ಅ.6 ಮತ್ತು 7ರಂದು ಬನ್ನಿಮಂಟಪದ‌ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಶೋ ವೀಕ್ಷಣೆಗೆ ಜನರಿಗೆ ಮುಕ್ತ ಅವಕಾಶ

ನಂದಿನಿ ಮೈಸೂರು

 

– *ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಪ್ರದರ್ಶನ*

*ಮೈಸೂರು, ಅ.5, 2024:* ದಸರಾ ದೀಪಾಲಂಕಾರಕ್ಕೆ ಮತ್ತೊಂದು ಮೆರಗು ಡ್ರೋನ್‌ ಪ್ರದರ್ಶನ. ಅಕ್ಟೋಬರ್ 6, 7 ಮತ್ತು 11, 12ರಂದು  ಆಯೋಜಿಸಲಾಗಿರುವ ಡ್ರೋನ್‌ ಶೋ ವಿಶೇಷ ಅನುಭವ ನೀಡಲಿದ್ದು, ಅ.6 ಮತ್ತು 7ರಂದು ಉಚಿತವಾಗಿ ಡ್ರೋನ್ ಶೋ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಸೆಸ್ಕ್‌ ತಾಂತ್ರಿಕ ವಿಭಾಗದ ನಿರ್ದೇಶಕ ಮುನಿ ಗೋಪಾಲರಾಜು ಮಾಹಿತಿ ನೀಡಿದ್ದಾರೆ.

ನಗರದ ಸೆಸ್ಕ್‌ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯಂತೆ ಈ ಬಾರಿಯ ದಸರಾ ದೀಪಾಲಂಕಾರವನ್ನು ಆಕರ್ಷವಾಗಿ ಮಾಡಲಾಗಿದೆ. ಸ್ಥಳೀಯ ವೃತ್ತಿಪರರಿಂದ ಹೆಚ್ಚು ವಿನ್ಯಾಸ ಹಾಗೂ ಆಕರ್ಷಕ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಪ್ರತಿಯೊಂದು ರಸ್ತೆ ಹಾಗೂ ವೃತ್ತಗಳಲ್ಲಿ ಹೆಚ್ಚು ಮುತುವರ್ಜಿಯಿಂದ ದೀಪಾಲಂಕಾರ ಮಾಡಲಾಗಿದೆ. ದೀಪಾಲಂಕಾರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ,” ಎಂದರು. 

“ಈ ಬಾರಿ ದಸರಾ ಡ್ರೋನ್ ಶೋ‌ ವಿಶೇಷ ಅನುಭವ ನೀಡಲಿದೆ. ಬನ್ನಿಮಂಟಪದ‌ ಪಂಜಿನ ಕವಾಯತು ಮೈದಾನದಲ್ಲಿ ಅ.6 ಮತ್ತು 7ರಂದು ನಡೆಯಲಿರುವ ಡ್ರೋನ್‌ ಶೋ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿರಲಿದೆ. ಅ.11 ಹಾಗೂ 12ರಂದು ನಡೆಯುವ ಡ್ರೋನ್‌ ಶೋ ವೀಕ್ಷಣೆಗೆ ಪಾಸ್ ವ್ಯವಸ್ಥೆ ಇರಲಿದೆ. ಮೊದಲ ಬಾರಿಗೆ ಈ ಮಟ್ಟದಲ್ಲಿ ಮಾಡಲಾಗಿರುವ ಡ್ರೋನ್‌ ಶೋನಲ್ಲಿ 1500 ಸಾವಿರ ಡ್ರೋನ್‌ ಆಗಸದಲ್ಲಿ ಬೆಳಕಿನ‌ ಚಿತ್ತಾರ ಮೂಡಿಸಲಿದೆ,” ಎಂದು ಅವರು ತಿಳಿಸಿದರು. 

*ವಿದ್ಯುತ್ ರಥ*
ದೀಪಾಲಂಕಾರದ ಜತೆಗೆ ಮೊದಲ ಬಾರಿಗೆ ಸೆಸ್ಕ್‌ ವತಿಯಿಂದ ವಿದ್ಯುತ್‌ ರಥವನ್ನು ನಿರ್ಮಿಸಲಾಗಿದ್ದು, ಈ ರಥ ನಗರದ ಹಲವು ಕಡೆಗಳಲ್ಲಿ ಸಂಚರಿಸಲಿದೆ. ಇದರಲ್ಲಿ ವಿದ್ಯುತ್ ಸುರಕ್ಷತೆ, ಸೋಲಾರ್ ಬಳಕೆ ಹಾಗೂ ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ.

ಇದಕ್ಕೂ ಮುನ್ನ ಮಾತನಾಡಿದ ದಸರಾ ದೀಪಾಲಂಕಾರ ಉಪ ಸಮಿತಿ(ಅಧಿಕಾರೇತರ) ಅಧ್ಯಕ್ಷ ಸೈಯ್ಯದ್ ಇಕ್ಬಾಲ್, “ಉಪ ಸಮಿತಿಯ ಸದಸ್ಯರ ಹೆಸರುಗಳು ಪ್ರಕಟವಾಗುತ್ತಿದ್ದಂತೆ ಎಲ್ಲರೂ ತಕ್ಷಣ ಕಾರ್ಯಪ್ರವೃತ್ತರಾಗಿದ್ದೇವೆ. ಸೆಸ್ಕ್‌ ವತಿಯಿಂದ ಈ ಬಾರಿಯ ದಸರೆಯಲ್ಲಿ ಉತ್ತಮ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ,” ಎಂದರು.

ಸುದ್ದಿಗೋಷ್ಠಿಯಲ್ಲಿ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ, ಅಧೀಕ್ಷಕ ಇಂಜಿನಿಯರ್‌ ಸುನೀಲ್‌ ಸೇರಿದಂತೆ ಸೆಸ್ಕ್‌ ಅಧಿಕಾರಿಗಳು, ಉಪ ಸಮಿತಿ ಸದಸ್ಯರಿದ್ದರು. 
=================== 
*ಬಾಕ್ಸ್‌*

*ವಿದ್ಯುತ್‌ ದೀಪಗಳನ್ನು ಮುಟ್ಟದಿರಿ*

ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಳೆಯಾಗುತ್ತಿದೆ. ಇದರಿಂದಾಗಿ ಕೆಲವೊಮ್ಮೆ ವಿದ್ಯುತ್‌ ಸೋರಿಕೆ ಉಂಟಾಗುವ ಸಾಧ್ಯತೆ ಇರಲಿದೆ. ಆದ್ದರಿಂದ ಸಾರ್ವಜನಿಕರು ದೀಪಾಲಂಕಾರ ವೀಕ್ಷಿಸುವ ವೇಳೆ ಹಾಗೂ ಫೋಟೋಗಳನ್ನು ತೆಗೆಸಿಕೊಳ್ಳುವ ಸಂದರ್ಭದಲ್ಲಿ ವಿದ್ಯುತ್‌ ದೀಪಗಳನ್ನು ಮುಟ್ಟದಂತೆ ಎಚ್ಚರವಹಿಸಬೇಕೆಂದು ಸೆಸ್ಕ್‌ ತಾಂತ್ರಿಕ ವಿಭಾಗದ ನಿರ್ದೇಶಕ ಮುನಿ ಗೋಪಾಲರಾಜು ಮನವಿ ಮಾಡಿದ್ದಾರೆ 
=====================

Leave a Reply

Your email address will not be published. Required fields are marked *