ಬಂದಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ಕಾರಣ. ಪ್ರತಿಯೊಬ್ಬರು ಅವರನ್ನು ಸ್ಮರಣೆ ಮಾಡಿಕೊಳ್ಳಬೇಕು. ಈ ದೇಶಕ್ಕೆ ಅಂಬೇಡ್ಕರ್ ರವರು ಆಸ್ತಿ, ಅವರೇ ನಮಗೆ ಸ್ಪೂರ್ತಿಯಾಗಿದ್ದಾರೆ. ಯಾರು ಕೂಡ ನಮ್ಮಗಳ ಇತಿಹಾಸವನ್ನು ಮರೆಯಬಾರದು. ಮನುಷ್ಯ ಮನುಷ್ಯನಾಗಿ ಬಾಳಬೇಕು. ಅಂಬೇಡ್ಕರ್ ಅವರು ನೀಡಿದ ಮತದಾನದ ಹಕ್ಕನ್ನು ಮಾರಿಕೊಳ್ಳಬೇಡಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಹಳೇಪುರ ಗ್ರಾಮದಲ್ಲಿ
ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 20 ಲಕ್ಷ ಅನುದಾನ ಬಿಡುಗಡೆಯಾಗಿದೆ. ಭವನ ನಿರ್ಮಾಣಕ್ಕೆ ಮುಂದಾಗುತ್ತೇವೆ.
ರಸ್ತೆ ದುರಸ್ತಿ, ಅಂಗನವಾಡಿ , ಶಾಲಾ ಕಟ್ಟಡಗಳ ದುರಸ್ತಿ ಪಡಿಸಲಾಗುವುದು.
ಅಂಬೇಡ್ಕರ್ ಭವನದಲ್ಲಿಯೇ ಗ್ರಂಥಾಲಯ ಮಾಡಲು ಕ್ರಮ ಕೈಗೊಳ್ಳುತ್ತೇವೆ. ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ಸಿಲ್ಲದೆ ತೊಂದರೆ ಆಗಿದೆ ಎಂದು ತಿಳಿದು ಬಂದಿದೆ. ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಗ್ರಾಮಕ್ಕೆ ಸಮರ್ಪಕವಾಗಿ ಸಾರಿಗೆ ಬಸ್ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
ಇದರಿಂದ ಗ್ರಾಮೀಣ ಭಾಗದ ಜನರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿದೆ.
ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡಲು ಮೀಸಲಾತಿ ಜಾರಿಗೆ ಬರುತ್ತದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬಂದಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ ಹಾಗಾಗಿ ಪ್ರತಿಯೊಬ್ಬ ಮಹಿಳೆಯರು ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳಬೇಕು. ಅವರ ಚಿಂತನೆಗಳು ಮಾರ್ಗದರ್ಶನ ನಮಗೆ ಅಗತ್ಯವಾಗಿದೆ ಎಂದು ತಿಳಿಸಿದರು.

ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಪತ್ರಕರ್ತ ಸಿ.ಎಂ ಸುಗಂಧರಾಜು, ಬಿಜೆಪಿ ಮುಖಂಡ ಹೆಚ್.ಆರ್ ರಂಗನಾಥ್, ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್ ರಾಜಶೇಖರಮೂರ್ತಿ, ನೇರಳೆ ಗ್ರಾ.ಪಂ ಅಧ್ಯಕ್ಷ ಬಿ.ಆರ್ ಗಿರೀಶ್, ಗ್ರಾಪಂ ಸದಸ್ಯರಾದ ಪುಷ್ಪ ನಿರಂಜನ್, ಪ್ರಕಾಶ್, ರೇಖಾ ವಸಂತ, ಗುರುಸ್ವಾಮಿ, ಚಿಕ್ಕತಾಯಮ್ಮ, ಅಂಬೇಡ್ಕರ್ ಯುವಕ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಚ್. ಎಂ ಮಹೇಶ್, ಕಾರ್ಯದರ್ಶಿ ಹೆಚ್.ಬಿ ಮಹದೇವಸ್ವಾಮಿ, ಮುಖಂಡರಾದ ಮಹದೇವಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *