ನಂದಿನಿ ಮೈಸೂರು
ನವಂಬರ್ 7ರಂದು ದೆಹಲಿಯಲ್ಲಿ ಅಹಿಂದ ಪ್ರತಿಭಟನೆಗೆ ನಿರ್ಧಾರ ಜಲದರ್ಶಿನಿಯಲ್ಲಿ ಸಿದ್ದತೆ ಕುರಿತು ದುಂಡು ಮೇಜಿನ ಸಭೆ.
ಮೈಸೂರು: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲು ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ ಖಂಡಿಸಿ ನವಂಬರ್ 7 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಶೋಷಿತ ಸಮುದಾಯಗಳ ಅಹಿಂದ ಮುಖಂಡರ ಸಭೆ ನಿರ್ಣಯ ಕೈಗೊಂಡಿದೆ.
ಮೈಸೂರಿನ ಜಲ ದರ್ಶಿನಿ ಅತಿಥಿ ಗೃಹದಲ್ಲಿ ನಡೆದ ತುಂಡು ಮೇಜಿನ ಸಭೆಯಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ನಡೆಸಲಾಯಿತು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದು, ಇದನ್ನು ತಡೆಯಲು ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ದೆಹಲಿಯ ರಾಮಲೀಲಾ ಮೈದಾನದಲ್ಲಿ ನವಂಬರ್ 7ರಂದು ಪ್ರತಿಭಟನೆ ನಡೆಸಲಿದ್ದು, ಸಾಹಿತಿ ಬಂಜಗೆರೆ ಜಯಪ್ರಕಾಶ್,ನಾ.ದಿವಾಕರ್,ದಿನೇಶ್ ಅಮಿನ್ ಮಟ್ಟು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
ಕೋಮುವಾದಿ ಹಾಗೂ ಜಾತಿವಾದಿಗಳ ಗಟ್ಟಿ ಧ್ವನಿಯಾಗಿರುವ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿದರೆ ಕೋಮುವಾದ ಮತ್ತು ಜಾತಿವಾದವನ್ನು ವ್ಯಾಪಕವಾಗಿ ಹರಡ ಬಹುದು ಎಂಬ ದುರುದ್ದೇಶದಿಂದ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ತಂತ್ರಗಾರಿಕೆಗೆ ರೂಪಿಸಿದೆ ಎಂದು ಆರೋಪಿಸಿದ್ದರು.
ಕೇಂದ್ರದ ತನಿಖಾ ಸಂಸ್ಥೆಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೈ ಗೊಂಬೆಯಾಗಿ ಕೆಲಸ ಮಾಡುತ್ತಿವೆ. ಇವರ ಅಣತಿಯಂತೆ ತನಿಖೆ ಸಂಸ್ಥೆಗಳು ಸಿದ್ದರಾಮಯ್ಯ ವಿರುದ್ಧ ತನಿಖಾಸ್ತ್ರ ಪ್ರಯೋಗಿಸುತ್ತಿದೆ ಎಂದು ಆಪಾದಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಬೇಕು ಎಂದು ಮನವಿ ಮಾಡಿದರು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ನೂರಾರು ಕೋಟಿ ಆಸ್ತಿ ಮಾಡಿದ್ದರೂ, ಅವರ ಬಗ್ಗೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳ ಗಮನ ಹರಿಸುತ್ತಿಲ್ಲ. ಎರಡು ಪಕ್ಷಗಳು ಏನೇ ರಾಜಕೀಯ ತಂತ್ರಗಾರಿಕೆ ಮಾಡಿದರೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಹೇಳಿದರು.
ಮಾಜಿ ಸಚಿವ ಶಿವಣ್ಣ, ಸಮಾಜಸೇವಕರಾದ ರಘುರಾಂ ವಾಜಪೇಯಿ , ಉಪ್ಪಾರ ಸಮುದಾಯದ ಮುಖಂಡ ಯೋಗೇಶ್ ಉಪ್ಪಾರ್, ಸವಿತಾ ಸಮಾಜದ ಮುಖಂಡ ಎನ್.ಆರ್. ನಾಗೇಶ್, ಕುರುಬರ ಸಂಘದ ಮುಖಂಡ ಶಿವಪ್ಪ ಕೋಟೆ, ವಿಶ್ವಕರ್ಮ ಸಮುದಾಯದ ಮುಖಂಡ ಮಾಗ್ಗಣ್ಣಾಚಾರ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಹಾಜರಿದ್ದರು.