ಗುರುದೇವ ಅಕಾಡೆಮಿ ಆಫ್ ಫೈನ್‌ಆರ್ಟ್ ವತಿಯಿಂದ ಚೇತನೋತ್ಸವ-೨೦೨೬ ಶಾಸ್ತ್ರೀಯ ನೃತ್ಯಪ್ರದರ್ಶನ ಕಾರ್ಯಕ್ರಮ

ನಂದಿನಿ ಮನುಪ್ರಸಾದ್ ನಾಯಕ್

 

ಮೈಸೂರು:- ವೇಗವಾಗಿ ಬೆಳೆಯುವತ್ತಿರುವ ಪ್ರಪಂಚದಲ್ಲಿ ತಾಂತ್ರಿಕತೆಯನ್ನು ಕಂಡ ಮನುಷ್ಯ ಮಾನಸಿಕ ನೆಮ್ಮದಿಯ ಹುಡುಕಾಟದಲ್ಲಿದ್ದಾನೆ. ಆನತ ಮಾನಸಿಕ ತೊಳಲಾಟವನ್ನು ಮಣಿಸುವ ಶಕ್ತಿ ಭರತನಾಟ್ಯಕ್ಕಿದೆ ಎಂದು ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಡಾ.ಎನ್.ಶ್ರೀನಿವಾಸನ್ ಅಭಿಪ್ರಾಯಪಟ್ಟರು.

ಮೈಸೂರಿನ ಜಗನ್ಮೋಹನ ಅರಮನೆ ಆವರಣದಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್‌ಆರ್ಟ್ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಚೇತನೋತ್ಸವ-೨೦೨೬ ಶಾಸ್ತ್ರೀಯ ನೃತ್ಯಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಯ ಜಗದೊಳಗೆ ನಮ್ಮ ದೇಶದ ಸಂಸ್ಕೃತಿ, ಪರಂಪರೆಯನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಲು ಶಾಸ್ತ್ರೀಯ ನೃತ್ಯ ಕಲೆಗಳು ಉತ್ತಮ ಆಯ್ಕೆಯಾಗಿದೆ. ಇದು ರೋಗಕ್ಕೆ ಮದ್ದಾಗಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ಆಧ್ಯಾತ್ಮಿಕ ಹಿನ್ನೆಲೆ, ಸಾಂಪ್ರದಾಯಿಕ ಪರಂಪರೆ ಒಳಗೊಂಡ ಶಿಕ್ಷಣ ನೀಡುವಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್‌ಆರ್ಟ್ ವಿಶೇಷ ಕಾಳಜಿ ವಹಿಸುತ್ತಿದೆ. ಇವರ ನಿರಂತರ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಈ ಹಿಂದೆ ಮಕ್ಕಳನ್ನು, ತಮ್ಮ ಹಿರಿಯರ ಹೋಲಿಕೆ ಅನುಗುಣವಾಗಿ ಗುರುತಿಸುತ್ತಿದ್ದೆವು. ಈಗ ಕಾಲ ಬದಲಾಗಿದೆ. ಮೊಬೈಲ್‌ನಂತೆ ಮಕ್ಕಳು ಎನ್ನುವ ಕಾಲಘಟ್ಟಕ್ಕೆ ಬಂದು ನಿಂತಿದ್ದೇವೆ. ಅತೀ ವೇಗದ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಈ ದೇಶದ ಪರಂಪರೆ, ಸಂಸ್ಕೃತಿ, ಐತಿಹಾಸಿಕತೆ ಹಿನ್ನೆಲೆಯನ್ನು ಮೈಗೂಡಿಸಿಕೊಂಡು, ಡಿಜಿಟಲ್ ಜಗತ್ತಿಗೆ ತನ್ನ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಯಶಸ್ವಿಯಾಗಬೇಕಾದರೆ ಸಹಜ ಶಿಕ್ಷಣದೊಂದಿಗೆ ಕೌಶಲ್ಯ ಇರಬೇಕು ಎಂದು ಹೇಳುತ್ತಾರೆ. ಆದರೆ ಅವರಲ್ಲಿ ಕೌಶಲದೊಂದಿಗೆ ಸಂಸ್ಕೃತಿಯನ್ನು ಜೊತೆಯಾಗಿಸಿ ಮುಂದೆ ಸಾಗಿದಾಗ ಯಶಸ್ಸು ತಮ್ಮದಾಗುತ್ತದೆ ಎಂದು ಕಿವಿಮಾತು ಹೇಳಿದರು.
ಈ ವೇಳೆ ಗುರುದೇವ ಅಕಾಡೆಮಿ ಆಫ್ ಫೈನ್‌ಆರ್ಟ್ ವತಿಯಿಂದ ಸಮಾಜ ಸೇವಕ ಅಚ್ಯುತ ರಾಮಪ್ರಸಾದ ಕಾಮತ್ ಅವರಿಗೆ ಗುರುದೇವ ಪ್ರಶಸ್ತಿ; ನೀಡಿ ಗೌರವಿಸಲಾಯಿತು.
ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಸ್ವಾಮಿ, ವಕೀಲ ವಿಶ್ವನಾಥ್ ದೇವಸ್ಯ, ವ್ಯವಸ್ಥಾಪಕ ನಿರ್ದೇಶಕ ಪಿ.ಎಂ.ರಾಧಾಕೃಷ್ಣ, ಕಲಾತ್ಮಕ ನಿರ್ದೇಶಕರಾದ ಡಾ.ಚೇತನ ರಾಧಾಕೃಷ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *