ನಂದಿನಿ ಮನುಪ್ರಸಾದ್ ನಾಯಕ್

ಮಹಾದಾನಿಗಳಿಗೆ ಮಹಾಹಬ್ಬದಲ್ಲಿ ಗೌರವ ಸನ್ಮಾನ
ಮೈಸೂರು: ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ 100ಕ್ಕೂ ಹೆಚ್ಚು ಮಂದಿಯೂ ಸೇರಿ 250ಕ್ಕೂ ಹೆಚ್ಚು ರಕ್ತದಾನಿಗಳನ್ನು ಸತ್ಕರಿಸಿ ಗೌರವಿಸುವ ಮೂಲಕ ರಕ್ತದಾನಿಗಳ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಸಂಭ್ರಮಿಸಲಾಯಿತು.
ಲಯನ್ಸ್ ಬ್ಲಡ್ ಸೆಂಟ್ ಜೀವಧಾರ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್, ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದಲ್ಲಿ ನಗರದ ಜೆಕೆ ಮೈದಾನದ ಆಡಿಟೋರಿಯಂ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಮಂದಿ ರಕ್ತದಾನಿಗಳು ಭಾಗವಹಿಸಿ ಸಂಭ್ರಮಿಸಿದರು. ಕಾರ್ಯಕ್ರಮದ ಸಾನಿದ್ಯವಹಿಸಿ ಎಲ್ಲರನ್ನೂ ಸನ್ಮಾನಿಸಿದ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮ ಮತ್ತು ಬೇಬಿಮಠದ ಪೀಠಾಧಿಪತಿ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಅನ್ನದಾಸೋಹಿಗಳಿಗೆ ದಾಸೋಹ ದಿನ ಎಂದು ಮಾಡುತ್ತಿದ್ದಿರಿ. ಅಂತೆಯೇ ರಕ್ತ ನೀಡುವವರಿಗೆ ರಕ್ತದಾನಿಗಳ ದಿನ ಆಚರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಒಂದು ಜೀವ ಜೀವಂತವಾಗಿ ಇರಲು ರಕ್ತ ಅಷ್ಟೇ ಮುಖ್ಯವಾಗುತ್ತದೆ. ಇಂದು ಅನ್ನದಾನ ಶ್ರೇಷ್ಠದಾನ ಮಹಾದಾನ ಎನ್ನುತ್ತಾರೆ, ಅದು ನಿಜವೂ ಹೌದು. ನಮ್ಮ ಹೃದಯ ಒಂದು ಹನಿ ರಕ್ತ ಪಡೆದು ಅದನ್ನು ಶುದ್ಧೀಖಕರಿಸಿ ನಮ್ಮ ಎಲ್ಲಾ ಅಂಗಗಳಿಗೂ ಹಂಚಿಕೆ ಮಾಡುತ್ತದೆ. ಅಂತಹ ರಕ್ತವನ್ನು ಹೊರಗಿನಿಂದ ನೀಡುವ ರಕ್ತದಾನಿಗಳು ನಿಜವಾದ ಹೃದಯವಂತರಾಗಿದ್ದಾರೆ ಎಂದರು.
ಬಹುಶಃ ಅನೇಕ ಟ್ರಸ್ಟ್ ಗಳು ನಮ್ಮಲ್ಲಿದ್ದು ಅವೆಲ್ಲವೂ ಹಣ ಹಾಗೂ ಹೆಸರು ಮಾಡುತ್ತಿವೆ. ಆದರೆ, ಸೇವೆ ಮಾಡುವ ನಿಟ್ಟಿನಲ್ಲಿ ಲಯನ್ಸ್ ಜೀವಧಾರ, ಕೆಎಂಪಿಕೆ ಟ್ರಸ್ಟ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಪಂಚದಲ್ಲೇ ಹಂಚಿ ತಿನ್ನುವ ಸಂಸ್ಕೃತಿಯನ್ನು ಸನಾತನ ಧರ್ಮ ಹೇಳಿಕೊಟ್ಟಿದೆ. ನಮ್ಮ ದೇಶದಲ್ಲಿ ಸನಾತನ ಧರ್ಮದಲ್ಲಿ ವಿಶಾಲ ಮನೋಭಾವನೆ ಹೊಂದಿದೆ. ಪ್ರಧಾನಿ ನರೇಂದ್ರಮೋದಿಯವರು ಪ್ರಪಂಚದ ಆರೋಗ್ಯಕ್ಕಾಗಿ ವಿಶ್ವ ಯೋಗ ದಿನವನ್ನು ಆಚರಿಸುವ ಮೂಲಕ ಎಲ್ಲರಿಗೂ ಆರೋಗ್ಯದ ಜಾಗೃತಿ ಮೂಡಿಸಿದರು. ಹೀಗೆ ವಿಶ್ವಕ್ಕೆ ಕಾಳಜಿ ವ್ಯಕ್ತ ಪಡಿಸುವ ಯಾವುದಾದರೂ ದೇಶ ಇದ್ದರೆ ಅದು ನಮ್ಮದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ನಾನು 18ವರ್ಷಕ್ಕೂ ಮೊದಲೇ ನಮ್ಮಅಜ್ಜಿಗೆ ಮೊದಲನೇ ಬಾರಿಗೆ ರಕ್ತದಾನ ಮಾಡಿದ್ದೆ, ಅದಾದ ಬಳಿಕ ಕಾಲೇಜು ಸಮಯದಲ್ಲಿ 35ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದೇನೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಜೀವಾಧಾರ ಗಿರೀಶ್ ಹೆಸರು ಚಿರಪರಿಚಿತ, ಗಿರೀಶ್ ಎಂದರೆ ನಮಗೆ ತಿಳಿಯುವುದಿಲ್ಲ. ಅಷ್ಟರಮಟ್ಟಿಗೆ ಅವರು ರಕ್ತದಾನದ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಮನೋಜ್, ವಿಕ್ರಂ ಅಯ್ಯಂಗಾರ್ ಸಹ ಕೇವಲ ರಕ್ತದಾನ ಕಾರ್ಯಕ್ರಮ ಮಾತ್ರವಲ್ಲದೆ, ಹೊದಿಕೆ ವಿತರಣೆ, ಆಹಾರ ವಿತರಣೆ, ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹೀಗೆ ಸಮಾಜ್ ಕಟ್ಟಕಡೆಯ ವ್ಯಕ್ತಿಗೂ ಸೇವೆ ನೀಡುತ್ತಾ ಬಂದಿದ್ದಾರೆಂದು ಸ್ಮರಿಸಿದರು.
