ನಂದಿನಿ ಮೈಸೂರು
ಮೈಸೂರು: ಕಾನೂನು ಬದ್ಧವಾಗಿ ಜಮೀನು ಮಂಜೂರಾಗಿರುವ ಬಗರ್ ಹುಕುಂ ಸಾಗುವಳಿದಾರರನ್ನು ಗುರುತಿಸಿ, ಕೂಡಲೇ ಅವರುಗಳಿಗೆ ಸಾಗುವಳಿ ಚೀಟಿ ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಒತ್ತಾಯಿಸಿದ್ದಾರೆ.
ಅರ್ಹ ಬಗರ್‍ಹುಕುಂ ಸಾಗುವಳಿದಾರರಿಗೆ ತಕ್ಷಣ ಸಾಗುವಳಿ ಚೀಟಿ ನೀಡಬೇಕೆಂದು ಹೈಕೋರ್ಟ್ ಈಗಾಗಲೇ ಸೂಚನೆ ನೀಡಿದೆಯಾದರೂ,ಇದುವರೆವಿಗೂ ಸಾಕಷ್ಟು ರೈತರು ಸಾಗುವಳಿ ಚೀಟಿ ದೊರೆಯದೇ ದಿನಂಪ್ರತಿ ಸರ್ಕಾರಿ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ, ಸಾಗುವಳಿ ಚೀಟಿ ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದ್ದಾರೆ.
ಅಧಿಕಾರಿಗಳು ಬಗರ್‍ಹುಕುಂ ಸಾಗುವಳಿದಾರರು ವಾಸವಿರುವಂತಹ ಎಲ್ಲಾ ಹಳ್ಳಿಗಳಿಗೆ ತೆರಳಿ ಪರಿಶೀಲನೆ ನಡೆಸಿದರೇ, ಸಾಗುವಳಿ ಚೀಟಿ ವಿತರಣೆ ಸಮಸ್ಯೆ ಶೀಘ್ರವಾಗಿ ಬಗೆ ಹರಿಯಲಿದೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ. ಅನ್ನದಾತರನ್ನು ಕಡೆಗಣಿಸದೇ ತಕ್ಷಣ ಈ ಸಮಸ್ಯೆ ಬಗೆಹರಿಸಬೇಕೆಂದು ಚಂದನ್ ಗೌಡ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.