ನಂದಿನಿ ಮನುಪ್ರಸಾದ್ ನಾಯಕ್
ಕಾಡಂಚಿನ ಗ್ರಾಮಗಳಿಗೆ ರೈತ ಕಲ್ಯಾಣ
ತಡರಾತ್ರಿ ಭೇಟಿಗ್ರಾಮಸ್ಥರ ಸಮಸ್ಯೆ ಆಲಿಕೆ: ರಾಜ್ಯದಲ್ಲಿ ರೈತರ ಜೀವಕ್ಕೆ ಬೆಲೆ ಇಲ್ಲವೇ-ಪ್ರಶ್ನೆ.
ಮೈಸೂರು: ಇತ್ತೀಚೆಗಷ್ಟೇ ವ್ಯಾಘ್ರನ ದಾಳಿಗೆ ರೈತರೋರ್ವರು ಗಂಭೀರವಾಗಿ ಗಾಯಗೊಂಡಿರುವ ಮತ್ತು ಜಮೀನಿನಲ್ಲಿದ್ದ ಅನ್ನದಾತರೊಬ್ಬರು ಬಲಿಯಾದ ಹಿನ್ನೆಲೆಯಲ್ಲಿ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಅವರು ಖುದ್ದು ಕಾಡಂಚಿನ ಗ್ರಾಮಗಳಿಗೆ ತಡರಾತ್ರಿ ಭೇಟಿ ಕೊಟ್ಟು ಗ್ರಾಮಸ್ಥರ ಸಮಸ್ಯೆ,ಅಹವಾಲು ಆಲಿಸಿದರು.

ಮಂಗಳವಾರ ರಾತ್ರಿ ಸರಗೂರು ತಾಲೂಕಿನ ನುಗು ಅರಣ್ಯ ಪ್ರದೇಶ ವ್ಯಾಪ್ತಿಯ( ಬಂಡೀಪುರ ಹೆಬ್ಬಾಗಿಲು) ಕಾಡಂಚಿನ ಗ್ರಾಮಗಳಾದ ಹಳೆ ಹೆಗ್ಗುಡಿಲು ಮತ್ತು ಹಳಿಯೂರು ಗ್ರಾಮಕ್ಕೆ ಭೇಟಿ ನೀಡಿದ ಚಂದನ್ ಗೌಡ ಅವರು, ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡರಲ್ಲದೇ, ರೈತರ ನೋವು- ದುಮ್ಮಾನಗಳನ್ನು ಆಲಿಸಿ ಭಾವುಕರಾದರು.
ಈ ವೇಳೆ ರೈತರು ತಮ್ಮ ಸಂಕಷ್ಟಗಳನ್ನು ಎಳೆ- ಎಳೆಯಾಗಿ ವಿವರಿಸಿದರಲ್ಲದೇ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯವರ ಜಗಳಕ್ಕೆ ನಾವು ಹಾಗೂ ನಮ್ಮ ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿವೆ ಎಂದು ಕಣ್ಣೀರಿಟ್ಟರು.
ವನ್ಯ ಜೀವಿಗಳ ಹಾವಳಿ ಮತ್ತು ಮಳೆಯಿಂದಾಗಿ ವರ್ಷಪೂರ ಕಷ್ಟಪಟ್ಟು ಬೆಳೆದ ಬೆಳೆಗಳು ಕ್ಷಣಮಾತ್ರದಲ್ಲಿ ನಾಶವಾಗುತ್ತಿವೆ.ಸಾಲ- ಸೋಲ ಮಾಡಿ ಬೆಳೆ ಬೆಳೆಯುತ್ತೇವೆ.ಆದರೆ ಈ ರೀತಿಯ ದಾಳಿಯಿಂದಾಗಿ ನಷ್ಟ ಅನುಭವಿಸಿ, ಸಾಲ ತೀರಿಸಲಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗೋಳಿಟ್ಟ ರೈತರು,ಬೆಳೆ ನಷ್ಟದ ಪರಿಹಾರ ಪಡೆಯಲೂ ಸಹ ತಿಂಗಳುಗಟ್ಟಲೇ ಸರ್ಕಾರಿ ಕಚೇರಿಗೆ ಅಲೆಯಬೇಕಾದ ಸ್ಥಿತಿ ಬಂದಿದೆ ಎಂದು ದೂರಿದರು.
ಯಾವ ಶಾಸಕರಾಗಲೀ,ಸಂಸದರಾಗಲಿ, ಅಧಿಕಾರಿಗಳಾಗಲಿ ನಮ್ಮ ಸಮಸ್ಯೆಗೆ ಸ್ಪಂದಿಸುವುದಿಲ್ಲ.ನೆಪಮಾತ್ರಕ್ಕೆ ಸ್ಥಳಕ್ಕಾಗಮಿಸಿ ಸಾಂತ್ವನ ಹೇಳುತ್ತಾರಷ್ಟೇ.ಯಾವ ಸರ್ಕಾರಗಳೂ ಕೂಡ ಇದುವೆವಿಗೂ ಅನ್ನದಾತರ ಸಮಸ್ಯೆಗಳಿಗೆ ಪರಿಹಾರ ಕಲ್ಲಿಸುವಲ್ಲಿ ವಿಫಲವಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದನ್ ಗೌಡ ಅವರು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸ ತುಂಬಿದರಲ್ಲದೇ, ಯಾವುದೇ ಸಮಯದಲ್ಲೂ ಎಂತಹದ್ದೆ ಸಮಸ್ಯೆ ಇದ್ದರೂ ನನ್ನನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಅಧಿಕಾರಿಗಳ ನಿರ್ಲ್ಯಕ್ಷ್ಯಕ್ಕೆ ಅನ್ನದಾತರು ಹಾಗೂ ಅವರಿಗೆ ಜೀವನಾಡಿಯಾಗಿರುವ ಜಾನುವಾರುಗಳು ಬಲಿಪಶುಗಳಾಗುತ್ತಿದ್ದಾರೆ.

ಹೊರಗಿನವರಿಗಿಂತ ನಮ್ಮವರಿಂದಲ್ಲೇ ದೌರ್ಜನ್ಯ,ಅನಾನುಕೂಲತೆಗಳು ರೈತರ ಮೇಲೆ ನಡೆಯುತ್ತಿದೆ.ಇದು ನಿಜಕ್ಕೂ ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರಲ್ಲದೇ, ಸರಗೂರು ನೂತನ ತಾಲೂಕಾಗಿ ಘೋಷಣೆಯಾದರೂ ಅಭಿವೃದ್ದಿಯಲ್ಲಿ ಹಿಂದುಳಿದಿದ್ದು, ಕೂಡಲೇ ಸರ್ಕಾರ ರಾಜ್ಯದ ರೈತರ ಹಿತ ಕಾಯುವಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು.ಮತ್ತೆ,ಮತ್ತೆ ಈ ರೀತಿಯ ಅಸಡ್ಡೆ ತೋರದೇ ಅನ್ಮದಾತರಿಗೆ ನೆಮ್ಮದಿಯ ಜೀವನ ಕಲ್ಪಿಸಬೇಕು.ನೂತನ ತಂತ್ರಜ್ಞಾನ ಬಳಸಿ, ನುರಿತ ಸಮಿತಿ ರಚಿಸಿ ಮಾನವ- ಪ್ರಾಣಿ ಸಂಘರ್ಷ ತಡೆಯುವಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸ್ವಾತಂತ್ರ್ಯದ ನಂತರ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ರೈತರ ಆತ್ಮಹತ್ಯೆ ಘಟನೆಗಳ ಬಗ್ಗೆ ಸಿಬಿಐ ತನಿಖೆಗೆ ಮಾತರ ಯಾವುದೇ ಕಡೆಯಿಂದ ಬೇಡಿಕೆ ಬಂದಿಲ್ಲ. ಬರೋದು ಇಲ್ಲ..ಏಕೆಂದರೆ ಆತನೋರ್ವ ಸಾಮಾನ್ಯ ರೈತ ಎಂಬ ಅಸಡ್ಡೆಯಷ್ಟೇ ಈ ಸರ್ಕಾರಗಳಿಗೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ನಡುವೇ ಆದಾಗ್ಯೂ, ಅದೇ ಐಎಎಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದಾಗ, ಪ್ರಕರಣವನ್ನು ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಲಾಗುತ್ತದೆ. ಈ ದೇಶದಲ್ಲಿ ರೈತರ ಜೀವಕ್ಕೆ ಯಾವುದೇ ಬೆಲೆ ಇಲ್ಲವೇ..? ಭವಿಷ್ಯದಲ್ಲಿ, ಸರ್ಕಾರ ಮತ್ತು ಅರಣ್ಯ ಇಲಾಖೆ ಅನುಸರಿಸುತ್ತಿರುವ ರೈತ ವಿರೋಧಿ ನೀತಿಗಳಿಂದಾಗಿ ಇನ್ನೂ ಅನೇಕ ರೈತರು ಕಾಡು ಪ್ರಾಣಿಗಳಿಂದ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳಿಂದ ರೈತರು ಬಲಿಯಾಗುತ್ತಿರುವುದು ನ್ಯಾಯವೇ ಒಂದು ಕಡೆ ಕೃಷಿಯಿಂದ ಸೋತ ರೈತ ಆತ್ಮಹತ್ಯೆ ಇನ್ನೊಂದು ಕಡೆ ಕೃಷಿಯಿಂದ ಬದುಕು ಕಟ್ಟುಕೊಳ್ಳುವ ನಿಟ್ಟಿನಲ್ಲಿ ಕಾಡು ಪ್ರಾಣಿಗಳಿಂದ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ ಇದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನ ಸರ್ಕಾರಕ್ಕೆ ಕೇಳ ಬಯಸುತ್ತೇನೆ ಎಂದರು.ಈ ವೇಳೆ ಸ್ಥಳದಲ್ಲಿ ನೂರಾರು ರೈತರು, ರೈತ ಕಲ್ಯಾಣ ಸಂಘದ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.
—————————–
ಅಧಿಕಾರಿಗಳ ನಿರ್ಲ್ಯಕ್ಷ್ಯಕ್ಕೆ ಅನ್ನದಾತರು ಹಾಗೂ ಅವರಿಗೆ ಜೀವನಾಡಿಯಾಗಿರುವ ಜಾನುವಾರುಗಳು ಬಲಿಪಶುಗಳಾಗುತ್ತಿದ್ದಾರೆ.
ಹೊರಗಿನವರಿಗಿಂತ ನಮ್ಮವರಿಂದಲ್ಲೇ ದೌರ್ಜನ್ಯ,ಅನಾನುಕೂಲತೆಗಳು ರೈತರ ಮೇಲೆ ನಡೆಯುತ್ತಿದೆ.ಇದು ನಿಜಕ್ಕೂ ಅಕ್ಷಮ್ಯ ಅಪರಾಧ.
ಭೂಮಿಪುತ್ರ
ಸಿ.ಚಂದನ್ ಗೌಡ,
ರಾಜ್ಯಾಧ್ಯಕ್ಷ,
ರೈತ ಕಲ್ಯಾ ಸಂಘ