ಇವರೆಲ್ಲರಾ ಸೇವಾ ಕಾರ್ಯ ಒಮ್ಮೊಮ್ಮೆ ನನಗೂ ಪ್ರೇರಣೆ ಆಗುತ್ತದೆ. ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಸಮಾಜದ ಪರವಾಗಿ ಇವರ ಕಾರ್ಯ ನೋಡಿ ನಾನು ಶಾಸಕನಾಗಿ ಎನಾದರೂ ಮಾಡಬೇಕೆಂಬ ಹಂಬಲ ಹೆಚ್ಚುತ್ತದೆ. ಅದೇ ಕಾರಣಕ್ಕಾಗಿ ಅನೇಕ ಬಾರಿ ಇವರಿಗೆ ನನ್ನಿಂದ ಎನಾದರೂ ಸಹಾಯ ಆಗಬೇಕಿದ್ದರೆ ಕೇಳಿ ಎಂದಿದ್ದೇನೆಂದರು.
ಸ್ವಾಮೀಜಿಗಳು ಹೇಳಿದಂತೆ ನೀವೆಲ್ಲ ಹೃದಯವಂತರು, ಇದೊಂದು ಅರ್ಥಪೂರ್ಣ ಕಾರ್ಯಕ್ರಮ, ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯವಾಗಿವೆ. ಅನೇಕ ಬಾರಿ ರಕ್ತದಾನ ಮಾಡಿರುವ ನಿಮ್ಮಂತಹವರನ್ನು ಸನ್ಮಾನಿಸಿ ನಿಮ್ಮನ್ನು ಮತ್ತಷ್ಟು ಪ್ರೇರೆಪಿಸುವ ಕಾರ್ಯ ಶ್ಲಾಘನೀಯ. ಅದೇ ಕಾರಣಕ್ಕೆ ದಾವಣಗೆರೆ ಉಪಚುನಾವಣೆ ನಡುವೆಯೂ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ನಿಮ್ಮೆಲ್ಲರ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇನೆಂದರು.
ನಗರ ಪೊಲೀಸ್ ಡಿಸಿಪಿ ಕೆ.ಎಸ್.ಸುಂದರ್ ರಾಜ್, ಕಿರುತೆರೆ ನಟಿ ಮೀನಾಕ್ಷಿ, 310 ಬಾರಿ ರಕ್ತದಾನ ಮಾಡಿದ ವಿ.ಭೂಪೇಂದ್ರನ್, 275 ಬಾರಿ ರಕ್ತದಾನ ಮಾಡಿದ ಎಸ್.ಭಾಸ್ಕರ್ ರಾವ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶೇಷ ಅತಿಥಿಗಳಾದ ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ ಸಂಸ್ಥಾಪಕ ಟ್ರಸ್ಟಿ ಲಯನ್ ಮನೋಜ್ ಕುಮಾರ್, ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ.ಗಿರೀಶ್, ಎಕಿಕ್ಯೂಟಿವ್ ಟ್ರಸ್ಟಿ ಸಿ.ಜೆ.ಲಯನ್ ಮುತ್ತಣ್ಣ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕರಾದ ದೇವೇಂದ್ರ ಕುಮಾರ್, ಆನಂದ್ ಮಂದೂತ್ ಇನ್ನಿತರರು ಉಪಸ್ಥಿತರಿದ್ದರು.
ಪ್ರತ್ಯಕ್ಷ, ಪರೋಕ್ಷವಾಗಿ ರಕ್ತದಾನಿಗಳ ಹಬ್ಬ ಆಚರಣೆಗೆ ಸಹಕಾರಿಸಿದ ಎಲ್ಲರಿಗೂ ಅಭಿನಂದನೆಗಳು. ಸಣ್ಣ ವಸ್ತು ಕೇಳಿದರೂ ಕೊಡದ ಕಾಲಘಟ್ಟದಲ್ಲಿ ಇಷ್ಟೊಂದು ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ. ಅಂತಹವರ ಸನ್ಮಾನಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ.
– ಎಸ್.ಇ.ಗಿರೀಶ್, ಮ್ಯಾನೇಜಿಂಗ್ ಟ್ರಸ್ಟಿ ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